ಬಂಟ್ಸ್ ನ್ಯೂಸ್, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಮುಖಿ ಕಾರ್ಯ ಶ್ಲಾಘನೀಯ. ವರ್ಷಕ್ಕೊಮ್ಮೆ ಆರ್ಥಿಕ ಸಂಕಷ್ಟದಲ್ಲಿರುವವರನ್ನು ಗುರುತಿಸುವ ಸಂಘಟನೆಗಳು ಇವೆ. ಆದರೆ ಪ್ರತೀ ತಿಂಗಳು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸಮಾಜಕಲ್ಯಾಣ ಯೋಜನೆಯಡಿಯಲ್ಲಿ ಬಡವರನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಸಾಧಕರನ್ನು ಕೂಡಾ ಗೌರವಿಸುತ್ತಿದೆ. ಇಂದು ಎಲ್ಲಾ ಕಡೆ ಅತೀ ಹೆಚ್ಚು ಬಂಟರ ಸಮುದಾಯದ ಭವನಗಳಿವೆ. ಇದನ್ನು ಎಲ್ಲಾ ಸಮುದಾಯ ಅನುಕರಣೆ ಮಾಡಬೇಕಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ತಿಳಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್‌ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿದ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಎಲ್ಲಾ ಕಡೆ ಹೋಗಿ ಸರಕಾರಿ ಕೆಲಸ ಮಾಡಲು ಸಾಧ್ಯವಿಲ್ಲ. ಅಂತಹ ಸಂದರ್ಭ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಿದಾಗ ಸಮಾಜಕ್ಕೆ ಸಹಾಯವಾಗುತ್ತದೆ. ಇಂತಹ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತೋಷವಾಗುತ್ತದೆ ಎಂದು ಒಕ್ಕೂಟಕ್ಕೆ ಎನ್ ಶಶಿಕುಮಾರ್ ಶುಭ ಹಾರೈಸಿದರು.
ಸಂಕಷ್ಟದಲ್ಲಿರುವರಿಗೆ ನೆರವು - ಐಕಳ : ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿ ವಹಿಸಿ ಮಾತನಾಡಿ, ದಾನಿಗಳು ದಾನ ನೀಡಿದರೆ ಮಾತ್ರವೇ ಕಾರ್ಯಕ್ರಮ ಮಾಡಲು ಸಾಧ್ಯ. ಇಂದು ದಾನಿಗಳ ಸಹಾಯದಿಂದ ವರ್ಷಕ್ಕೊಮ್ಮೆ ಮಾಡುತ್ತಿದ್ದ ಕಾರ್ಯಕ್ರಮ ಪ್ರತಿ ತಿಂಗಳು ನಡೆಯುತ್ತಿದೆ. ಒಕ್ಕೂಟಕ್ಕೆ ಯಾರೇ ಸಹಾಯ ಕೋರಿದರೂ ಸಹಾಯ ಮಾಡಿದ್ದೇವೆ. ಕೆಲವರು ಸ್ವಾಭಿಮಾನದಿಂದ ಕಷ್ಟ ಹೇಳುವುದಿಲ್ಲ, ಯಾರೇ ಕಷ್ಟವಿದ್ದರೂ ಕಚೇರಿಗೆ ಬಂದು ಮನವಿ ನೀಡಬಹುದು. ನಿಮ್ಮೊಂದಿಗೆ ನಾವಿದ್ದೇವೆ ಎಂದರು.
ಒಕ್ಕೂಟದ ಕೆಲಸ ಅವಿಸ್ಮರಣೀಯ: ಕೆ.ಎಂ.ಶೆಟ್ಟಿ : ಗೌರವಾನ್ವಿತ ಅತಿಥಿಯಾಗಿ ಮುಂಬಯಿ ವಿ.ಕೆ.ಗ್ರೂಪ್ ನ ಚೆಯರ್ ಮೆನ್ ಕೆ.ಎಂ. ಶೆಟ್ಟಿ ಮಧ್ಯಗುತ್ತು ಮಾತನಾಡಿ, ಒಕ್ಕೂಟದ ಕೆಲಸ ಅವಿಸ್ಮರಣೀಯವಾದುದು. ಉಳ್ಳವರಿಂದ ಪಡೆದು ಇಲ್ಲದವರಿಗೆ ನೀಡುವುದು ತುಂಬಾ ಕಷ್ಟದ ಕೆಲಸ. ಐಕಳ ಹರೀಶ್ ಶೆಟ್ಟಿ ಅವರು ಪ್ರತಿ ದಾನಿಯ ಬಳಿಗೆ ತೆರಳಿ ದಾನ ಪಡೆದು ಸಮಾಜದ ಕಷ್ಟದವರಿಗೆ ಒಕ್ಕೂಟದ ಮೂಲಕ ನೀಡುತ್ತಿದ್ದಾರೆ. ಒಕ್ಕೂಟದ ಈ ಕಾರ್ಯಕ್ಕೆ ನನ್ನ ಸಹಕಾರ ಎಂದಿಗೂ ಇದೆ. ಹರೀಶಣ್ಣ ಹಾಗೂ ತಂಡಕ್ಕೆ ಇನ್ನಷ್ಟು ಕಾರ್ಯಕ್ರಮ ಮಾಡಲು ದೇವರು ಶಕ್ತಿ ನೀಡಲಿ ಎಂದರು.
ಸನ್ಮಾನ : ಸಮಾರಂಭದಲ್ಲಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ, ರಾಷ್ಟ್ರಪತಿಗಳ ಸೇವಾ ಪದಕ ಪುರಸ್ಕೃತ ವಿಜಯ ಕಾಂಚನ್ ಬೈಕಂಪಾಡಿ, ಸಂಸ್ಕಾರ ಭಾರತಿ ಮಂಗಳೂರು ಇದರ ಅಧ್ಯಕ್ಷ ಕೆ ಪುರುಷೋತ್ತಮ ಭಂಡಾರಿ ಅಡ್ಯಾರ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಹಿರಿಯ ಪತ್ರಕರ್ತರಾದ ಕೆ. ಆನಂದ ಶೆಟ್ಟಿ, ಪಿ.ಬಿ.ಹರೀಶ್ ರೈ,
ಕರ್ನಾಟಕ ಅರಣ್ಯ ಸಂರಕ್ಷಣ ಅಧಿಕಾರಿ (ಎಸಿಎಫ್) ಹಸ್ತಾ ಶೆಟ್ಟಿ, ಪಿಎಚ್ ಡಿ ಪದವಿ ಪಡೆದ ಡಾ.ಪ್ರಿಯಾ ಹರೀಶ್ ಶೆಟ್ಟಿ, ಡಾ.ಮಂಜುಳಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಅಕ್ಷಯ ಶೆಟ್ಟಿ, ಸುಷ್ಮಾ ರಾವ್ ಹಾಗೂ ಇತ್ತೀಚೆಗೆ ದಕ ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ವಿಜಯಶಾಲಿಯಾದ ಪತ್ರಕರ್ತರಾದ ನಿಶಾಂತ್ ಶೆಟ್ಟಿ ಕೆಲೆಂಜೂರು ಮತ್ತು ರಾಜೇಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಮಾತನಾಡಿ, ಸಂಘದಲ್ಲಿ ಇದ್ದ ಮೇಲೆ ಕೆಲಸ ಮಾಡಬೇಕು, ಇಲ್ಲವಾದಲ್ಲಿ ಆತ ಸಂಘಕ್ಕೆ ಸೂಕ್ತನಲ್ಲ. ಬೆಂಗಳೂರು ಬಂಟರ ಸಂಘದ ಅಧ್ಯಕ್ಷನಾಗಿ ಸಿಕ್ಕಿದ ಅವಕಾಶವನ್ನು ಸಮಾಜಕ್ಕಾಗಿ ಸರಿಯಾಗಿ ಬಳಸಲು ಪ್ರಯತ್ನಿಸಿದ್ದೇನೆ. ಐಕಳ ಹರೀಶ್ ಶೆಟ್ಟಿ ಅವರ ತರ ಕೆಲಸ ಮಾಡಲು ಸಾಧ್ಯವಿಲ್ಲ. ಒಕ್ಕೂಟಕ್ಕೆ ಯಾವುದೇ ಬಂಡವಾಳ ಇಲ್ಲದಿದ್ದರೂ ದಾನಿಗಳಿಂದ ಹಣ ಪಡೆದು 9 ಕೋಟಿಗೂ ಅಧಿಕ ದಾನ ನೀಡಿರುವುದು ಶ್ಲಾಘನೀಯ ಎಂದರು.
ರಾಷ್ಟ್ರಪತಿಗಳ ಸೇವಾ ಪದಕ ಪುರಸ್ಕೃತ ವಿಜಯ ಕಾಂಚನ್ ಬೈಕಂಪಾಡಿ ಮಾತನಾಡಿ, ಬಂಟರ ಸಮಾಜ ಸಾಧನೆ ಗುರುತಿಸಿ ಸನ್ಮಾನ ಮಾಡಿರುವುದಕ್ಕೆ ಅಭಾರಿ ಎಂದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಇಂದು ನಮಗೆ ಸನ್ಮಾನ ಮಾಡಿದ್ದಾರೆ. ಆದರೆ ಎಲ್ಲರೂ ಒಟ್ಟಾಗಿ ಹರೀಶಣ್ಣನಿಗೆ ಸನ್ಮಾನ ಮಾಡಬೇಕಾಗಿದೆ ಎಂದರು. ಇದೆ ಸಂದರ್ಭ ಪತ್ರಕರ್ತರ ಸಂಘದ ಮನವಿಗೆ ಒಕ್ಕೂಟ ನಿರಂತರ ಸಹಾಯ ಮಾಡಿರುವುದನ್ನು ಶ್ರೀನಿವಾಸ್ ನೆನಪು ಮಾಡಿದರು.
ಸಂಸ್ಕಾರ ಭಾರತಿ ಮಂಗಳೂರು ಇದರ ಅಧ್ಯಕ್ಷ ಕೆ ಪುರುಷೋತ್ತಮ ಭಂಡಾರಿ ಅಡ್ಯಾರ್ ಮಾತನಾಡಿ, ಸಮಾಜದ ಒಟ್ಟಾಗಿ ಬದುಕುವವರು ಸಮಾಜದ ಶಕ್ತಿಯಾಗಿ ಬೆಳೆಯುತ್ತಾರೆ. ಸಮಾಜಕ್ಕೆ ಒಳಿತು ಮಾಡುವವನು ದೇವಸ್ಥಾನಕ್ಕೆ ಹೋಗಬೇಕಿಲ್ಲ, ದೇವರೆ ಅವರ ಜೊತೆಗಿರುತ್ತಾನೆ. ಅಂತಹ ಮಹಾನ್ ಕಾರ್ಯವನ್ನು ಐಕಳ ಹರೀಶ್ ಶೆಟ್ಟಿ ಅವರು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಮಾತನಾಡಿ, ದಕ ಜಿಲ್ಲೆಯಲ್ಲಿ ಬಂಟರ ಸಮಸ್ಯೆ ಹೇಳಲು ವೇದಿಕೆ ಇರಲಿಲ್ಲ. ಸಂಘಗಳು ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ಕಳೆದ ಮೂರು ವರ್ಷದಲ್ಲಿ ಹರೀಶಣ್ಣ ತೋರಿಸಿ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಬಂಟ ಸಮಾಜದ ಧೀಮಂತ ವ್ಯಕ್ತಿಗಳ ಪರಿಚಯದ ಪುಸ್ತಕ ರಚನೆಗೆ ಪಿಬಿ ಹರೀಶ್ ರೈ ಮನವಿ ಮಾಡಿದರು.
ಹಿರಿಯ ಪತ್ರಕರ್ತರಾದ ಕೆ. ಆನಂದ ಶೆಟ್ಟಿ ಮಾತನಾಡಿ, ಸಮಾಜಕ್ಕೆ ಶಿಕ್ಷಣ, ಆರೋಗ್ಯ, ವಸತಿ ಅಗತ್ಯವಿದೆ. ಬಂಟ ಸಮಾಜ ಇಷ್ಟು ಮುಂದುವರೆದರೂ ಆರ್ಥಿಕ ಸ್ಥಿತಿ ಉತ್ತಮವಿಲ್ಲದವರು ಇನ್ನೂ ಇದ್ದಾರೆ. ಸಂಘಗಳು ಈ ಹಿಂದೆ ತಮ್ಮ ಮಿತಿಯಲ್ಲಿ ಕೆಲಸ ಮಾಡುತ್ತಿತ್ತು. ಆದರೆ ಇದೀಗ ಒಕ್ಕೂಟವು ಪ್ರತಿ ತಿಂಗಳು ಸಹಾಯ ಮಾಡುವ ಮೂಲಕ ಬೆಳಕಾಗಿದೆ. 100 ವರ್ಷಗಳ ಹಿಂದೆ ಹಿರಿಯರು ಸಮಾಜಕ್ಕೆ ಮಾಡಿದ ಕಾರ್ಯ ಇದೀಗ ಕಳೆದ 3 ವರ್ಷಗಳಿಂದ ಆಗುತ್ತಿದ್ದು ಇನ್ನಷ್ಟು ಕಾರ್ಯಕ್ರಮ ನಡೆಯಲಿ ಎಂದು ಹಾರೈಸಿದರು.
ಕರ್ನಾಟಕ ಅರಣ್ಯ ಸಂರಕ್ಷಣ ಅಧಿಕಾರಿ (ಎಸಿಎಫ್) ಹಸ್ತಾ ಶೆಟ್ಟಿ ಮಾತನಾಡಿ, ನಾನು ಬಂಟ ಸಂಘದಿಂದ ಸಹಾಯ ಪಡೆದವಳು, ಇಂದು ಸಾಧನೆ ಮಾಡಿ ಸಂಘದಿಂದ ಸನ್ಮಾನ ಪಡೆದಿದಕ್ಕೆ ಸಂತೋಷವಾಗುತ್ತದೆ. ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮಗಳು ನಾವು ಮತ್ತೊಬ್ಬರಿಗೆ ಸಹಾಯ ಮಾಡಲು ಪ್ರೇರಣೆಯಾಗಿದೆ ಎಂದರು.
ಡಾ| ಪ್ರಿಯಾ ಹರೀಶ್ ಶೆಟ್ಟಿ ಮಾತನಾಡಿ, ಹತ್ತೂರ ಸನ್ಮಾನಕ್ಕಿಂತ ಹುಟ್ಟೂರ ಸನ್ಮಾನ ಶ್ರೇಷ್ಠ. ಮೊದಲ ಭಾರಿ ನನ್ನ ಸಾಧನೆ ಗುರುತಿಸಿ ಸನ್ಮಾನ ಮಾಡಿರುವುದು ಸಂತೋಷ ತಂದಿದೆ ಎಂದು ಒಕ್ಕೂಟಕ್ಕೆ ಕೃತಜ್ಞತೆ ಸಲ್ಲಿಸಿದರು.
ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಫಲಾನುಭವಿಗಳ ಮಾಹಿತಿ ನೀಡಿದರು. ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಆರ್ ಜೆ ನಯನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನೂಪ್ ಶೆಟ್ಟಿ ಸುರತ್ಕಲ್ ಪಾರ್ಥಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಯೋಜನೆಯಡಿ ವೈದ್ಯಕೀಯ, ಶಿಕ್ಷಣ, ವಿವಾಹ, ವಸತಿ ಇತರ ಆರ್ಥಿಕ ಸಂಕಷ್ಟದಲ್ಲಿರುವ ಫಲಾನುಭವಿಗಾಗಿ ಒಟ್ಟು 16 ಲಕ್ಷ ರೂ. ಮೊತ್ತದ ಚೆಕ್ ಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ಆದರ್ಶ್ ಶೆಟ್ಟಿ ಹಾಲಾಡಿ, ಉದ್ಯಮಿ ಅಶೋಕ ಶೆಟ್ಟಿ ಬೆಳ್ಳಾಡಿ, ಜತೆ ಕಾರ್ಯದರ್ಶಿ ಸತೀಶ ಅಡಪ ಸಂಕಬೈಲ್ ಇದ್ದರು.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲು, ಕೊಲ್ಲಾಡಿ ಬಾಲಕೃಷ್ಣ ರೈ, ವಲಯ ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಒಕ್ಕೂಟದ ಸಿಬ್ಬಂದಿಗಳು, ಫಲಾನುಭವಿಗಳು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.