ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ 2022 ಟ್ರಸ್ಟಿನ ಗೌರಾವಾಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ ಇವರ ಮಾರ್ಗದರ್ಶ ಮತ್ತು ಶಶಿಧರ ಬಿ. ಶೆಟ್ಟಿ ಬರೋಡಾ ಇವರ ಅಧ್ಯಕ್ಷತೆಯಲ್ಲಿ ಮೇ 29 ರಂದು ಭಾನುವಾರ ಬೆಳಿಗ್ಗೆ 8 ರಿಂದ ರಾತ್ರಿ 12 ಗಂಟೆಯವರೆಗೆ ಅಡ್ಯಾರ್ ಗಾರ್ಡನ್ ನಲ್ಲಿ ಜರಗಲಿದೆ.
ಅಡ್ಯಾರ್ ಗಾರ್ಡನ್ ನಲ್ಲಿ ಡಾ. ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ಪಟ್ಲ ಸಂಭ್ರಮ ಕಾರ್ಯಕ್ರಮ ಜರಗಲಿದೆ. ಬೆಳಿಗ್ಗೆ 8 ಗಂಟೆಗೆ ಚೌಕಿಪೂಜೆ, ಯಕ್ಷದಿಬ್ಬಣ, ಪೂರ್ವರಂಗ, ಅಬ್ಬರತಾಳ, 9 ಗಂಟೆಗೆ ಚೆಂಡೆ ಜುಗುಲ್ ಬಂಧಿ- ಸ್ಪರ್ಧಾತ್ಮಕ ಪೀಠಿಕೆ ಸ್ತ್ರೀ ವೇಷ, ಬಳಿಕ 9.45ಕ್ಕೆ ಉದ್ಘಾಟನಾ ಸಮಾರಂಭ ಜರಗಲಿದೆ. ಶ್ರೀ ಕ್ಷೇತ್ರ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮುಂಬೈ ಹೇರಂಬ ಕೆಮಿಕಲ್ ಇಂಡಸ್ಟ್ರೀಸ್ ನ ನಿರ್ದೇಶಕ ಸದಾಶಿವ ಶೆಟ್ಟಿ ಕನ್ಯಾನ ಶುಭಶಂಸನೆ ಮಾಡಲಿದ್ದಾರೆ. ಗುಜರಾತ್ ಉದ್ಯಮಿ ಶಶಿಧರ ಬಿ ಶೆಟ್ಟಿ ಬರೋಡ ಸಂಭ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಿಎ ದಿವಾಕರ ರಾವ್ ಪಟ್ಲ ಸಂಭ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಆರೋಗ್ಯ ಶಿಬಿರದ ಉದ್ಘಾಟನೆಯನ್ನು ಡಾ ಕೃಷ್ಣ ಪ್ರಸಾದ್ ಕೂಡ್ಲು ಮಾಡಲಿದ್ದಾರೆ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಡಾ. ಎಂ ಮೋಹನ್ ಆಳ್ವ, ಡಾ ಸುಧಾಕರ ಶೆಟ್ಟಿ, ಕೃಷ್ಣ ಜೆ ಪಾಲೇಮಾರ್, ಅನಿಲ್ ಕುಮಾರ್ ಎಸ್ ಎಸ್, ಯೋಗೀಂದ್ರ ಭಟ್, ರವಿಶಂಕರ ಶೆಟ್ಟಿ ಬಡಾಜೆ, ಡಾ ರವಿ ಶೆಟ್ಟಿ ಮೂಡಂಬೈಲ್, ಮಾರಣ ಕಟ್ಟೆ ಕೃಷ್ಣಮೂರ್ತಿ, ಶಶೀಂದ್ರ ಕುಮಾರ್, ವೇಣುಗೋಪಾಲ ಶೆಟ್ಟಿ ಮುಂಬಯಿ, ಜಯರಾಮ ಶೇಖ, ಸುಧಾಕರ ಎಸ್ ಪೂಂಜ ಸುರತ್ಕಲ್, ಅಡ್ಯಾರ್ ಮಾಧವ ನಾಯ್ಕ್ , ವಿಜಯಕುಮಾರ್ ಅಮೀನ್ ಭಾಗವಹಿಸಲಿದ್ದಾರೆ.
ಮಾಂಬಾಡಿಗೆ ಪಟ್ಲ ಪ್ರಶಸ್ತಿ 2022: ಸಮಾರಂಭದಲ್ಲಿ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಒಂದು ಲಕ್ಷ ರೂಪಾಯಿ ನಗದಿನೊಂದಿಗೆ ಪಟ್ಲ ಪ್ರಶಸ್ತಿ 2022 ನೀಡಿ ಗೌರವಿಸಲಾಗುವುದು. ಸಮಾರಂಭದಲ್ಲಿ ಶರತ್ ಶೆಟ್ಟಿ ಪಡುಪಳ್ಳಿ ರಚಿಸಿರುವ "ಯಕ್ಷಾಂಗಣ ಧ್ರುವತಾರೆ ಪಟ್ಲ" ಕೃತಿ ಬಿಡುಗಡೆಗೊಳ್ಳಲಿದೆ. ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಧ್ರುವ ಪ್ರಭ ಸೇವಾಯಾನದ ಮೆಲುಕು ಕೃತಿ ಬಿಡುಗಡೆಯಾಗಲಿದೆ.
ಅದೇ ರೀತಿ ಭಾರತೀಯ ಭೂ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿ, ಮುಂದಿನ ತಿಂಗಳು ಮೇಜರ್ ಆಗಿ ಪದೋನ್ನತಿ ಹೊಂದುತ್ತಿರುವ ಭರತ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು.
ಹತ್ತು ಮಂದಿಗೆ ಕಲಾ ಗೌರವ: ಪದ್ಮನಾಭ ಉಪಾಧ್ಯ, ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ, ಅಜ್ರಿ ಗೋಪಾಲ ಗಾಣಿಗ, ಯೋಗಾಕ್ಷಿ ಗಣೇಶ್ ಗುಜರನ್, ಮಾಧವ ಭಂಡಾರಿ ಕುಳಾಯಿ, ಕಲ್ಲುಗುಂಡಿ ಕೊರಗಪ್ಪ ಮಣಿಯಾಣಿ, ಉಜಿರೆ ನಾರಾಯಣ ಪೂಜಾರಿ, ವಿಜಯಕುಮಾರ್ ಶೆಟ್ಟಿ ಮೊಯ್ಲೊಟ್ಟು, ಅರೆಹೊಳೆ ಸಂಜೀವ ಶೆಟ್ಟಿ, ಮಧುಕರ ಬೋಳೂರು ಮೊದಲಾದವರು ತಲಾ 20 ಸಾವಿರ ನಗದಿನೊಂದಿಗೆ ಯಕ್ಷಧ್ರುವ ಕಲಾ ಗೌರವ 2022 ಪಡೆಯಲಿದ್ದಾರೆ.
ಸಂಜೆ 6 ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಜರಗಲಿದೆ.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮತ್ತು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕನ್ಯಾನ ಸದಾಶಿವ ಶೆಟ್ಟಿ ಶುಭಶಂಸನೆ, ಅಧ್ಯಕ್ಷತೆಯನ್ನು ಶಶಿಧರ ಬಿ ಶೆಟ್ಟಿ ವಹಿಸಲಿದ್ದಾರೆ.
ಸಮಾರಂಭದಲ್ಲಿ ಟ್ರಸ್ಟ್ ನ ಸಾಧಕ ಮಹಾಪೋಷಕರಾದ ಕೆ.ಡಿ. ಶೆಟ್ಟಿ ದಂಪತಿ, ವಕ್ವಾಡಿ ಪ್ರವೀಣ್ ಶೆಟ್ಟಿ ದಂಪತಿ, ಕಡಂದಲೆ ಸುರೇಶ್ ಭಂಡಾರಿ ದಂಪತಿ, ಸವಣೂರು ಸೀತಾರಾಮ ರೈ ದಂಪತಿ ಅವರನ್ನು ಗೌರವಿಸಲಾಗುವುದು.
2022 ಪಟ್ಲ ಸಂಭ್ರಮದ ಸೇವಾ ಯೋಜನೆಗಳು: 20 ಮಂದಿ ಕಲಾವಿದರಿಗೆ ಗೃಹ ನಿರ್ಮಾಣಕ್ಕೆ ತಲಾ 25,000, ವೈದ್ಯಕೀಯ ನೆರವು, ಸತ್ಪಾತ್ರ ಕಲಾವಿದರಿಗೆ ಆರ್ಥಿಕ ನೆರವು ಹತ್ತು ಮಂದಿ ಕಲಾವಿದರಿಗೆ ತಲಾ 50,000, ಅಪಘಾತ ವಿಮಾ ಯೋಜನೆ. ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ.
ಪಟ್ಲ ಯಕ್ಷಾಶ್ರಯ ಯೋಜನೆ: ಪಟ್ಲ ಯಕ್ಷಾಶ್ರಯ ಯೋಜನೆಯಲ್ಲಿ ನಿವೇಶನ ರಹಿತ 100 ಮಂದಿ ಕಲಾವಿದರಿಗೆ ಉಚಿತ 100 ಮನೆಗಳ ನಿರ್ಮಾಣ. ಈಗಾಗಲೇ ಮೂರು ಮನೆಗಳನ್ನು ನಿರ್ಮಿಸಿ ಕಲಾವಿದರಿಗೆ ಹಸ್ತಾಂತರಿಸಲಾಗಿದೆ. ಎರಡು ಮನೆಗಳು ನಿರ್ಮಾಣ ಹಂತದಲ್ಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಬೆಳಿಗ್ಗೆ 11ರಿಂದ 1 ಗಂಟೆಯವರೆಗೆ ಯಕ್ಷಗಾನ ವೈಭವ- ಸಪ್ತಸ್ವರ
ಮಧ್ಯಾಹ್ನ 2 ರಿಂದ 3.45 ರ ವರೆಗೆ ಜಿಲ್ಲೆಯ ಸುಪ್ರಸಿದ್ದ ಕಲಾವಿದರಿಂದ ತಾಳಮದ್ದಲೆ, 4ರಿಂದ 5.15 ರ ವರೆಗೆ ಮಹಿಳಾ ಯಕ್ಷಗಾನ- ಮುರಾಸುರ ವಧೆ, ಸಂಜೆ 5.15 ರಿಂದ 5.45 ರ ವರೆಗೆ ಸನಾತನ ನಾಟ್ಯಾಲಯದವರಿಂದ ಸನಾತನ ನೃತ್ಯಾಂಜಲಿ. ರಾತ್ರಿ 8.ರಿಂದ ತೆಂಕು ಬಡಗು ತಿಟ್ಟಿನ ಕಲಾವಿದರಿಂದ ಪ್ರಚಂಡ ಕೂಡಾಟ. ರಾತ್ರಿ 10 ಗಂಟೆಗೆ ಕಲಾಸಂಗಮ ತಂಡದಿಂದ ವಿಜಯಕುಮಾರ್ ಕೊಡಿಯಾಲ್ ನಿರ್ದೇಶನದ ಶಿವದೂತ ಗುಳಿಗೆ 275ನೇ ಪ್ರದರ್ಶನ ನಡೆಯಲಿದೆ.
ಪಟ್ಲ ಸಂಭ್ರಮದಲ್ಲಿ ಭಾಗವಹಿಸುವ ವೃತ್ತಿಪರ ಕಲಾವಿದರು, ಹವ್ಯಾಸಿ ಕಲಾವಿದರು, ಮಹಿಳಾ ಕಲಾವಿದರು ಹಾಗೂ ವಿಶೇಷವಾಗಿ ಪ್ರೇಕ್ಷಕರಿಗೂ ಬಂಗಾರದ ಪದಕ ಬಹುಮಾನ ಗೆಲ್ಲುವ ಅವಕಾಶ ಇದೆ.
ಪತ್ರಿಕಾಗೋಷ್ಠಿಯಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಉಪಾಧ್ಯಕ್ಷ ಡಾ ಮನುರಾವ್, ಸಂಘಟನಾ ಕಾರ್ಯದರ್ಶಿ ನವನೀತ ಶೆಟ್ಟಿ ಕದ್ರಿ, ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ ಉಪಸ್ಥಿತರಿದ್ದರು.