ಬೆಂಗಳೂರು : ಬೆಂಗಳೂರು ಬಂಟರ ಸಂಘ ನೀಡುವ ಪ್ರತಿಷ್ಠಿತ ಮೂಲ್ಕಿ ಸುಂದರರಾಮ್ ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ಮೂಲ್ಕಿ ಸುಂದರರಾಮ್ ಶೆಟ್ಟಿಯವರು ಬಂಟರ ಸಮಾಜದ ಅಭ್ಯುದಯಕ್ಕಾಗಿ ಅವಿರತ ಕೊಡುಗೆಗಳನ್ನು ನೀಡಿದ ಮಹಾನ್ ಚೇತನ. ಎಲ್ಲಾ ಸಮಾಜದ ಜನರ ಶ್ರೇಯೋಭಿವೃದ್ಧಿಗಾಗಿ ಭೇದಭಾವವಿಲ್ಲದೆ ಎಲ್ಲಾ ಸ್ತರದ ಜನರ ಜೀವನ ಸುಧಾರಣೆಗಾಗಿ ತನ್ನ ಧೀ ಶಕ್ತಿಯಿಂದ ಎಲ್ಲಾ ವರ್ಗದ ಜನರನ್ನು ಪ್ರೀತಿಸಿದ ಮತ್ತು ಉತ್ತುಂಗಕ್ಕೇರಿಸಿದ ಮಹಾನ್ ಚೇತನ. ವಿಜಯ ಬ್ಯಾಂಕ್ ಇದರ ಪುನಶ್ಚೇತನಕ್ಕಾಗಿ ಅವಿರತ ಶ್ರಮಿಸಿದ ಮತ್ತು ಉದ್ಯೋಗದಾತರಾಗಿ ಸಂಕಷ್ಟದಲ್ಲಿರುವ ಮಂದಿಗಳ ಜೀವನಾಡಿಯಾಗಿ ಮೂಡಿಬಂದ ಮೂಲ್ಕಿ ಸುಂದರರಾಮ್ ಶೆಟ್ಟಿ ಇವರ ಸವಿನೆನಪಿನ ಸ್ಮಾರಕ ಪ್ರಶಸ್ತಿಯನ್ನು ಬೆಂಗಳೂರು ಬಂಟರ ಸಂಘವು ಬಂಟ ಸಮಾಜದ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸಿದ ಮಹನೀಯರಿಗೆ ನೀಡಿ ಗೌರವಿಸುತ್ತಿದೆ.
ಇವರದೇ ಹಾದಿಯಲ್ಲಿ ಮುನ್ನಡೆದು ಸಮಾಜದಲ್ಲಿ ಕಷ್ಟದಲ್ಲಿರುವ ಜನರಿಗಾಗಿ ಮಿಡಿಯುವ ಬಂಟರ ಸಮಾಜದ ಭೀಷ್ಮ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಂಟರ ಕಣ್ಮಣಿ ಸಮಾಜ ಕಲ್ಯಾಣ ಯೋಜನೆಯ ರೂವಾರಿ ನೊಂದವರ ಆಶಾಕಿರಣ ಸಮಾಜಮುಖಿ ಚಿಂತಕ ದಿಮಂತ ನಾಯಕ ನಮ್ಮ ಹೆಮ್ಮೆಯ ಐಕಳ ಹರೀಶ್ ಶೆಟ್ಟಿಯವರು ಬೆಂಗಳೂರು ಬಂಟರ ಸಂಘದ ಪ್ರತಿಷ್ಠಿತ ಮೂಲ್ಕಿ ಸುಂದರರಾಮ್ ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಬಂಟ ಸಮಾಜದ ಹಾಗೂ ಇತರ ಸಮಾಜದ ಕಷ್ಟದಲ್ಲಿರುವ ನೂರಾರು ಜನರಿಗೆ ಸಹಾಯ ಮಾಡುವ ಮೂಲಕ ಬೆಳಕಾಗಿದ್ದಾರೆ.
ಐಕಳ ಹರೀಶ್ ಶೆಟ್ಟಿ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಮನೆಯಿಲ್ಲದವರಿಗೆ ಮನೆ ನಿರ್ಮಾಣ, ವೈದ್ಯಕೀಯ ಚಿಕಿತ್ಸೆಗೆ ಸಹಾಯ, ಬಡ ಹೆಣ್ಮಕ್ಕಳ ಮದುವೆಗೆ ಸಹಾಯ, ಶೈಕ್ಷಣಿಕ ಸಹಾಯ, ಮನೆ ನಿರ್ಮಾಣಕ್ಕೆ ಸಹಾಯ ಹಸ್ತ ಹೀಗೆ ಹಲವು ರೀತಿಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಆಸರೆಯಾಗಿದ್ದಾರೆ.
ವಿಶೇಷವಾಗಿ ತಮ್ಮ ಒಕ್ಕೂಟದ ತಂಡದ ಮೂಲಕ ಆರ್ಥಿಕ ಸಂಕಷ್ಟದಲ್ಲಿ ಇರುವ ಮನೆಗಳಿಗೆ ಸ್ವತಃ ಭೇಟಿ ಕೊಟ್ಟು ಅವರ ಕಷ್ಟವನ್ನು ಅವಲೋಕಿಸಿ ಸಹಾಯ ಹಸ್ತ ನೀಡಿ ಧೈರ್ಯ ತುಂಬುತ್ತಿದ್ದಾರೆ.
ಇಂದು ಬಂಟರ ಹಾಗೂ ಇತರ ಸಮಾಜದ ಧ್ವನಿಯಾಗಿರುವ ಐಕಳ ಹರೀಶ್ ಶೆಟ್ಟಿ ಅವರು ಸಮಾಜ ಸೇವೆಯ ಮಹಾನ್ ಚೇತನ ಮೂಲ್ಕಿ ಸುಂದರರಾಮ್ ಶೆಟ್ಟಿ ಪ್ರಶಸ್ತಿ ಪಡೆಯುತ್ತಿರುವುದು ಅವರ ಅಭಿಮಾನಿ ಬಳಗಕ್ಕೆ ಹೆಮ್ಮೆಯ ಸಂಗತಿಯಾಗಿದೆ.