ರಸ್ತೆ ನಿಯಮ ಪಾಲಿಸಿ, ಅಮೂಲ್ಯ ರಕ್ತವನ್ನು ರಸ್ತೆಗೆ ಹರಿಸದಿರಿ : ವೃತ್ತ ನಿರೀಕ್ಷಕ ಗೋಪಾಲಕೃಷ್ಣ ಭಟ್ - BUNTS NEWS WORLD

ರಸ್ತೆ ನಿಯಮ ಪಾಲಿಸಿ, ಅಮೂಲ್ಯ ರಕ್ತವನ್ನು ರಸ್ತೆಗೆ ಹರಿಸದಿರಿ : ವೃತ್ತ ನಿರೀಕ್ಷಕ ಗೋಪಾಲಕೃಷ್ಣ ಭಟ್

Share This
ಮಂಗಳೂರು: ನಿಮ್ಮ ಆರೋಗ್ಯಕರ ರಕ್ತವನ್ನು ಮತ್ತೊಬ್ಬರ ಜೀವ ಉಳಿಸುವುದಕ್ಕಾಗಿ ದಾನ ಮಾಡಿ ಆದರೆ ರಸ್ತೆಯಲ್ಲಿ ವೇಗವಾಗಿ ವಾಹನ ಚಲಾಯಿಸಿ, ಅಪಘಾತಕ್ಕೆ ಒಳಗಾಗಿ ನಿಮ್ಮ ಅಮೂಲ್ಯವಾದ ರಕ್ತವನ್ನು ರಸ್ತೆಗೆ ಚೆಲ್ಲ ಬೇಡಿ. ಸರಿಯಾದ ರಸ್ತೆ ನಿಯಮಗಳನ್ನು ಪಾಲಿಸಿ, ಉತ್ತಮ ದೇಶದ ಹಾಗೂ ಸಮಾಜದ ನಿರ್ಮಾಣಕ್ಕಾಗಿ ಕೈ ಜೋಡಿಸಿ ಮಂಗಳೂರು ಸಂಚಾರಿ ವೃತ್ತ ನಿರೀಕ್ಷಕರಾದ ಗೋಪಾಲಕೃಷ್ಣ ಭಟ್ ಹೇಳಿದರು.
ಅವರು ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಅರಿವಿನ ಬಗ್ಗೆ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದು ಮಾನವ ಕಳ್ಳ ಸಾಗಣೆ, ಮಾನವ ಅಂಗಗಳ ಕಳ್ಳ ಸಾಗಣೆ ಮೊದಲಾದ ಕಾನೂನು ಬಾಹಿರ ಅಪರಾಧಗಳು ನಡೆಯುತ್ತಿದೆ. ವಿದ್ಯಾರ್ಥಿಗಳು ಅಪರಿಚಿತರ ವಾಹನಗಳಲ್ಲಿ ಡ್ರಾಪ್ ಕೇಳುವಂತದ್ದು ಅಥವಾ ಯಾವುದೇ ಆಮಿಷಗಳಿಗೆ ಒಳಗಾದಾಗ ಅಪಹರಿಸಲ್ಪಡುವ ಸಾಧ್ಯತೆಗಳು ಹೆಚ್ಚು ಎಂದರು.

ಸಮಾಜದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳು ಏರ್ಪಟ್ಟಾಗ ಅಥವಾ ರಸ್ತೆ ಅಪಘಾತಗಳು ಸಂಭವಿಸಿದ ಸಂದರ್ಭಗಳಲ್ಲಿ ಅದರ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುವುದರ ಬದಲಿಗೆ 102, 100, 108 ನಂತಹ ಪೋಲೀಸ್ ಇಲಾಖೆ, ವೈದ್ಯಕೀಯ ಇಲಾಖೆಗಳಿಗೆ ಕರೆ ಮಾಡಿ ತಿಳಿಸುವ ಮೂಲಕ ಮಾನವೀಯತೆ ಮೆರೆಯುವಂತೆ ಕೋರಿದರು.

ರಸ್ತೆಯ ನಿಯಮಾವಳಿಗಳು ನಿಬಂಧ, ಕಾನೂನು ವ್ಯವಸ್ಥೆ ಹಾಗೂ ರಸ್ತೆಯ ನಿಯಮಾವಳಿಗಳನ್ನು ಮೀರಿದಾಗ ಲಭಿಸುವ ಶಿಕ್ಷೆ, ರಸ್ತೆ ನಿಯಮಗಳ ಇತಿಹಾಸವನ್ನು ಮಕ್ಕಳಿಗೆ ವಿವರಿಸುವ ಮೂಲಕ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಿದರು. ಶಾಲೆಯ ವಿದ್ಯಾರ್ಥಿಗಳು ರಸ್ತೆಯ ನಿಯಮಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಮಕ್ಕಳಲ್ಲಿ ರಸ್ತೆ, ವಾಹನ ಮತ್ತು ಚಾಲನೆ ಹಾಗೂ ಪಾದಾಚಾರಿಗಳು ಪಾಲಿಸಬೇಕಾದ ನಿಯಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

Pages