ಸುರತ್ಕಲ್: ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಚೀಫ್ ಮ್ಯಾನೇಜರ್, ಸುರತ್ಕಲ್ ಬಂಟರ ಸಂಘದ ಮಾಜೀ ಉಪಾಧ್ಯಕ್ಷ ನವೀನ್ ಕುಮಾರ್ ಶೆಟ್ಟಿ ಪಡ್ರೆ ಸಮಾಜದ ಮೇಲೆ ಗೌರವ ಅಭಿಮಾನ ಇಟ್ಟು ಕೆಲಸ ಮಾಡಿದವರು. ಸರಳತೆ, ಸೌಜನ್ಯ ಜೊತೆಗೆ ನೇರ ನಡೆನುಡಿಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಸುರತ್ಕಲ್ ಬಂಟರ ಸಂಘದ ಬೆಳವಣಿಗೆಗೆ ಮಹತ್ವದ ಸೇವೆ ಸಲ್ಲಿಸುವುದರ ಜೊತೆಗೆ ಸಮಾಜ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾಗಿ ಬದುಕಿದವರು ಎಂದು ಸುರತ್ಕಲ್ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಕೆ. ರೋಹಿತಾಕ್ಷ ರೈ ತಿಳಿಸಿದರು.
ಸುರತ್ಕಲ್ ಬಂಟರ ಸಂಘದ ವತಿಯಿಂದ ಬಂಟರ ಭವನದಲ್ಲಿ ನವೀನ್ ಕುಮಾರ್ ಶೆಟ್ಟಿ ಪಡ್ರೆ ಅವರಿಗೆ ನಡೆದ ಶ್ರದ್ದಾಂಜಲಿ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪಡ್ರೆ ನವೀನ್ ಶೆಟ್ಟಿ ಬ್ಯಾಂಕಿಂಗ್ ಕ್ಷೇತ್ರದ ಜೊತೆಗೆ ಸಮಾಜದ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡವರು. 2001ರಲ್ಲಿ ಸುರತ್ಕಲ್ ಬಂಟರ ಸಂಘದ ಆಶ್ರಯದಲ್ಲಿ ನಡೆದ ವಿಶ್ವ ಬಂಟರ ಸಾಂಸ್ಕೃತಿಕ ಕಲೋತ್ಸವದಲ್ಲಿ ನವೀನ್ ಶೆಟ್ಟಿ ಸಂಚಾಲಕರಾಗಿ ದುಡಿದಿರುವುದನ್ನು ಮರೆಯಲು ಸಾಧ್ಯವಿಲ್ಲ. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ನವೀನ್ ಶೆಟ್ಟಿಯವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಮಾಜೀ ಅಧ್ಯಕ್ಷ ಎಂ. ದೇವಾನಂದ ಶೆಟ್ಟಿ ತಿಳಿಸಿದರು.
ಉತ್ತಮ ಕೆಲಸ ಮಾಡಿದಾಗ ಬೆನ್ನು ತಟ್ಟಿ ಪ್ರೋತ್ಸಾಹ ನೀಡುವುದು ನವೀನ್ ಶೆಟ್ಟಿಯವರ ದೊಡ್ಡ ಗುಣ. ಅವರ ಗುಣ ನಡತೆ ಇತರರಿಗೆ ಮಾದರಿಯಾಗಿದೆ ಎಂದು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ತಿಳಿಸಿದರು.
ಸುರತ್ಕಲ್ ಬಂಟರ ಸಂಘಕ್ಕೆ ಅತೀ ಹೆಚ್ಚು ಸದಸ್ಯರನ್ನು ನೋಂದಾಯಿಸುವ ಮೂಲಕ ಸಂಘವನ್ನು ಬಲಾಡ್ಯ ಗೊಳಿಸುವಲ್ಲಿ ನವೀನ್ ಶೆಟ್ಟಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಪೆರ್ಮುದೆ ತಿಳಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಸಂಘದ ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಸುರತ್ಕಲ್, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಜೊತೆ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಕುಡುಂಬೂರು, ಕ್ರೀಡಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಕಾಟಿಪಳ್ಳ, ಮಾಜೀ ಉಪಾಧ್ಯಕ್ಷ ಮಹಾಬಲ ರೈ, ಮಾಜೀ ಕಾರ್ಯದರ್ಶಿ ದಿವಾಕರ ಸಾಮಾನಿ ಚೇಳ್ಯಾರ್ ಗುತ್ತು, ಸೀತಾರಾಮ ರೈ ಎಂಆರ್ ಪಿಎಲ್, ಮುಕ್ತಾನಂದ ಮೇಲಾಂಟ, ಪಡ್ರೆ ಬಾಬು ಶೆಟ್ಟಿ, ಜಗನ್ನಾಥ ಅತ್ತಾರ್ ಕೊಡಿಪಾಡಿ, ಮೇಬೈಲ್ ಸದಾಶಿವ ಶೆಟ್ಟಿ, ಮಹಿಳಾ ವೇದಿಕೆಯ ಅಧ್ಯೆಕ್ಷೆ ಚಿತ್ರಾ ಜೆ ಶೆಟ್ಟಿ, ಮಾಜೀ ಕಾರ್ಯದರ್ಶಿ ವಿಜಯಭಾರತಿ ಶೆಟ್ಟಿ, ಜೊತೆ ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ ಮಹಿಳಾ ವೇದಿಕೆಯ ಮಾಜೀ ಉಪಾಧ್ಯೆಕ್ಷೆ ಸುಜಾತ ಶೆಟ್ಟಿ ಹೊಸಬೆಟ್ಟು, ಕಾರ್ಯಕಾರಿ ಸಮಿರಿ ಸದಸ್ಯೆ ಸುಜಾತ ಶೆಟ್ಟಿ ಮೊದಲಾದವರು ನುಡಿನಮನ ಸಲ್ಲಿಸಿದರು. ಉಲ್ಲಾಸ್ ಶೆಟ್ಟಿ ಪೆರ್ಮುದೆ ಕಾರ್ಯಕ್ರಮ ನಿರ್ವಹಿಸಿದರು.