ಬಂಟ್ಸ್ ನ್ಯೂಸ್, ಸುರತ್ಕಲ್: ದೊಡ್ಡಸ್ಥಿಕೆ ಶಾಶ್ವತವಲ್ಲ ಬಡತನ ಮಾತ್ರವೇ ಸ್ಥಿರವಾದುದು, ಸಂಬಂಧದ ಮೇಲೆ ಭರವಸೆಯಿಡಿ ಹೊರತು ದುಡ್ಡು-ವ್ಯವಹಾರದ ಮೇಲಲ್ಲ ಎಂದು ಉದ್ಯಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚೆಲ್ಲಡ್ಕ ಕುಸುಮೋದರ ಡಿ. ಶೆಟ್ಟಿ ಅವರು ಹೇಳಿದರು.





ಅವರು ಡಿ.20ರಂದು
ಸುರತ್ಕಲ್ ಬಂಟರ ಸಂಘದ ವಾರ್ಷಿಕ ಸಮಾವೇಶ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ
ಸನ್ಮಾನ ಸ್ವೀಕರಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಾವು ಯಾವುದೇ ಕುರ್ಚಿ, ಸನ್ಮಾನವ ಹುಡುಕಿ
ಹೋಗಬೇಕಿಲ್ಲ, ನಮ್ಮಲ್ಲಿ ಅರ್ಹತೆಯಿಲ್ಲದ್ದರೆ ಅದೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ನಾವು ಮಾಡುವ
ಸೇವೆಯೂ ಪ್ರಚಾರದ ಅಭಿಲಾಷೆಯಿಲ್ಲದೆ ಮಾಡಿದಾಗ ಸಾರ್ಥಕತೆ ಪಡೆಯುತ್ತದೆ. ಇಂದು ಅಮ್ಮನ ಹೆಸರಿನಲ್ಲಿ
ಭವಾನಿ ಫೌಂಡೇಶನ್ ಮೂಲಕ ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೆ
ನೀಡುತ್ತಿದ್ದೇನೆ. ಎಲ್ಲಾ ಜಾತಿಯವರನ್ನು ಒಂದುಗೂಡಿಸಿ ಬೆಳೆಸಿ ಗೌರವಿಸುವ ಕಾರ್ಯವಾಗಬೇಕು. ಅಂತಹ
ಕಾರ್ಯವನ್ನು ಸುರತ್ಕಲ್ ಬಂಟರ ಸಂಘವು ಎಲ್ಲಾ ಸಮಾಜವ ಒಗ್ಗೂಡಿಸಿ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಮುಂದಿನ ಯುವಪೀಳಿಗೆಗೆ
ನಮ್ಮ ಸಂಸ್ಕೃತಿ, ಸಂಸ್ಕಾರದ ಅರಿವನ್ನು ಮೂಡಿಸಬೇಕಾಗಿದೆ. ಕನ್ನಡದದೊಂದಿಗೆ ಮಾತೃಭಾಷೆ ತುಳುವನ್ನು
ಮರೆಯದೆ ಬೆಳೆಸುವ ಕಾರ್ಯವಾಗಬೇಕು. ಇಂದು ಸುರತ್ಕಲ್ ಬಂಟರ ಸಂಘವು ಒಗ್ಗಟ್ಟು, ಶಿಸ್ತಿನಿಂದ ಇಂತಹ
ಕಾರ್ಯಕ್ರಮ ಮಾಡುತ್ತಿರುವುದು ಮೆಚ್ಚುಗೆಯ ವಿಷಯ. ಮುಂದಿನ ದಿನಗಳಲ್ಲಿ ಸುರತ್ಕಲ್ ಬಂಟರ ಸಂಘದ ಜಾಗ
ಖರೀದಿಗೆ ತನ್ನಿಂದಾಗುವ ಸಹಾಯ ಹಾಗೂ ಸುರತ್ಕಲ್ ಬಂಟರ ಸಂಘಕ್ಕೆ ಹವಾನಿಯಂತ್ರಿತ ಅಳವಡಿಸುವ ಬಗ್ಗೆ
ಭರವಸೆ ನೀಡಿದರು.
ಸಮಾರಂಭವನ್ನು ಮೂಲ್ಕಿ ಶಾಸಕ ಎ. ಉಮಾನಾಥ್ ಕೋಟ್ಯಾನ್ ದೀಪ ಬೆಳಗಿಸಿ ಉದ್ಠಾಟಿಸಿದರು. ನಂತರ ಮಾತನಾಡಿದ ಅವರು ಬಂಟ ಸಂಘಗಳಲ್ಲಿ ಸುರತ್ಕಲ್ ಬಂಟರ ಸಂಘವು ಮಾದರಿ ಸಂಘವಾಗಿದೆ. ಶೈಕ್ಷಣಿಕ, ಸಾಂಸ್ಕೃತಿಕ, ಸಮಾಜ ಸೇವೆ ಇನ್ನಿತರ ಎಲ್ಲಾ ವಿಚಾರಗಳಲ್ಲೂ ಸುರತ್ಕಲ್ ಬಂಟರ ಸಂಘವು ಮುಂದಿದೆ. ಇಂದು ಸಮಾಜದಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಸಮಾಜದವರನ್ನು ಗುರುತಿಸುವ ಅಪೂರ್ವ ಕಾರ್ಯವನ್ನು ಸಂಘವು ಮಾಡಿದೆ. ಈ ಸಂಘವು ಶತಶತಮಾನಗಳ ಕಾಲ ಬೆಳೆದು ಸಮಾಜಕ್ಕೆ ಮಾದರಿಯಾಗಲಿ ಎಂದು ಹಾರೈಸಿದರು.




ಸಮಾರಂಭದಲ್ಲಿ ಕಂಬಳ
ಕ್ರೀಡಾ ಪುರಸ್ಕೃತ ಖಂಡಿಗೆ ಗೋಪಾಲಕೃಷ್ಣ ಸರ್ವೋತ್ತಮ ಪ್ರಭು, ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಪುರಸ್ಕೃತ ಪದ್ಮನಾಭ ಕೆ. ಸುರತ್ಕಲ್, ದಕ ಜಿಲ್ಲಾ ರಾಜ್ಯೋತ್ಸವ ಪಶಸ್ತಿ ಪುರಸ್ಕೃತ ಯೋಗಿಶ್ ಕಾಂಚನ್
ಬೈಕಂಪಾಡಿ, ವ್ಯೆದ್ಯಕೀಯ ಕ್ಷೇತ್ರದ ಸೇವೆಗಾಗಿ ಸುರತ್ಕಲ್ ಪುಷ್ಪ ಡಯಾಗ್ನೋಸ್ಟಿಕ್ ಡಾ. ಸುರೇಶ್ ಹಾಗೂ
ಮಿಸ್ಕಿತ್ ಆಸ್ಪತ್ರೆ ಕಾನದ ನಿರ್ದೇಶಕರಾದ ಡಾ.ಜಿ. ಕ್ಲಿಪರ್ಡ್ ಅವರಿಗೆ ಸುರತ್ಕಲ್ ಬಂಟರ ಸಂಘವು ಸನ್ಮಾನಿಸಿ
ಗೌರವಿಸಿತು.
ಶೈಕ್ಷಣಿಕ ಮತ್ತು
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಅಭಿನಂದನೆ, ಮಧ್ಯಬೀಡು ದಿ. ರಾಘು ಸಿ. ಶೆಟ್ಟಿ ಇವರ
ಸ್ಮರಣಾರ್ಥ ಡಾ. ಪಿ.ವಿ. ಶೆಟ್ಟಿ ಮುಂಬಯಿ ಅವರು ವರ್ಷಂಪ್ರತಿ ನೀಡುವ ವಿದ್ಯಾರ್ಥಿವೇತನ ವಿತರಣೆ,
ಭಿನ್ನ ಸಾಮರ್ಥ್ಯ ಹಾಗೂ ವಿಕಲಚೇತನರಿಗೆ ಸಹಾಯಹಸ್ತ ಕಾರ್ಯಕ್ರಮವು ಜರಗಿತು.
ಸಭಾ ಕಾರ್ಯಕ್ರಮದ
ಮೊದಲು ನಡೆದ ಗ್ರಾಮವಾರು ನೃತ್ಯ ಸ್ಪರ್ಧೆಯಲ್ಲಿ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಕುಳಾಯಿ-ಹೊಸಬೆಟ್ಟು
ಗ್ರಾಮ, ದ್ವಿತೀಯ ಇಡ್ಯಾ, ಚೇಳ್ಯಾರ್ ಗ್ರಾಮ, ತೃತೀಯ ಸುರತ್ಕಲ್ ಗ್ರಾಮ ಪ್ರಶಸ್ತಿ ಪಡೆಯಿತು. ಸೀನಿಯರ್
ವಿಭಾಗದಲ್ಲಿ ಪ್ರಥಮ ಇಡ್ಯಾ, ದ್ವಿತೀಯ ಸುರತ್ಕಲ್, ತೃತೀಯ ಕಾಟಿಪಳ್ಳ ಗ್ರಾಮ ಪ್ರಶಸ್ತಿ ಪಡೆಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ಸಣ್ಣ ನೀರಾವರಿ ವಿಭಾಗ ಕಾರ್ಯಪಾಲಕ ಅಭಿಯಂತರರು ಗೋಕುಲ್ ದಾಸ್, ಮುಂಬಯಿ ಬ0ಟರ ಸಂಘ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಕರ್ನೂರ್ ಮೋಹನ್ ರೈ, ಮಂಗಳೂರು ಸಂಸ್ಕಾರ ಭಾರತಿ ಅಧ್ಯಕ್ಷ ಪುರುಷೋತ್ತಮ ಕೆ ಭಂಡಾರಿ, ಬ0ಟರ ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಶೆಟ್ಟಿ, ಸಂಘದ ಉಪಾಧ್ಯಕ್ಷ ನವೀನ್ ಶೆಟ್ಟಿ ಪಡ್ರೆ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಜತೆ ಕಾರ್ಯ ದರ್ಶಿ ಪ್ರವೀಣ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುಧಾಕರ್ ಎಸ್ ಪೂಂಜ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಲೋಕಯ್ಯ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ರಾಜೇಶ್ವರಿ ಡಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.