ಸುರತ್ಕಲ್ : ಮಹಿಳಾ ದೌರ್ಜನ್ಯ ಮೊದಲಾದ ಸಂದರ್ಭ ಪೊಲೀಸ್ ಇಲಾಖೆ ನೆರವಿಗೆ ಸಾರ್ವಜನಿಕರು 112 ನಂಬರ್ ಅನ್ನು ಸಂಪರ್ಕಿಸಬಹುದು ಎಂದು ಸುರತ್ಕಲ್ ಠಾಣೆ ಕಾನೂನು ಸುವ್ಯವಸ್ಥೆ ವಿಭಾಗ ಎಸ್ಐ ಪುನೀತ್ ಗಾಂವ್ಕರ್ ಹೇಳಿದರು.
ಮಂಗಳೂರು ಪೊಲೀಸ್ ಕಮೀಷನರ್ ವ್ಯಾಪ್ತಿಯ ಮಹಿಳಾ ಸುರಕ್ಷೆಗಾಗಿ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆ ಮತ್ತು ಸುರತ್ಕಲ್ ಠಾಣೆ ಸಹಭಾಗಿತ್ವದಲ್ಲಿ ಸುರತ್ಕಲ್ ಬಂಟರ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ದೌರ್ಜನ್ಯ ತಡೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಲವು ಸಂದರ್ಭದಲ್ಲಿ ಮಹಿಳೆಯರ ಮೇಲೆ ಅಹಿತಕರ ಘಟನೆಗಳು ನಡೆಯುತ್ತವೆ. ಆದರೆ ಅದು ಪೊಲೀಸರಿಗೆ ಒಂದೆರಡು ಗಂಟೆಯ ನಂತರ ತಿಳಿಯುವುದು. ಇದರಿಂದ ಆರೋಪಿಗಳ ಪತ್ತೆ ತಡವಾಗಿ ಆಗುತ್ತದೆ. ಆದರೆ 112 ನಂಬರ್ ಬಗ್ಗೆ ಎಲ್ಲರಿಗೂ ಗೊತ್ತಾದರೆ ಈ ಆರೋಪಿಗಳ ತಕ್ಷಣ ಪತ್ತೆಗೆ ಸಹಕಾರಿಯಾಗುತ್ತದೆ ಎಂಬುದನ್ನು ಮತ್ತು ಪೊಲೀಸರು ಯಾವ ರಈತಿ ಸ್ಪಂದಿಸುತ್ತಾರೆ ಎಂಬುದನ್ನು ತಿಳಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಮಹಿಳಾ ದೌರ್ಜನ್ಯ ಪ್ರಕರಣ ಸಣ್ಣ ಮಟ್ಟದಲ್ಲಿರುವಾಗಲೇ ಪೊಲೀಸರಿಗೆ ಮಾಹಿತಿ ನೀಡುವುದು ಸೂಕ್ತ ಎಂದು ಸುರತ್ಕಲ್ ಪೊಲೀಸ್ ಠಾಣೆ ಎಚ್ಸಿ ಮಮತಾ ಶೆಟ್ಟಿ ಹೇಳಿದರು. ಇದು ಮಹಿಳೆಯರಲ್ಲಿ ಧೈರ್ಯ ತುಂಬುವ ಕೆಲಸ ಎಂದು ಸುರತ್ಕಲ್ ಠಾಣೆ ಎಚ್ಸಿ ಗೀತಾ ತಿಳಿಸಿದರು.
ಸುರತ್ಕಲ್ ಬಂಟರ ಸಂಘ ಮಹಿಳಾ ವೇದಿಕೆ ಅಧ್ಯಕ್ಷೆ ಬೇಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಎಸ್. ಪೂಂಜ, ಮಹಿಳಾ ವೇದಿಕೆ ಉಪಾಧ್ಯಕ್ಷೆ ಸುಜಾತಾ ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಜೆ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಾಜೇಶ್ವರಿ ಡಿ ಶೆಟ್ಟಿ ನಿರೂಪಿಸಿದರು. ಸತೀಶ್ ಶೆಟ್ಟಿ ಬಾಳಿಕೆ ಸಹಕರಿಸಿದರು. ಸಂಘದ ಸದಸ್ಯೆಯರೊಂದಿಗೆ ಸಂವಾದ ಅಪರಾಧ ತಡೆ ಮಾಹಿತಿ ನಡೆಯಿತು.