ಬಂಟ್ಸ್ ನ್ಯೂಸ್, ಮಂಗಳೂರು : ನಾನು ಯಾವುದೇ ರಾಜಕೀಯ ಪಕ್ಷದ ಬೆಂಬಲಿಗನಲ್ಲ, ರಾಜಕೀಯದ ಎಂಪಿ, ಎಂಎಲ್ಸಿ ಹುದ್ದೆಗಳು ಬೇಕಾಗಿಲ್ಲ, ನನಗೆ ಎಲ್ಲಾ ಸಮಾಜದವರೂ ಸಮಾನರು, ಒಕ್ಕೂಟದ ಸಮಾಜ ಸೇವೆಯಲ್ಲಿ ಶಕ್ತಿಯಾಗಿ ನನ್ನನ್ನು ಬೆಂಬಲಿಸಿ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ಅವರು ಡಿ. 23ರಂದು ಬಂಟ್ಸ್ ಹಾಸ್ಟೇಲ್ ಬಳಿಯ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರುಗಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಡಳಿತ ಮಂಡಳಿ ಸಭೆ, ಸಾಧಕರಿಗೆ ಸನ್ಮಾನ ಹಾಗೂ ಸಮಾಜ ಕಲ್ಯಾಣ ಕಾರ್ಯಕ್ರಮದ ಮೂಲಕ ಫಲಾನುಭವಿಗಳಿಗೆ ಚೆಕ್ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಮಾಜದಲ್ಲಿರುವ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಕಷ್ಟದಲ್ಲಿರುವ ಜನರಿಗೆ ನೀಡಲಾಗುತ್ತಿದೆ. ಈಗಾಗಲೇ ಏಳರಿಂದ ಎಂಟು ಕೋಟಿ ರೂ. ಹಣವನ್ನು ಸಮಾಜದ ಮತ್ತು ಇತರ ಸಮಾಜದ ಜನರಿಗೂ ನೀಡಲಾಗಿದೆ. ಎಲ್ಲಾ ಸಮುದಾಯದವರನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸವನ್ನು ಒಕ್ಕೂಟ ಮಾಡುತ್ತಿದೆ. ಸಮಾಜದಲ್ಲಿರುವ ಸಂಘಗಳು ಕೇವಲ ಮಹಾಸಭೆಗೆ ಮಾತ್ರ ಸೀಮಿತವಾಗದೆ ಕಾರ್ಯಚಟುವಟಿಕೆಗಳ ಮೂಲಕ ಸಮಾಜದ ಏಳಿಗೆಗೆ ದುಡಿಯುವಂತಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಸಭೆಯನ್ನು ಉದ್ದೇಶಿಸಿ ಹೇರಂಬ ಆಗ್ರೋ ಕೆಮಿಕಲ್ ಸಿಎಂಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಮಾತನಾಡಿ, ನಮಗೆ ಸಮಾಜ ಸೇವೆ ಮಾಡಲು ಮನಸ್ಸಿದೆ. ಆದರೆ ಉದ್ಯಮದ ಜಂಜಾಟದಲ್ಲಿ ಎಲ್ಲವನ್ನೂ ಪರಿಶೀಲಿಸಿ ಮಾಡಲು ಸಾಧ್ಯವಿಲ್ಲ. ಐಕಳ ಹರೀಶ್ ಶೆಟ್ಟಿ ಸಾರಥ್ಯದಲ್ಲಿ ಒಕ್ಕೂಟವು ಸೂಕ್ತ ರೀತಿಯಲ್ಲಿ ಸಮಾಜಮುಖಿ ಕಾರ್ಯ ಮಾಡುತ್ತಿದ್ದು ಪ್ರತಿ ವರ್ಷವೂ 50 ಲಕ್ಷ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಒಕ್ಕೂಟದ ಸ್ವಂತ ಕಟ್ಟಡ ನಿರ್ಮಾಣಕ್ಕೂ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪತ್ರಕರ್ತರಾದ ಭಾಸ್ಕರ ರೈ ಕಟ್ಟ, ಲೀಲಾಕ್ಷಿ ಬಿ. ಕರ್ಕೇರಾ, ಶರತ್ ಶೆಟ್ಟಿ ಕಿನ್ನಿಗೋಳಿ, ನವೀನ್ ಶೆಟ್ಟಿ ಎಡ್ಮೆಮಾರ್, ಆರ್. ಜೆ. ನಯನಾ ಶೆಟ್ಟಿ, ಕುಮಾರಿ ಸ್ಪೂರ್ತಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿ ಒಟ್ಟು 68 ಮಂದಿಗೆ 11 ಲಕ್ಷ ರೂಪಾಯಿ ಪರಿಹಾರ ಧನದ ಚೆಕ್‍ನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಿತರಿಸಿದರು. ವೈದ್ಯಕೀಯ, ಮದುವೆ, ಶಿಕ್ಷಣ, ದತ್ತು ಸ್ವೀಕಾರ, ಮನೆರಿಪೇರಿ ಮತ್ತು ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಚೆಕ್‍ನ್ನು ನೀಡಲಾಯಿತು.
ವೇದಿಕೆಯಲ್ಲಿ ಒಕ್ಕೂಟದ ಪೋಷಕ, ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ, ಎಂಎಲ್ಸಿ ಮಂಜುನಾಥ ಭಂಡಾರಿ, ಯುವ ನಾಯಕ ಮಿಥುನ್ ರೈ, ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್‍ದಾಸ ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲು, ಒಕ್ಕೂಟದ ಪೋಷಕರಾದ ಥಾಣೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ ಇದ್ದರು.
ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವನೆಗೈದರು. ಪಟ್ಲ ಸತೀಶ್ ಶೆಟ್ಟಿ ಪ್ರಾರ್ಥನೆಗೈದರು. ಪುರುಷೋತ್ತಮ ಭಂಡಾರಿ ನಿರೂಪಿಸಿದರು. ಸತೀಶ್ ಅಡಪ ಸಂಕಬೈಲು ವಂದಿಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಲ್ಕೆಬೈಲ್, ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಮತ್ತಿತರ ಬಂಟರ ಸಂಘಗಳ ಪ್ರಮುಖರು, ಸಹಾಯಧನ ಪಡೆಯಲು ಬಂದ ಫಲಾನುಭವಿಗಳು, ಒಕ್ಕೂಟದ ಸಿಬ್ಬಂದಿಗಳು ಉಪಸ್ಥಿತರಿದ್ದರು.