ಬಂಟ್ಸ್ ನ್ಯೂಸ್, ಮಂಗಳೂರು: ಸಮಾಜದಲ್ಲಿ ಪ್ರಭಾವಿಗಳಾದವರು ಒಂದಿಲ್ಲೊಂದು ಮಾರ್ಗದಿಂದ ತಮ್ಮ ಕಾರ್ಯಸಾಧನೆ ಮಾಡಿಕೊಳ್ಳುತ್ತಾರೆ. ಆದರೆ ಅಲಕ್ಷಿತರ ಕಡೆಗೆ ಮಾನವೀಯ ದೃಷ್ಟಿ ಹರಿಸುವವರು ಕಡಿಮೆ. ಅಂಥವರನ್ನು ಕಂಡುಹಿಡಿದು ನಿಗಮದ ಮೂಲಕ ಕೈಲಾದ ಸೇವೆ ಸಲ್ಲಿಸುವ ಅವಕಾಶವನ್ನು ಮುಖ್ಯಮಂತ್ರಿಗಳು ಒದಗಿಸಿಕೊಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದ್ದಾರೆ.
ಅವರು ಕೊಲ್ಯ ಸೌಭಾಗ್ಯ ಭವನದಲ್ಲಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ (ವಿರಾಂಟ್) ಏರ್ಪಡಿಸಿದ್ದ 'ಅಭಿನಂದನಾ ಸಮಾರಂಭ' ದಲ್ಲಿ ಸನ್ಮಾನಕ್ಕೆ ಉತ್ತರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ನೂತನವಾಗಿ ಆರಂಭವಾಗಿರುವ ನಿಗಮಕ್ಕೆ ಸ್ಪಷ್ಟ ಕಾರ್ಯಯೋಜನೆಗಳನ್ನು ರೂಪಿಸಿ, ಕರ್ನಾಟಕದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಆಯಾ ಭಾಗದ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಸುಮಾರು 46 ಜಾತಿ ಜನಾಂಗದವರನ್ನು ಒಳಗೊಂಡ ಅಲೆಮಾರಿ ಸಮುದಾಯಕ್ಕೆ ಡೇರೆ ಮುಕ್ತ ಸ್ವಾಭಿಮಾನದ ಬದುಕು ನೀಡುವ ಕುರಿತು ಚಿಂತಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿರಾಂಟ್ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಪ್ರತಿಷ್ಠಾನದ ವತಿಯಿಂದ ರವೀಂದ್ರ ಶೆಟ್ಟರನ್ನು ಸನ್ಮಾನಿಸಿದರು. ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ' ಉಳ್ಳಾಲ ರಾಣಿ ಅಬ್ಬಕ್ಕನ ಕುರಿತು ಐತಿಹಾಸಿಕ ದಾಖಲೆಗಳನ್ನು ಕಲೆಹಾಕಿ ನಾಡಿನಾದ್ಯಂತ ಸಾಂಸ್ಕೃತಿಕ ಜಾಗೃತಿ ಮೂಡಿಸುವ ಸಲುವಾಗಿ ಸ್ಥಾಪಿತವಾಗಿರುವ ವಿರಾಂಟ್ ಸಮಿತಿಯ ಪ್ರಧಾನ ಸಂಚಾಲಕರೂ ಆಗಿರುವ ರವೀಂದ್ರ ಶೆಟ್ಟರ ಮೇಲೆ ಸರಕಾರ ವಿಶೇಷ ಜವಾಬ್ದಾರಿಯನ್ನು ಹೊರಿಸಿದೆ. ಈ ಸಂದರ್ಭದಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿರುವ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ಅವರಿಗೆ ಎಲ್ಲಾ ಬಗೆಯ ನೆರವು ನೀಡಬೇಕಿದೆ ' ಎಂದರು. ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಭಾಸ್ಕರ ಐತಾಳ್, ಹಿರಿಯ ಸಮಾಜಸೇವಕ ಸೀತಾರಾಮ ಬಂಗೇರ , ರಾಗತರಂಗ ಮಂಗಳೂರು ಅಧ್ಯಕ್ಷ ವಾಮನ್ ಬಿ.ಮೈಂದನ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಉಪಾಧ್ಯಕ್ಷ ಕೆ.ತಾರಾನಾಥ ರೈ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸುಮಾ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಸಂಚಾಲಕರಾದ ತ್ಯಾಗಂ ಹರೇಕಳ ವಂದಿಸಿದರು. ವಿಜಯಲಕ್ಷ್ಮಿ ಕಟೀಲ್ ಮತ್ತು ಗೀತಾ ಜ್ಯುಡಿತ್ ಸಲ್ದಾನ ಶುಭಾಶಂಸನೆಗೈದರು. ಲೋಕನಾಥ ರೈ, ಜಗದೀಶ್ ಶೆಣೈ, ಆನಂದ ಶೆಟ್ಟಿ, ಬಿ.ಸಿ.ರಾವ್, ಮೋಹನದಾಸ್ ರೈ , ರೋಹಿತ್ ಕುಮಾರ್ ಉಪಸ್ಥಿತರಿದ್ದರು.