ಕೊರೋನಾ ಭೀತಿಯಲ್ಲಿ ಪೂರ್ವ ಪ್ರಾಥಮಿಕ ಚಿಣ್ಣರಿಗೆ ಆನ್ಲೈನ್ ತರಗತಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕೊರೋನಾ ಭೀತಿಯಲ್ಲಿ ಪೂರ್ವ ಪ್ರಾಥಮಿಕ ಚಿಣ್ಣರಿಗೆ ಆನ್ಲೈನ್ ತರಗತಿ

Share This

ಮಂಗಳೂರು: ಮಕ್ಕಳು ಉತ್ತಮ ಭವಿಷ್ಯದ ರೂವಾರಿಗಳು. ಉತ್ತಮ ಆರೋಗ್ಯವಿದ್ದರೆ ಶಿಕ್ಷಣ.ಮಕ್ಕಳಿದ್ದರೆ ಶಿಕ್ಷಣ ಸಂಸ್ಥೆಗಳು . ಶಾಲೆ ಇದ್ದರೆ ಶಿಕ್ಷಕರುಕರೋನದ ಭೀಕರ ಸೋಂಕು ಹರಡುತ್ತಿರುವ ಸಮಯದಲ್ಲಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ಬೇಕೇ, ಬೇಡವೇ ಎಂಬ ಚರ್ಚೆ ನಡೆಯುತ್ತಿದೆ. ಬಗ್ಗೆ ಸಾರ್ವಜನಿಕ ಅಭಿಪ್ರಾಯ ಏನಿರಬಹುದು.

ಮಕ್ಕಳಿಗೆ ಅಧಿಕೃತ ಕಲಿಕೆ ಆರಂಭವಾಗುವುದು 1ನೇ ತರಗತಿಯಿಂದ. ಇತ್ತೀಚಿನ ವರ್ಷಗಳಲ್ಲಿ ಪೂರ್ವ ಪ್ರಾಥಮಿಕ ಅಥವಾ ನರ್ಸರಿ ಶಾಲೆಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಎರಡು ಕಾರಣವಿದೆ. ಒಂದು ಉದ್ಯೋಗದಲ್ಲಿರುವ ಪೋಷಕರಿಗೆ ಮಕ್ಕಳನ್ನು ಸುರಕ್ಷಿತವಾಗಿಡಲು ವ್ಯವಸ್ಥೆ ಬೇಕು. ಎರಡು ಪೋಷಕರ ಅನಿವಾರ್ಯತೆ ಮತ್ತು ಅಸಹಾಯಕತೆ ಅರಿತ ಶಿಕ್ಷಣ ವ್ಯಾಪಾರೀಕರಣದ ಕೈವಾಡ . ವಿವಿಧ ಹೆಸರಿನಲ್ಲಿ ನರ್ಸರಿ ಶಾಲೆಗಳ ದೊಡ್ಡ ಬೋರ್ಡ್, ಫ್ಲೆಕ್ಸ್ ಹಾಕಿ ಸಣ್ಣ ಕೊಠಡಿಯಲ್ಲಿ ಮಕ್ಕಳನ್ನು ಕೂಡಿ ಹಾಕುವ ಲಾಭದ ಹಿಂದೆ ಬಿದ್ದಿರುವ ಮಾಯಾ ಜಾಲ.


ಇದನ್ನು ಅರಿಯದೆ  ಮಕ್ಕಳನ್ನು ಸೇರಿಸುವ ಪೋಷಕರು.ಏನಾದರೊಂದು ಉದ್ಯೋಗ ಮಾಡಲೇ ಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ಮಕ್ಕಳನ್ನು ಆಂಗ್ಲ ಮಾಧ್ಯಮ ನರ್ಸರಿಗಳಿಗೆ ಸೇರಿಸಿದರೆ, ಪ್ರಾಥಮಿಕ ಶಿಕ್ಷಣ ಸುಲಭವಾಗತ್ತದೆ ಎಂಬ ಭ್ರಮೆಯ  ಪೂರ್ಣ ಲಾಭವನ್ನು  ನಾಯಿಕೊಡೆಯಂತಿರುವ  ನರ್ಸರಿಗಳು ನಗದೀಕರಣ ಮಾಡುತ್ತಿವೆ.


ಚಿಕ್ಕ ಮಕ್ಕಳ ಸ್ವಾನುಭವ, ಸೃಜನಾತ್ಮಕ ಕಲಿಕೆಯ ಬಗ್ಗೆ ಜಾಗೃತಿ ಮೂಡಿಸಿದವರು ಮರಿಯಾ ಮಾಂಟೆಸರಿ.ಎಳೆಯ  ಮಕ್ಕಳಿಗೆ ಸ್ವಾನುಭವದ ಕಲಿಕೆ ಉತ್ತಮ. ಇಂತಹ ಪರಿಸರ ಚಿಕ್ಕ ಮಕ್ಕಳಿಗೆ ಸಿಗಬೇಕು . ಎಳೆಯ ಮಗು ಬಣ್ಣದ ಆಟಿಕೆಗಳಿಗೆ, ವಸ್ತುಗಳಿಗೆ ಬೇಗ ಸ್ಪಂದಿಸುತ್ತದೆ.ಅದಕ್ಕೆ ಹೇಳಿದ್ದು ಬಣ್ಣದಿಂದ ಕಲಿಕೆ. ನಾವು ನಿತ್ಯ ನೋಡುವ ನಮ್ಮ ಸುತ್ತಲಿನ ಜೀವಿಗಳು, ವಸ್ತುಗಳು ಬಣ್ಣಗಳಿಂದ ತಯಾರಿಸಿ ಮಕ್ಕಳಿರುವ ಕೊಠಡಿಯಲ್ಲಿ ಇಟ್ಟರೆ ಮಗು ತನಗೆ  ಸಹ್ಯವೆನಿಸುವ ಬಣ್ಣಕ್ಕೆ ಆಸಕ್ತಿ ತೋರುತ್ತದೆ.ಅದನ್ನು ಹತ್ತಿರದಿಂದ ಮತ್ತೆ ಮತ್ತೆ  ಗಮನಿಸಿ, ಸ್ಪರ್ಶಿಸಿ,ತನ್ನ ಆಸಕ್ತಿ, ಅಭಿರುಚಿ ವ್ಯಕ್ತ ಪಡಿಸುವುದು ಕಲಿಕೆಗೆ ಪೂರಕವಾಗುತ್ತದೆ.


ಬಣ್ಣದಿಂದ ವಸ್ತು, ವಸ್ತುವಿನಿಂದ ಆಕರ್ಷಣೆ, ಆಕರ್ಷಣೆಯಿಂದ  ಆಟ, ಆಟದಿಂದ ಪಾಠ, ಪಾಠದಿಂದ ಕಲಿಕೆ. ಇದನ್ನು ಬಂಡವಾಳವಾಗಿಸಿಕೊಂಡ ಮುಖವಾಡ ಧರಿಸಿದ  ಶಿಕ್ಷಣ ಪ್ರೇಮಿಗಳು ನರ್ಸರಿ ಶಾಲೆಗಳನ್ನು ಸ್ಥಾಪಿಸಿ ಡೊನೇಷನ್, ಶುಲ್ಕದ ರೂಪದಲ್ಲಿ ಅಪಾರ ಪ್ರಮಾಣದ  ಹಣ ಸಂಪಾದನೆ ಮಾಡುತ್ತಿದ್ದಾರೆ. ನರ್ಸರಿ ಶಾಲೆಗಳಿಗೆ ಬೇರೆ ಬೇರೆ ಹೆಸರು, ಬೋರ್ಡ್, ಫ್ಲೆಕ್ಸ್, ಪ್ರಚಾರವೇ ಮೂಲ ಬಂಡವಾಳ. ಪೋಷಕರಿಂದ ಹಣ ಸುಲಿಗೆ ಮಾಡುವ ನರ್ಸರಿ ಹಾವಳಿ ತಪ್ಪಿಸಲು ರಾಜ್ಯ ಸರ್ಕಾರ ಪರ್ಯಾಯ  ಅಂಗನವಾಡಿ, ಬಾಲವಾಡಿ, ಶಿಶು ಕೇಂದ್ರ ಆರಂಭಿಸಿದ್ದು ಸಾಮಾನ್ಯ ಜನರಿಗೆ ಅನುಕೂಲವಾಗಿದೆ.


ಚಿಕ್ಕ ಮಕ್ಕಳ ಕಲಿಕೆ ಕನಸು ನನಸಾಗಿಸುವ ಪೋಷಕರನ್ನು  ನರ್ಸರಿ ಶಾಲೆಗಳು ತಮ್ಮತ್ತ ಸೆಳೆದುಕೊಳ್ಳಲು ಯಶಸ್ವಿಯಾಗಿವೆ.ನರ್ಸರಿಗಳು ಅಣಬೆಯಂತೆ  ಸ್ಥಾಪನೆಯಾಗಲು ಶಿಕ್ಷಣ ವ್ಯಾಪಾರಿಕಾರಣದ ದುರುದ್ದೇಶವಿದೆ .ಇದಕ್ಕೆ ಇಂಬು ಕೊಡುವಂತೆ 3 ರಿಂದ 6 ನೇ ವಯಸ್ಸಿನೊಳಗಿನ ಮಕ್ಕಳಿಗೆ ಆನ್ ಲೈನ್   ಶಿಕ್ಷಣದ ಪ್ರಸ್ತಾಪ.ಇದು ಮಕ್ಕಳ ಮೇಲಿನ ಕಾಳಜಿಯೋ ಅಥವಾ  ಹಣ ಸಂಗ್ರಹಿಸುವ  ಹುನ್ನಾರವೇ? 


ಹೆತ್ತವರು ಮತ್ತು ಮಕ್ಕಳಿಗೆ ಧೈರ್ಯ, ಆತ್ಮವಿಶ್ವಾಸ ಮೂಡಿಸಿ ಕರೋನ ಸೋಂಕಿನ ಭಯ, ಒತ್ತಡದಿಂದ ಪಾರು ಮಾಡಬೇಕಾದ ಸರ್ಕಾರ ನರ್ಸರಿ ಶಾಲೆಗಳನ್ನು 1 ವರ್ಷ ಪ್ರಾರಂಭ ಮಾಡಲು ಅನುಮತಿ ನೀಡದೆ ಹೋದರೂ ಆಗುವುದೇನು ಇಲ್ಲ. ಸದ್ಯದ  ಪರಿಸ್ಥಿತಿಯಲ್ಲಿ ಪೂರ್ವ ಪ್ರಾಥಮಿಕ ಮಕ್ಕಳಿಗೆ ಆನ್ ಲೈನ್ ತರಗತಿ ಬೇಡ.ಶಾಲೆ ಆರಂಭವೂ ಬೇಡ. ದಿಟ್ಟ ನಿರ್ಧಾರ ಪೋಷಕರು ಮಾಡಬೇಕು. ಮಕ್ಕಳ ಆರೋಗ್ಯ ಚೆನ್ನಾಗಿ ನೋಡಿ ಕೊಳ್ಳಿ. ನೋಡಿ ಕಲಿವ, ಆಡಿ ಬೆಳೆವ ವಾತಾವರಣ ಸದ್ಯದ ಮಟ್ಟಿಗೆ ಮನೆಯಲ್ಲಿ ಇರಲಿ. ಮುಂದೆ ಪರಿಸ್ಥಿತಿ ಸುಧಾರಿಸಿದರೆ ಎಲ್ಲಾ ಅವಕಾಶ ಮುಕ್ತವಾಗಿರುತ್ತದೆ. ಬರಹ: ಅಶೋಕ್ ಕುಮಾರ್ ಶೆಟ್ಟಿ

Pages