BUNTS NEWS, ಉತ್ತರಕನ್ನಡ: ಮುರುಡೇಶ್ವರದ ಅಭಿವೃದ್ಧಿಯ ಹರಿಕಾರ, ಕೊಡುಗೈ ದಾನಿ, ಉದ್ಯಮಿ ಆರ್ ಎನ್ ಶೆಟ್ಟಿ (92) ಅವರು ಡಿ.17ರ ಮುಂಜಾನೆ ನಿಧನರಾದರು.
ಡಾ. ರಾಮ ನಾಗಪ್ಪ ಶೆಟ್ಟಿ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15ರಂದು ಜನಿಸಿದ್ದರು. ಮುರುಡೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತಾಧಿಯಾಗಿ ಈ ಸ್ಥಳವನ್ನು ಪ್ರೇಕ್ಷಣೀಯ ಕ್ಷೇತ್ರವನ್ನಾಗಿ ಪರಿವರ್ತಿಸಿದ ಕೀರ್ತಿ ಅವರದು. ಮುರುಡೇಶ್ವರದ ಸಮುದ್ರ ತೀರದಲ್ಲಿ 123 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಸ್ಥಾಪಿಸಿದ್ದರು.
ಆರ್ ಎನ್ ಶೆಟ್ಟಿ ಅವರು ಉದ್ಯಮಿಯಾಗಿ ಬಹುದೊಡ್ಡ ಹೆಸರು ಮಾಡಿದ್ದರು. 1967ರಲ್ಲಿ ಪಾಲುದಾರ ಕಂಪೆನಿಯಾದ ಆರ್ ಎನ್ ಶೆಟ್ಟಿ ಆಂಡ್ ಕಂಪೆನಿ ಆರಂಭಿಸಿದ್ದರು. ಕಂಪೆನಿ ಮೂಲಕ ಅನೇಕ ಸೇತುವೆ, ಅಣೆಕಟ್ಟುಗಳು, ಕಟ್ಟಡಗಳ ನಿರ್ಮಾಣ ಕಾರ್ಯ ಮಾಡಿದ್ದರು. ಮೋಟಾರ್ಸ್ ಕಂಪನಿ, ಫೈನಾನ್ಸ್ ಕಂಪನಿ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳನ್ನು ಅವರು ಸ್ಥಾಪಿಸಿದ್ದರು. ಅವರ ಆರ್ ಎನ್ ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಕರ್ನಾಟಕದ ಅತಿ ದೊಡ್ಡ ಕ್ಯಾಂಪಸ್ ಎನಿಸಿಕೊಂಡಿದೆ. ಬೆಂಗಳೂರು ವಿಶ್ವವಿದ್ಯಾಲಯ 2009-10ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು.
ಶೈಕ್ಷಣಿಕ, ಧಾರ್ಮಿಕ
ಹಾಗೂ ಸಾಮಾಜಿಕವಾಗಿ ಹಲವಾರು ಮಹತ್ವಪೂರ್ಣ ಕಾರ್ಯಗಳನ್ನು ಮಾಡಿದ್ದ ಆರ್ ಎನ್ ಶೆಟ್ಟಿ ಅವರು ಅಪಾರ
ಅಭಿಮಾನಿ ಬಳಗವನ್ನು ಹೊಂದಿದ್ದರು.