ಬಂಟರ ಮಾತೃ ಸಂಘದ ತಾಲೂಕು ಸಮಿತಿಯಿಂದ ಭಿನ್ನಸಾಮಥ್ಯ೯ರಿಗೆ ಸಹಾಯಧನ
ಮಂಗಳೂರು: ಸಮಾಜದ ಭಿನ್ನ ಸಾಮರ್ಥ್ಯರ ಕಷ್ಟಕ್ಕೆ ಧ್ವನಿಯಾಗಿ ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಮಂಗಳೂರು ತಾಲೂಕು ಸಮಿತಿಯಿಂದ ಸಹಾಯಧನ ನೀಡುತ್ತಿರುವುದು, ವಿದ್ಯಾರ್ಥಿಗಳಿಗೆ ಪುರಸ್ಕಾರ, ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಮುಂಬೈ ವಿ.ಕೆ. ಸಮೂಹ ಸಂಸ್ಥೆಯ ಅಧ್ಯಕ್ಷ ಕರುಣಾಕರ ಎಮ್ ಶೆಟ್ಟಿ ಮಧ್ಯಗುತ್ತು ತಿಳಿಸಿದರು.
ಅವರು ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಮಂಗಳೂರು ತಾಲೂಕು ಸಮಿತಿ ಇದರ ವತಿಯಿಂದ ನಡೆದ ಭಿನ್ನ ಸಾಮಥ್ಯ೯ರಿಗೆ ಸಹಾಯಧನ ಯೋಜನೆ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಿ ಮಾತನಾಡಿ ಸಮಾಜದಲ್ಲಿ ಆರ್ಥಿಕವಾಗಿ ಬಹಳಷ್ಟು ಮಂದಿ ಸಂಕಷ್ಟದಲ್ಲಿದ್ದಾರೆ. ಸಮಾಜದಲ್ಲಿ ಉಳ್ಳವರು ಸಮಾಜಕ್ಕಾಗಿ ದಾನ ಮಾಡಿದಾಗ ಕಷ್ಟದಲ್ಲಿರುವವರಿಗೆ ನೆರವಾಗುತ್ತದೆ. ಇಂತಹ ಸಮಾಜಮುಖಿ ಕಾರ್ಯಕ್ರಮ ನಿತ್ಯ ನಿರಂತರ ನಡೆಯಲು ದಾನಿಗಳ ಸಹಕಾರ ಅಗತ್ಯ ಎಂದರು.
ಬಂಟರ ಮಾತೃ ಸಂಘಕ್ಕೆ 114 ವರ್ಷಗಳ ಇತಿಹಾಸ ಇದೆ. ಪ್ರತೀ ಗ್ರಾಮಕ್ಕೆ ತೆರಳಿ ಪ್ರತೀ ಮನೆಯ ಸದಸ್ಯರ ಕುರಿತು ಸರ್ವೇ ಕೆಲಸ ಶೀಘ್ರದಲ್ಲೇ ನಡೆಯಲಿದೆ. ಆ ಮೂಲಕ ಸಮಾಜದಲ್ಲಿರುವ ಜನರ ಸ್ಥಿತಿಗತಿಗಳನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಮಾಲಾಡಿ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಕಾಪು-ಕಳತ್ತೂರು ಗುರ್ಮೆ ಫೌಂಡೇಶನ್ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನ್ಯಾಯ ತೀರ್ಮಾನವನ್ನು ಚಾವಡಿಯಲ್ಲಿ ನೀಡುತ್ತಿದ್ದ ಶ್ರೇಷ್ಠ ಜಾತಿ ನಮ್ಮದು. ಆದರೆ ಇಂದು ಕೆಲವೊಂದು ಕಾರಣಕ್ಕೆ ಸಮಾಜ ಬೇರೆ ಬೇರೆಯಾಗುತ್ತಿದೆ. ವ್ಯಕ್ತಿ ಪೂಜೆಗಿಂತ ವ್ಯಕ್ತಿತ್ವದ ಪೂಜೆಯಾಗಬೇಕಿದೆ. ಸಂಘವೆಂಬದು ರಥದಂತೆ. ಅದನ್ನು ಅಜಿತಣ್ಣ ಒಬ್ಬರಿಂದ ಎಳೆಯಲು ಸಾಧ್ಯವಿಲ್ಲ, ಎಲ್ಲರ ಸಹಕಾರ ಅಗತ್ಯ. ಬಂಟರು ಸ್ವಾಭಿಮಾನದ ಸಂಕೇತ, ಹಲವಾರು ಕ್ಷೇತ್ತಗಳಲ್ಲಿ ಬಂಟರು ಗಮನಾರ್ಹ ಸಾಧನೆ ಮಾಡಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘವು ಹಲವಾರು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕೆಲವು ಪ್ರದೇಶಗಳಲ್ಲಿ ಬಂಟರು ಇನ್ನೂ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಬಗ್ಗೆ ಯೋಚಿಸುವ ಜೊತೆಗೆ ಎಲ್ಲರೂ ಒಟ್ಟಾಗಿ ಸಮಾಜ ಕಟ್ಟುವ ಕೆಲಸ ಮಾಡಬೇಕು. ಬಂಟರಿಗೆ ಭೂಮಸೂದೆ ಕಾಯಿದೆಯಿಂದ ತೊಂದರೆಯಾದರೂ ಎದುರಿಸಿ ಗೆದ್ದವರು ಬಂಟರು. ಇಂದು ಎಲ್ಲಾ ಕ್ಷೇತ್ರದಲ್ಲೂ ಬಂಟರಿದ್ದಾರೆ. ಬೇರೆ ಬೇರೆ ವಲಯದ ಸಂಘಗಳು ತಮ್ಮದೇ ವ್ಯಾಪ್ತಿಯಲ್ಲಿ ಸಹಾಯ ಮಾಡುತ್ತಿದೆ. ಬ್ರಹ್ಮಕಲಶೋತ್ಸವಕ್ಕೆ ಹಣ ನೀಡುವುದಕ್ಕಿಂತ ಇಂತಹ ಭಿನ್ನಸಾಮರ್ಥ್ಯರಿಗೆ ಸಹಾಯಧನ ನೀಡುವುದು ಪುಣ್ಯದ ಕೆಲಸ. ಇಂತಹ ಕಾರ್ಯಕ್ಕೆ ನನ್ನಿಂದಾಗುವ ಸಹಕಾರ ನೀಡುವುದಾಗಿ ಹೇಳಿದರು.
ಸಮಾರಂಭದಲ್ಲಿ ಮೂಡಬಿದ್ರೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮೇಘನಾಥ ಶೆಟ್ಟಿ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಬಾಳ ಜಗನ್ನಾಥ ಶೆಟ್ಟಿ, ದ.ಕ.ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ 50 ಮಂದಿ ಫಲಾನುಭವಿಗಳಿಗೆ ತಲಾ 6 ಸಾವಿರದಂತೆ ಒಟ್ಟು 3 ಲಕ್ಷ ರೂ. ಸಹಾಯಧನದ ಚೆಕ್ ವಿತರಿಸಲಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜಗದೀಶ್ ಟಿ ಶೆಟ್ಟಿ ಬೊಳ್ಳೊಳ್ಳಿಮಾರುಗುತ್ತು, ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ ಉಪಸ್ಥಿತರಿದ್ದರು.
ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿವಾಕರ ಶೆಟ್ಟಿ ಚೇಳ್ಯಾರು ಪ್ರಾರ್ಥಿಸಿದರು. ಸಹಾಯನಿಧಿ ಕಾರ್ಯಕ್ರಮದ ಸಂಚಾಲಕ ರವೀಂದ್ರನಾಥ ಎಸ್. ಶೆಟ್ಟಿ ಸ್ವಾಗತಿಸಿದರು. ಸಹಸಂಚಾಲಕ ಎನ್. ಮುರಳೀಧರ ಶೆಟ್ಟಿ ವಂದಿಸಿದರು. ಸುಖೇಶ್ ಚೌಟ ಕಾರ್ಯಕ್ರಮ ನಿವಹಿಸಿದರು.