ಮಂಗಳೂರು: ಸಿಂಪ್ಲಿಫನ್ ಮೀಡಿಯಾ ನೆಟ್‌ವರ್ಕ್ ಪ್ರೈ.ಲಿ. ಬ್ಯಾನರ್‌ನಲ್ಲಿ ಮಂಗಳೂರಿನ ಪ್ರತಿಭಾವಂತರ ತಂಡ ತಯಾರಿಸಿದ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಸಿನಿಮಾ ‘ಚೇಸ್’ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ.
ಎಲ್ಲೆಲ್ಲೋ ಇದ್ದ ಚಿತ್ರದ ಪ್ರಮಖ ಪಾತ್ರಗಳೆರಡು ಅನಿರೀಕ್ಷಿತವಾಗಿ ನಡೆಯುವ ಘಟನೆಗಳಿಂದ ಒಬ್ಬರನ್ನೊಬ್ಬರು ಭೇಟಿಯಾಗಬೇಕಾಗಿ ಬಂದಾಗ ಏನಾಗುತ್ತದೆ, ಆ ಘಟನೆಗಳೇನು? ಆ ಪಾತ್ರಗಳು ಒಂದು ಕೇಸನ್ನು ಅದಕ್ಕೆ ಕನೆಕ್ಟ್ ಆಗಿರುವ ಸುಳಿವು ಚೇಸ್ ಮಾಡುತ್ತಾ ಹೋದಾಗ ಏನೆಲ್ಲ ಘಟನೆಗಳು ನಡೆಯುತ್ತದೆ? ಪ್ರತಿಯೊಂದು ಕ್ರೈಂ ನಡೆದಾಗ ಅದರ ಹಿಂದಿರೋ ವ್ಯಕ್ತಿಗಳನ್ನು ಚೇಸ್‌ಮಾಡಿದಾಗ ಹೊರಗೆ ಬರುವ ಮಿಸ್ಟರಿಗಳು ಜನರ ಮೇಲೆ ಏನೆಲ್ಲ ಪರಿಣಾಮ ಬೀರಬಹುದು ಎನ್ನುವುದನ್ನು ತೋರಿಸುವ ಪ್ರಯತ್ನವೇ ಚೇಸ್‌ನಲ್ಲಿದೆ ಎಂದು ನಿರ್ದೇಶಕ ವಿಲೋಕ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರದಲ್ಲಿ ಬಹುತಾರಾಗಣವಿದ್ದು, ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ಅರವಿಂದ ಬೋಳಾರ್, ರೆಹಮಾನ್ ಹಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಮೊದಲಾದವರು ನಟಿಸಿದ್ದಾರೆ.
ಮನೋಹರ ಸುವರ್ಣ, ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ಚಿತ್ರದ ನಿರ್ಮಾಪಕರಾಗಿದ್ದು, ಅನಂತ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಸಂಗೀತ, ಡಾ.ಉಮೇಶ್ ಪಿಲಿಕುಡೇಲು ಸಾಹಿತ್ಯ ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರು, ಉಡುಪಿ, ಹಿಮಾಚಲ ಪ್ರದೇಶ, ಕೊಚ್ಚಿನ್‌ನಲ್ಲಿ ಸುಮಾರು 52 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಲಭಿಸಿದೆ ಎಂದವರು ತಿಳಿಸಿದರು.
ನಿರ್ಮಾಪಕರಾದ ಮನೋಹರ ಸುವರ್ಣ, ಪ್ರಶಾಂತ್ ಶೆಟ್ಟಿ, ನಟಿ ರಾಧಿಕಾ ನಾರಾಯಣ್, ನಟ ಅವಿನಾಶ್ ನರಸಿಂಹರಾಜು, ಸಾಹಿತಿ ಡಾ.ಉಮೇಶ್ ಪಿಲಿಕುಡೇಲು, ಅರ್ಜುನ್ ಕಜೆ ಉಪಸ್ಥಿತರಿದ್ದರು.