ಕನ್ನಡ ಎಷ್ಟೋಂದು ಸುಂದರ ಭಾಷೆಯೆಂದು ತಿಳಿಯಲು ಯಕ್ಷಗಾನ ನೋಡಬೇಕು : ಅರಗ ಜ್ಞಾನೇಂದ್ರ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕನ್ನಡ ಎಷ್ಟೋಂದು ಸುಂದರ ಭಾಷೆಯೆಂದು ತಿಳಿಯಲು ಯಕ್ಷಗಾನ ನೋಡಬೇಕು : ಅರಗ ಜ್ಞಾನೇಂದ್ರ

Share This
ಮಂಗಳೂರು: ಬಹಳಷ್ಟು ಅರ್ಥಗರ್ಭಿತವಾದ ವರ್ಣನೆ, ವಿಶ್ಲೇಷಣೆಗಳನ್ನು ಯಕ್ಷಗಾನ ಕಲೆಯಲ್ಲಿ ಕಾಣಬಹುದು. ಕನ್ನಡ ಭಾಷೆಯು ಎಷ್ಟೋಂದು ಸುಂದರವಾಗಿದೆ ಎಂಬುದು ಯಕ್ಷಗಾನದಿಂದ ಅರಿಯಬಹುದೆಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಆಶ್ರಯದಲ್ಲಿ ಅಡ್ಯಾರ್ ಗಾರ್ಡನ್'ನ ಡಾ. ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ಜರಗಿದ 'ಯಕ್ಷಧ್ರುವ ಪಟ್ಲ ಸಂಭ್ರಮ 2022' ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು. ಸಿನಿಮಾದಲ್ಲಿ ಕಲಾವಿದರ ಪ್ರತಿ ಕೆಲಸಕ್ಕೂ ಬೇರೆ ಬೇರೆ ಪ್ರಸಾದನ ಮಾಡುವವರು ಇರುತ್ತಾರೆ. ಆದರೆ ಯಕ್ಷಗಾನದಲ್ಲಿ ಕಲಾವಿದ ತನ್ನ ಬಣ್ಣದಿಂದ ಹಿಡಿದು ತನ್ನೆಲ್ಲಾ ಕಾರ್ಯವನ್ನು ತಾನೇ ಮಾಡುತ್ತಾನೆ. ಶಾಸ್ತ್ರೀಯ ಸಂಗೀತದ ಗಂಧಗಾಳಿ ಗೊತ್ತಿಲ್ಲದ ವೇದಿಕೆಯಲ್ಲಿ ಪ್ರಸಂಗಕ್ಕೆ ತಕ್ಕಂತೆ ಎರಿಳಿತ ಮಾಡುತ್ತಾನೆ. ಕೇವಲ ಕೆಲವೇ ವಿಸ್ತೀರ್ಣದ ರಂಗಸ್ಥಳದಲ್ಲಿ ದೇವಲೋಕ, ಪಾತಾಳ ಲೋಕವನ್ನು ನಿರ್ಮಾಣ ಮಾಡುತ್ತಾರೆ. ಆಧುನಿಕತೆಯ ವೇಗದಲ್ಲಿ ಇತರ ಕಲೆಗಳು ನಶಿಸಿ ಹೋಗುತ್ತಿದ್ದರೂ ಯಕ್ಷಗಾನ ಮಾತ್ರ ಕರಾವಳಿ ಜನರ ಪ್ರೋತ್ಸಾಹದಿಂದ ನಿತ್ಯ ನಿರಂತರವಾಗಿ ಸಾಗುತ್ತಿದೆ ಎಂದರು.

ನಾನು ಕೂಡ ಪಟ್ಲರ ಅಭಿಮಾನಿ. ಪಟ್ಲರಂತಹ ಕಲಾವಿದರು ಯಕ್ಷಗಾನದಲ್ಲಿ ಹೊಸತನ ತರುವ ಮೂಲಕ ಯುವಜನತೆ ಯಕ್ಷಗಾನದ ಕಡೆ ಆಕರ್ಷಿತರಾಗಲು ಕಾರಣರಾಗಿದ್ದಾರೆ. ಘಟ್ಟದ ಮೇಲಿರುವ ಪಟ್ಲರ ಅಭಿಮಾನಿ ಬಳಗವು ಪಟ್ಲರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. ಸಿನಿಮಾ ನಟರಿಗೆ ಇರುವ ಸೌಲಭ್ಯ ಯಕ್ಷಗಾನ ಕಲಾವಿದರಿಗಿಲ್ಲ. ಕಲಾವಿದರ ರಕ್ಷಕರಾಗಿ ಪಟ್ಲ ಫೌಂಡೇಶನ್ ಕಾರ್ಯ ನಿರ್ವಹಿಸುತ್ತಿದೆ. ಅಶಕ್ತ ಕಲಾವಿದರಿಗೆ ಸಹಾಯ ಮಾಡುವುದು, ಸಾಧನೆಗೆ ಪುರಸ್ಕರಿಸಿವ ಮೂಲಕ ಯಕ್ಷಗಾನ ರಂಗಕ್ಕೆ ಅನನ್ಯ ಕೊಡುಗೆಯನ್ನು ಪಟ್ಲರು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಮಾಯಣ, ಮಹಾಭಾರತದ ಪಾತ್ರ ಮಹತ್ವವು ಯಕ್ಷಗಾನದಿಂದ ತಿಳಿಯುತ್ತದೆ. ದೇಶ ಸಾಂಸ್ಕೃತಿಕವಾಗಿ ಗಟ್ಟಿಯಾಗಲು ಇಂತಹ ಕಲಾವಿದರ ಕೊಡುಗೆ ಮಹತ್ತರವಾದುದು. ಪಟ್ಲ ಫೌಂಡೇಶನಿಗೆ ದಾನ ನೀಡುವ ದಾನಿಗಳಿಗೆ ದೇವರು ಕೋಟಿ ಕೋಟಿ ಕೂಡಿಸಿ ಕೊಡಲಿ. ಪಟ್ಲರಿಗೆ ದೇವರು ಆಯುಷ್ಯ, ಆರೋಗ್ಯ ನೀಡಲೆಂದು ಹಾರೈಸಿದರು. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ 1 ಎಕ್ರೆ ಭೂಮಿಯನ್ನು ಫೌಂಡೇಶನಿಗೆ ನೀಡಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ ಪಟ್ಲರ ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ 'ಪಟ್ಲ ಪ್ರಶಸ್ತಿ - 2022' ನೀಡಲಾಯಿತು. ಟ್ರಸ್ಟಿನ ಸಾಧಕ ಮಹಾಪೋಷಕರಾದ ಚೆಲ್ಲಡ್ಕ ಕೆ. ಡಿ. ಶೆಟ್ಟಿ ದಂಪತಿಯನ್ನು, ವಕ್ವಾಡಿ ಪ್ರವೀಣ್ ಶೆಟ್ಟಿ ಅವರನ್ನು, ಕಡಂದಲೆ ಸುರೇಶ್ ಭಂಡಾರಿ ಅವರನ್ನು ಹಾಗೂ ಸವಣೂರು ಸೀತಾರಾಮ ರೈ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಭೂಸೇನೆಯಲ್ಲಿ ಮುಂದೆ ಮೇಜರಾಗಿ ಪದೋನ್ನತಿ ಹೊಂದಲಿರುವ ಕ್ಯಾ. ಭರತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ಶ್ರೇಯಾ ಶೆಟ್ಟಿ ಅವರಿಗೆ ಗೌರವಧನ ನೀಡಲಾಯಿತು.

ಪ್ರದೀಪ್ ಕುಮಾರ್ ಆಳ್ವ, ಕೃಷ್ಣ ಶೆಟ್ಟಿ ತಾರೆಮಾರ್, ರವಿ ಶೆಟ್ಟಿ ಅಶೋಕ ನಗರ, ನಿತೇಶ್ ಶೆಟ್ಟಿ ಎಕ್ಕಾರು, ಪ್ರಖ್ಯಾತ ಶೆಟ್ಟಿ ಅಳಕೆ ಹಾಗೂ ವಿದುಷಿ ಸುಮಂಗಲ ರತ್ನಾಕರ್ ಸನ್ಮಾನಿತರ ಸನ್ಮಾನ ಪತ್ರವನ್ನು ವಾಚಿಸಿದರು. 

ಕಾರ್ಯಕ್ರಮದಲ್ಲಿ ಗೃಹ ನಿರ್ಮಾಣಕ್ಕೆ 20 ಕಲಾವಿದರಿಗೆ ತಲಾ 25,000ರೂ., ಸತ್ಪಾತ್ರ 13 ಕಲಾವಿದರಿಗೆ ತಲಾ 50,000ರೂ., ವೈದ್ಯಕೀಯ ನೆರವು, ಅಪಘಾತ ವಿಮಾ ಯೋಜನೆ ಫಲಾನುಭವಿಗಳಿಗೆ ನೀಡಲಾಯಿತು. 

ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಬರೋಡ ಶಶಿಧರ್ ಶೆಟ್ಟಿ ಬರೋಡ ವಹಿಸಿದ್ದರು. ವೇದಿಕೆಯಲ್ಲಿ ಫೌಂಡೇಶನ್ ಗೌರವಾಧ್ಯಕ್ಷ ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಪ್ರಧಾನ ಸಂಚಾಲಕ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಕೆ. ಎಂ ಶೆಟ್ಟಿ, ಮಧ್ಯ, ಉದ್ಯಮಿ ರವೀಂದ್ರನಾಥ ಭಂಡಾರಿ, ಆರ್. ಕೆ. ಶೆಟ್ಟಿ ಮುಂಬೈ, ಹರಿಕೃಷ್ಣ ಬಂಟ್ವಾಳ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಕೆ.ಪಿ.ಎಸ್.ಸಿ ನಿವೃತ್ತ ಆಯುಕ್ತ ಟಿ. ಶ್ಯಾಮ್ ಭಟ್, ಉದ್ಯಮಿ ಆನಂದ ಶೆಟ್ಟಿ ತೋನ್ಸೆ, ಪೂನಾ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಉದ್ಯಮಿ ಶಶಿಧರ್ ಶೆಟ್ಟಿ ನಾಲಸೋಪಾರ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಕೆ. ಟಿ. ಸುವರ್ಣ, ಉದ್ಯಮಿ ಯಾದವ ಕೋಟ್ಯಾನ್, ಸಂತೋಷ್ ಕುಮಾರ್ ರೈ, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ ನಿರೂಪಿಸಿದರು.

Pages