ಮಂಗಳೂರು: ಭಾಷೆ ಅಂದರೆ ಬರೀ ಮಾತಾಡುವ ಭಾಷೆ ಅಲ್ಲ, ಅದು ಮೂರು ಜಿಲ್ಲೆಗಳ ಜನರ ಆಚಾರ ವಿಚಾರ, ಸಂಸ್ಕೃತಿಯಾಗಿದೆ. ಭಾಷೆ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಕರಾವಳಿಯ ಎಲ್ಲಾ ವರ್ಗದ ಜನರನ್ನು ಒಗ್ಗಟ್ಟಿನಲ್ಲಿ ಕೊಂಡೊಯ್ಯುವುದಿದ್ದರೆ ಅದು ತುಳು ಭಾಷೆ ಮಾತ್ರ. ಭಾಷೆ ಉಳಿಸುವ ನಿಟ್ಟಿನಲ್ಲಿ ನನ್ನ ಕೈಲಾದ ಸೇವೆ ಸಲ್ಲಿಸುತ್ತೇನೆ. ಇದಕ್ಕಾಗಿ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾದ ಕೆಲವು ಶೋಗಳನ್ನು ಕೊಡುಗೆಯಾಗಿ ನೀಡುತ್ತೇನೆ. ಚಿತ್ರ ಜಗತ್ತಿನ ಮೂಲೆ ಮೂಲೆಯನ್ನು ತಲುಪುವ ಮೂಲಕ ಯಶಸ್ಸು ಕಾಣಲಿ ಎಂದು ಮಂಗಳೂರು ಕ್ಷೇತ್ರ ಶಾಸಕ, ಮಾಜೀ ಸಚಿವ ಯು.ಟಿ. ಖಾದರ್ ಹೇಳಿದರು.
ಭಾರತ್ ಮಾಲ್ ನ ಬಿಗ್ ಸಿನಿಮಾಸ್ ನಲ್ಲಿ ನಡೆದ ವೈಭವ್ ಫ್ಲಿಕ್ಸ್ ಅಡಿಯಲ್ಲಿ ಮ್ಯಾಂಗೋ ಪಿಕಲ್ ಬ್ಯಾನರ್ ನಡಿಯಲ್ಲಿ ತಯಾರಾದ ರಾಹುಲ್ ಅಮೀನ್ ನಿರ್ದೇಶನದ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನಿಮಾದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾರಂಭವನ್ನು ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ 11 ದೇಶಗಳಲ್ಲಿ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಪ್ರೀಮಿಯರ್ ಶೋ ಮೂಲಕ ಸೌಂಡ್ ಮಾಡಿದೆ. ವಿದೇಶದಲ್ಲಿರುವ ತುಳುವರು ಸಿನಿಮಾ ವೀಕ್ಷಿಸಿ ಮೆಚ್ಚಿದ್ದಾರೆ. ಇನ್ನು ತುಳುನಾಡಿನ ಸರ್ವಧರ್ಮದ ತುಳುವರು ಸಿನಿಮಾ ವೀಕ್ಷಿಸಿ ಸಿನಿಮಾ ಗೆಲ್ಲಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಬಳಿಕ ಮಾತಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು, ತುಳು ಭಾಷೆಗೆ ತುಳುವರಾದ ನಾವೆಲ್ಲರೂ ಹೆಮ್ಮೆಯಿಂದ ಸೇವೆ ಸಲ್ಲಿಸಬೇಕು. ತುಳು ಲಿಪಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಿರುವ ಚಿತ್ರತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇಂತಹ ಮನಸ್ಸು ಇಲ್ಲಿನ ಎಲ್ಲಾ ಕಲಾವಿದರು, ರಾಜಕಾರಣಿಗಳಿಗೆ ಯಾಕಿಲ್ಲ? ನಾವೆಲ್ಲರೂ ಒಗ್ಗಟ್ಟಾದರೆ ತುಳು ಭಾಷೆಗೆ ವಿಶ್ವ ಮಾನ್ಯತೆ ಯಾಕೆ ಸಿಗುವುದಿಲ್ಲ? ತುಳು ಭಾಷೆಗೆ ಥಿಯೇಟರ್ ಸಿಗದಿರುವ ಈ ವೇಳೆಯಲ್ಲಿ ನಾವೆಲ್ಲರೂ ಇದೇ ಹುಮ್ಮಸ್ಸಿನಿಂದ ಮುಂದುವರಿದರೆ ಖಂಡಿತ ನಮ್ಮ ಭಾಷೆಗೆ ರಾಜ್ಯ ಭಾಷೆ ಸ್ಥಾನಮಾನ ಸಿಗುವ ಮೂಲಕ ತುಳುವರ ಕನಸು ನನಸಾಗಲಿದೆ ಎಂದರು.
ಬಳಿಕ ಮಾತಾಡಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು, 11 ರಾಷ್ಟ್ರಗಳಲ್ಲಿ ಸೌಂಡ್ ಮಾಡಿರುವ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾ ಬಗ್ಗೆ ಎಲ್ಲರೂ ಒಳ್ಳೆಯ ಮಾತಾಡುತ್ತಿದ್ದಾರೆ. ಇಂತಹ ಸಿನಿಮಾ 111 ರಾಷ್ಟ್ರಗಳನ್ನು ತಲುಪಲು ಹೆಚ್ಚು ಸಮಯ ಬೇಕಾಗಿಲ್ಲ. ಎಲ್ಲಾ ತುಳುವರು ಸಿನಿಮಾ ನೋಡಿ ಪ್ರೋತ್ಸಾಹ ಮಾಡಿದರೆ ನಿರ್ಮಾಪಕರು ಹಾಕಿರುವ ಬಂಡವಾಳ ವಾಪಾಸ್ ಬರುತ್ತದೆ. ಈ ಮೂಲಕ ಸಿನಿಮಾ ಹೊಸ ದಾಖಲೆ ಬರೆಯಲಿ ಎಂದರು.
ಚಿತ್ರಕ್ಕೆ ಶುಭ ಹಾರೈಸಿ ಮಾತಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು, ನಮ್ಮನ್ನು ಎಲ್ಲರನ್ನು ಒಗ್ಗೂಡಿಸುವ ಭಾಷೆ ಇದ್ದರೆ ಅದು ತುಳು ಭಾಷೆ. ಭಾಷೆ ಮೇಲಿನ ಅಭಿಮಾನ ನಮ್ಮೆಲ್ಲರಿಗೂ ಇದೆ. ಹೀಗಾಗಿ ತುಳುನಾಡಿನ ಅನನ್ಯ ಪರಂಪರೆ, ಸಂಸ್ಕೃತಿ ಉಳಿವಿಗೆ ನಾವೆಲ್ಲರೂ ಹೋರಾಡಬೇಕು. ರಾಜ್ ಸೌಂಡ್ಸ್ ಸಿನಿಮಾ ತುಳುನಾಡಿನ ಮೂಲೆ ಮೂಲೆಯನ್ನು ತಲುಪಲಿ ಎಂದರು.
ವೇದಿಕೆಯಲ್ಲಿ ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಪ್ರಕಾಶ್ ಪಾಂಡೇಶ್ವರ್ ಮೋಹನ್ ಕೊಪ್ಪಲ, ಚಿತ್ರ ನಿರ್ಮಾಪಕ ಆನಂದ್ ಕುಂಪಲ, ನಿರ್ದೇಶಕ ರಾಹುಲ್ ಅಮೀನ್, ಕದ್ರಿ ನವನಿತ್ ಶೆಟ್ಟಿ, ನವೀನ್ ಡಿ. ಪಡೀಲ್, ಡಾ. ಅಣ್ಣಯ್ಯ ಕುಲಾಲ್, ಶೈಲಶ್ರೀ ಮೂಲ್ಕಿ, ಪದ್ಮರಾಜ್ ಕುದ್ರೋಳಿ , ಲೀಲಾಕ್ಷ ಕರ್ಕೇರ, ಮಾಧ್ಯಮ ಅಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ವಿನೀತ್, ಅಥರ್ವ ಪ್ರಕಾಶ್, ಯತೀಶ್ ಬೈಕಂಪಾಡಿ, ಬಾಲಕೃಷ್ಣ ಶೆಟ್ಟಿ, ಮಮತಾ ಗಟ್ಟಿ , ಶರ್ಮಿಳಾ ಕಾಪಿಕಾಡ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಅರ್ಜುನ್ ಕಾಪಿಕಾಡ್, ತಮ್ಮ ಲಕ್ಷ್ಮಣ, ಸತೀಶ್ ಕುಂಪಲ, ಅವಿನಾಶ್ ಶೆಟ್ಟಿ, ಕಿಶೋರ್ ಕೊಟ್ಟಾರಿ, ಉಪಸ್ಥಿತರಿದ್ದರು. ನಟ ವಿನೀತ್ ಪ್ರಸ್ತಾವಿಕವಾಗಿ ಮಾತನಾಡಿದರು.
ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತುಳುಭಾಷೆಗೆ ಮಾನ್ಯತೆ ಸಿಗಲಿ ಎಂಬ ಆಶಯದೊಂದಿಗೆ ತುಳುಲಿಪಿಯ ಬಾವುಟವನ್ನು ಕ್ರೇನ್ ಮುಖಾಂತರ ಹಾರಿಸಿ ಅತಿಥಿಗಳಿಗೆ ಹಸ್ತಾಂತರ ಮಾಡಲಾಯಿತು.
ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಮಾಲ್ ನ ಬಿಗ್ ಸಿನಿಮಾಸ್, ಪಿವಿಆರ್ ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್, ಪುತ್ತೂರಿನಲ್ಲಿ ಅರುಣಾ, ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಕೊಪ್ಪದಲ್ಲಿ ಜೆಎಂಜೆ, ಕಾಸರಗೋಡ್ ನಲ್ಲಿ ಕೃಷ್ಣಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ, ಪ್ಲಾನೆಟ್, ರಾಧಿಕಾ ಮೊದಲಾದ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಎಲ್ಲಾ ಕಡೆ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿದೆ ಎಂದು ಸಿನಿಮಾದ ನಿರ್ಮಾಕರಾದ ಆನಂದ ಎನ್ ಕುಂಪಲ ಮತ್ತು ನಿರ್ದೇಶಕ ರಾಹುಲ್ ಅಮೀನ್ ತಿಳಿಸಿದ್ದಾರೆ.
ರಾಜ್ ಸೌಂಡ್ಸ್ ಚಿತ್ರದಲ್ಲಿ ಮದುವೆ ಮತ್ತು ಮದರಂಗಿ ಕಾರ್ಯಕ್ರಮದ ಕಥಾ ಹಂದರವನ್ನು ಹೊಂದಿದ್ದು, ನೈಜತೆಗೆ ಒತ್ತುಕೊಟ್ಟು ಸುಂದರವಾಗಿ ಸೆರೆಹಿಡಿಯಲಾಗಿದೆ. ಕೌಟುಂಬಿಕ ಮನೋರಂಜನೆಯ ಜತೆಗೆ ಹಾಸ್ಯಕ್ಕೂ ಪ್ರಾಮುಖ್ಯತೆ ನೀಡಲಾಗಿದೆ.