ಸುರತ್ಕಲ್: ಸೂರಿಂಜೆಯಿಂದ ಕಾಟಿಪಳ್ಳಕ್ಕೆ ರಿಕ್ಷಾದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ನಗ ನಗದು ಇರಿಸಿದ್ದ ಪರ್ಸನ್ನು ರಿಕ್ಷಾದಲ್ಲೇ ಬಿಟ್ಟು ಹೋಗಿದ್ದು ರಿಕ್ಷಾ ಚಾಲಕರು ಪರ್ಸ್ ನಲ್ಲಿದ್ದ ಮಹಿಳೆಯ ಫೊಟೋವನ್ನು ಆಧರಿಸಿ ಅವರ ಮನೆಯನ್ನು ಹುಡುಕಿ ಬಳಿಕ ಸುರತ್ಕಲ್ ಪೋಲೀಸ್ ಠಾಣೆಯಲ್ಲಿ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.
ನಾಲ್ಕು ದಿನಗಳ ಹಿಂದೆ ಸೂರಿಂಜೆ ನಿವಾಸಿ ಪುಷ್ಪ ಮೂಲ್ಯ ಎಂಬವರು ಸೂರಿಂಜೆಯಿಂದ ಕಾಟಿಪಳ್ಳಕ್ಕೆ ತೆರಳಲು ಮನೋಜ್ ಶೆಟ್ಟಿ ಚೊಕ್ಕಬೆಟ್ಟು ಎಂಬವರ ರಿಕ್ಷಾ ಏರಿದ್ದರು. ಇಳಿಯುವಾಗ ನಗ ನಗದು ತುಂಬಿದ್ದ ಪರ್ಸನ್ನು ರಿಕ್ಷಾದಲ್ಲೇ ಬಿಟ್ಟು ಹೋಗಿದ್ದರು. ಇದು ಗಮನಕ್ಕೆ ಬಂದ ಬಳಿಕ ರಿಕ್ಷಾ ಚಾಲಕ ಮಹಿಳೆಯನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ.
ಬಳಿಕ ಈ ವಿಚಾರವನ್ನು ಮನೋಜ್ ಶೆಟ್ಟಿ ಜಯಕರ್ನಾಟಕ ರಿಕ್ಷಾಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ಶೇಖರ ಶೆಟ್ಟಿ ಎಂಬವರ ಗಮನಕ್ಕೆ ತಂದರು. ಶೇಖರ ಶೆಟ್ಟಿ ಅವರು ಪರ್ಸಲ್ಲಿ ದೊರೆತ ಫೋಟೋವನ್ನು ಆಧರಿಸಿ ಮಹಿಳೆ ರಿಕ್ಷಾ ಹತ್ತಿದ ಸೂರಿಂಜೆ ಪೇಟೆಯಲ್ಲಿ ಮಹಿಳೆಯ ಭಾವಚಿತ್ರ ತೋರಿಸಿದಾಗ ಅವರ ಮನೆ ಪತ್ತೆಯಾಯಿತು.
ಬಳಿಕ ನಗನಗದು ಕಳೆದು ಕೊಂಡ ಮಹಿಳೆಯನ್ನು ಸುರತ್ಕಲ್ ಠಾಣೆಗೆ ಕರೆಯಿಸಿ ಇನ್ಸ್ ಪೆಕ್ಟರ್ ಚಂದ್ರಪ್ಪ ಮತ್ತು ರಿಕ್ಷಾ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಮಹಿಳೆಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಯಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ವಲಯಾಧ್ಯಕ್ಷ ವೈ.ರಾಘವೇಂದ್ರ ರಾವ್, ಅಧ್ಯಕ್ಷ ಬಿ.ಕೆ.ಆರ್, ಮಾಜಿ ಅಧ್ಯಕ್ಷ ಶೇಖರ ಶೆಟ್ಟಿ, ದಯಾನಂದ ಶೆಟ್ಟಿ, ಅಪ್ಪು ಸ್ವಾಮಿ, ಕೃಷ್ಣ ಅಂಚನ್, ದೀಪಕ್ ಮೊದಲಾದವರು ಉಪಸ್ಥಿತರಿದ್ದರು.