ಬಂಟ್ಸ್ ನ್ಯೂಸ್, ಮುಂಬೈ : ಬಂಟ ಸಮಾಜದ ಕ್ರೀಡಾಪಟುಗಳು ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನ ಗೆದ್ದರೆ ಅವರಿಗೆ 1 ಕೋಟಿ ರೂ. ಬಹುಮಾನವಾಗಿ ನೀಡುವುದಾಗಿ ಹೆರಂಬಾ ಕೆಮಿಕಲ್ಸ್ ಸಿಎಂಡಿ ಸದಾಶಿವ ಕೆ. ಶೆಟ್ಟಿ ಕೂಳೂರು ಕನ್ಯಾನ ಘೋಷಿಸಿದ್ದಾರೆ.
ಅವರು ಎ.3ರಂದು ಕಾಂದಿವಲಿ ಪಶ್ಚಿಮ ಪೊಯ್ಸರ್ ಜಿಮ್ಖಾನದಲ್ಲಿ ಬಂಟರ ಸಂಘ ಮುಂಬೈ ಇದರ ಕ್ರೀಡಾ ವಿಭಾಗದ ಆಯೋಜನೆಯ 34ನೇ ವರ್ಷದ ವಾರ್ಷಿಕ ಕ್ರೀಡಾ ಉತ್ಸವ - 2022ರ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕ್ರೀಡೆಯಲ್ಲಿ ಪರಿಶ್ರಮ ಅಗತ್ಯ. ಬಂಟ ಸಮಾಜಕ್ಕೆ ಒಲಿಂಪಿಕ್ಸ್'ನಲ್ಲೊಂದು ಪದಕ ಬರಬೇಕು. ಒಲಿಂಪಿಕ್ಸ್'ನಲ್ಲಿ ಯಾವುದೇ ಬಂಟರು ಚಿನ್ನ ಗೆದ್ದಲ್ಲಿ 1 ಕೋಟಿ ರೂ, ಬೆಳ್ಳಿ ಪಡೆದಲ್ಲಿ 50 ಲಕ್ಷ ರೂ ಹಾಗೂ ಕಂಚಿನ ಪದಕ ಪಡೆದಲ್ಲಿ 25 ಲಕ್ಷ ರೂ ಬಹುಮಾನವನ್ನು ನೀಡುವುದಾಗಿ ಘೋಷಣೆ ಮಾಡಿದರು. ಕ್ರೀಡಾ ಸ್ಪೂರ್ತಿ ಕೇವಲ ದಿನಕ್ಕೆ ಉಳಿಸದೆ ಪ್ರತಿದಿನ ಬೆಳೆಸಬೇಕು. ಕ್ರೀಡೆಯಲ್ಲಿ ಮಹತ್ತರ ಸಾಧನೆ ಮಾಡಿ ದೇಶಕ್ಕೆ ಕೀರ್ತಿಬೇಕು ಎಂದರು.
ಕಾರ್ಯಕ್ರಮವನ್ನು ಸಂಸದ ಗೋಪಾಲ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ದಕ್ಷಿಣ ಭಾರತದ ಕನ್ನಡದ ಖ್ಯಾತ ನಟ ಸುದೀಪ್, ಬಹುಭಾಷಾ ನಟಿ ಮುಂಬೈನ ತಾಪ್ಸಿಪನ್ನು ಸಮಾರಂಭಕ್ಕೆ ಮೆರಗು ನೀಡಿದರು. ಮುಂಬೈ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರ ನಾಯಕತ್ವದಲ್ಲಿ ನಡೆದ ಕ್ರೀಡೋತ್ಸವದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಮುಂಬೈ ಬಂಟರ ಸಂಘದ ಪದಾಧಿಕಾರಿಗಳು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.