ಕತಾರ್ : ಭಾರತೀಯ ರಾಷ್ಟ್ರೀಯ ಹಬ್ಬಗಳು ಬಂತೆಂದರೆ ಕೊಲ್ಲಿ ರಾಷ್ಟ್ರ ಕತಾರಿನಲ್ಲಿ ನೆಲೆಸಿರುವ ಭಾರತೀಯ ಸಮುದಾಯಕ್ಕೆ ಎಲ್ಲಿಲ್ಲದ ಸಂಭ್ರಮ. ತ್ರಿವರ್ಣ ಧ್ವಜಾರೋಹಣ, ಭಾರತ ಮಾತೆಗೆ ನಮನ, ರಾಷ್ಟ್ರಗೀತೆ ಮತ್ತು ದೇಶ ಭಕ್ತಿ ಹಾಡುಗಳ ಗಾಯನದಲ್ಲಿ ಭಾಗಿಯಾಗುವ ಸದವಾಕಾಶ. ಇವೆಲ್ಲದರ ಜೊತೆಗೆ ಎರಡೂವರೆ ದಶಕಗಳಿಂದ ಸ್ವಾತಂತ್ರ್ಯ ಹೋರಾಟಗಾರರ, ದೇಶಭಕ್ತರ, ಮಹನೀಯರ, ಆದರ್ಶವ್ಯಕ್ತಿಗಳ ವೇಷ-ಭೂಷಣದಲ್ಲಿ ಪಾತ್ರಧಾರಿಯಾಗಿ ಕಂಡುಬರುವ ವ್ಯಕ್ತಿಯೋರ್ವನ ಆಕರ್ಷಣೆ.
ವಿದ್ಯುಕ್ತವಾಗಿ ಸಮಾರಂಭ ಆರಂಭವಾಗುವ ಮುಂಚೆಯೇ ಧುತ್ತೆಂದು ರಾಷ್ಟ್ರನಾಯಕರ ಪಾತ್ರಗಳಲ್ಲಿ ಪ್ರತ್ಯಕ್ಷವಾಗುತ್ತಿದ್ದ ಎಂ. ಎ. ಮಾಮುಜ್ಞಿ ನೆರೆದ ಎಲ್ಲಾ ಸಭಿಕರ ಗಮನ ಸೆಳೆದು ಬಿಡುತ್ತಿದ್ದರು. ಅದು ಗಾಂಧೀಜಿ, ನೆಹರು, ಸುಭಾಷ್ ಚಂದ್ರಬೋಸ್, ಸ್ವಾಮಿ ವಿವೇಕಾನಂದ, ಡಾ.ಬಿ,ಆರ್ ಅಂಬೇಡ್ಕರ್, ಡಾ. ಎ .ಪಿ.ಜೆ ಅಬ್ದುಲ್ ಕಲಾಂ, ನಾರಾಯಣ ಗುರು ಹೀಗೆ ಯಾರ ಪಾತ್ರವೇ ಆದರೂ ಅವರಂತೆಯೇ ಸಾದೃಶ ಪಡಿಸುತ್ತಿದ್ದ ಮಾಮುಜ್ಞಿ ಕತಾರಿನ ಎಲ್ಲಾ ಭಾರತೀಯ ಸಮುದಾಯದ ಪ್ರೀತಿಪಾತ್ರರು.
ಕತಾರಿನ ಭೂನೋಂದಣಿ ಸಚಿವಾಲಯದ ಉದ್ಯೋಗಿಯಾಗಿ, ಸುಮಾರು 30 ವರ್ಷಗಳ ಸೇವೆಯ ನಂತರ ನಿವೃತ್ತಿ ಹೊಂದಿ, ಭಾರತಕ್ಕೆ ಹಿಂತಿರುಗುತ್ತಿರುವ ಮಾಮುಜ್ಞಿಯವರಿಗೆ ಕರ್ನಾಟಕ ಮೂಲದ ಅನೇಕ ಸಂಸ್ಥೆಗಳು ಮತ್ತು ಭಾರತೀಯ ದೂತಾವಾಸದಡಿಯ ಪ್ರಮುಖ ಸಂಸ್ಥೆಗಳ ಪದಾಧಿಕಾರಿಗಳು ಜಂಟಿಯಾಗಿ ಏರ್ಪಡಿಸಿದ್ದ, ವಿದಾಯ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿ, ಕತಾರ್ ಮರೆಯಲಾಗದ ಮಾಣಿಕ್ಯವೆಂಬ ಬಿರುದನ್ನು ಪ್ರದಾನ ಮಾಡಲಾಯಿತು.
ಸಭೆಯಲ್ಲಿ ಸಮುದಾಯ ನಾಯಕರುಗಳಾದ ಮೂಡಂಬೈಲು ರವಿ ಶೆಟ್ಟಿ, ವಿ.ಎಸ್. ಮನ್ನಂಗಿ, ವೆಂಕಟ ರಾವ್, ರಾಮಚಂದ್ರ ಶೆಟ್ಟಿ, ಅನಿಲ್ ಬೋಳೂರ್, ಫಯಾಜ್ ಅಹ್ಮದ್, ಚೈತಾಲಿ ಶೆಟ್ಟಿ, ಅಬ್ದುಲ್ಲಾ ಮೋನು, ಸುನಿಲ್ ಡಿಸಿಲ್ವ, ರಘುನಾಥ್ ಆಂಚನ್, ಸಂದೇಶ್ ಆನಂದ್, ಕಿರಣ್ ಆನಂದ್, ಶ್ರೀಧರ್ ನಾಯಕ್, ಸೀತಾರಾಮ್ ಶೆಟ್ಟಿ, ನವನೀತ ಶೆಟ್ಟಿ, ಜೆರಾಲ್ಡ್, ಉದಯ ಕುಮಾರ್ ಶೆಟ್ಟಿ ಶಿರ್ವ ಹಾಗೂ ಹೆಚ್.ಕೆ ಮಧುರವರು ಮಾತನಾಡಿ , ಮಾಮುಜ್ಞಿಯವರ ದೇಶ ಪ್ರೇಮದ ಅಚಲತೆ, ಸಮರ್ಪಣೆಯ ಮನೋಭಾವವನ್ನು ಕೊಂಡಾಡಿದರು. ಅವರ ಮುಂದಿನ ಭವಿಷ್ಯ ಸುಖಕರವಾಗಿರಲೆಂದು ಹಾರೈಸಿದರು.
ಕೊರೋನಾ ಮಹಾಮಾರಿಯ ಸಂಕಷ್ಟದ ಪರಿಸ್ಥಿತಿಯಲ್ಲಿ ಮಾಮುಜ್ಞಿಯವರ ನೂರಾರು ಗೆಳೆಯಯರು, ಹಿತೈಷಿಗಳು ಹಾಗೂ ಅಭಿಮಾನಿಗಳು ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗದೆ ಅವರಿಗೆ ಮಿಂಚಂಚೆ ಮೂಲಕ ಶುಭಾಶಯಗಳನ್ನು ಕೋರಿದರು. ಸನ್ಮಾನ ಸ್ವೀಕರಿಸಿ ಭಾವುಕರಾದ ಮಾಮುಜ್ಞಿಯವರು ಮಾತನಾಡಿ, ಕತಾರಿಗೆ ಮತ್ತು ಸಾವಿರಾರು ಸ್ನೇಹಿತರ ಪ್ರೀತಿವಿಶ್ವಾಸಕ್ಕೆ ತಾವು ಜೀವನ ಪೂರ್ತಿ ಚಿರಋಣಿಯಾಗಿರುವೆನೆಂದರು. ಕತಾರಿನ ನೆನಪುಗಳು ಸದಾ ಹಸಿರಾಗಿರುವುದೆಂದರು. ಮುಸ್ತಫಾ ಪಟ್ಟಾಭಿ ಸಮಾರಂಭದ ಛಾಯಾಚಿತ್ರಗಳನ್ನು ಸುಂದರವಾಗಿ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದರು.