ನವದೆಹಲಿ : ಇಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರ ನೇತೃತ್ವದಲ್ಲಿ ಸುರತ್ಕಲ್ ಟೋಲ್ ವಿಚಾರದ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಅಧಿಕಾರಿಗಳೊಂದಿಗೆ ಸಚಿವರ ಕಚೇರಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮುಖ್ಯವಾಗಿ ಸುರತ್ಕಲ್ ಟೋಲ್ ಗೇಟ್ ಸ್ಥಳಾಂತರ / ವಿಲೀನಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಅದರಂತೆ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗುತ್ತಿರುವ ದೃಷ್ಠಿಯಿಂದ ಸುರತ್ಕಲ್ ಟೋಲ್ ಗೇಟನ್ನು ಸ್ಥಳಾಂತರಿಸಿ ಎನ್.ಎಂ.ಪಿ.ಟಿ ಒಳಗೆ ಸ್ಥಾಪಿಸುವ ನಿರ್ಧಾರಕ್ಕೆ ಬರಲಾಯಿತು. ಎನ್.ಎಂ.ಪಿ.ಟಿಯ ಒಳಗೆ ಬರುವ ಹಾಗೂ ಹೊರಗೆ ಹೋಗುವ ವಾಹನಗಳಿಂದ ಮಾತ್ರ ಟೋಲ್ ಸಂಗ್ರಹಿಸಲು ಸಚಿವರು ಸೂಚಿಸಿದರು.
ಅಲ್ಲದೇ ಮಾಣಿ - ಸಂಪಾಜೆ - ಮಡಿಕೇರಿ ಸಂಪರ್ಕಿಸುವ ರಸ್ತೆಯನ್ನು ಮಾಣಿಯಿಂದ ಸಂಪಾಜೆವರೆಗೆ ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಹಾಗೂ ಸಂಪಾಜೆಯಿಂದ ಮಡಿಕೇರಿವರೆಗಿನ ರಸ್ತೆಯನ್ನು ಅಗಲಗೊಳಿಸುವ ಬಗ್ಗೆ ಸಭೆಯಲ್ಲಿ ಸಚಿವರು ಆದೇಶಿಸಿದರು.
ಈ ಸಭೆಯಲ್ಲಿ ಆರ್ ಕೆ ಪಾಂಡೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸದಸ್ಯರು, ಗೋ ಸಾಹೇಲ್ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಮಹಾವೀರ್ ಸಿಂಗ್ ಸದಸ್ಯರು ರಾಷ್ಟ್ರೀಯ ಹೆದ್ದಾರಿ (ಟೋಲ್ ವಿಭಾಗ) ಹಾಗೂ ರಾಜ್ಯ ಶಿಕ್ಷಣ ಸಚಿವ ಬಿ ಸಿ ನಾಗೇಶ್, ಮೈಸೂರು ಸಂಸದ ಪ್ರತಾಪ್ ಸಿಂಹ, ಕೋಲಾರ ಸಂಸದರ ಮುನಿಸ್ವಾಮಿ ಉಪಸ್ಥಿತರಿದ್ದರು.