BUNTS NEWS, ಮಂಗಳೂರು: ಜಾಗತಿಕ ಬಂಟ ಪ್ರತಿಷ್ಠಾನವು
ಪ್ರತಿವರ್ಷ ಡಾ. ಡಿ.ಕೆ. ಚೌಟ ದತ್ತಿನಿಧಿಯಿಂದ ಯಕ್ಷಗಾನದ
ಹಿರಿಯ ಕಲಾವಿದರಿಗೆ ನೀಡುವ ಪ್ರಶಸ್ತಿಗೆ 2018-19ನೇ
ಸಾಲಿನಲ್ಲಿ ಸೊರ್ನಾಡು ವಿಶ್ವನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ. ಕರ್ನಾಟಕ
ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರಾದ ಪ್ರೊ.
ಭಾಸ್ಕರ ರೈ ಕುಕ್ಕುವಳ್ಳಿ, ಪಳ್ಳಿ
ಕಿಶನ್ ಹೆಗ್ಡೆ ಮತ್ತು ವಿಶ್ರಾಂತ
ಪ್ರಾಚಾರ್ಯ ಪ್ರೊ. ಜಿ. ಆರ್.
ರೈ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಅವರನ್ನು
ಈ ಪ್ರಶಸ್ತಿಗೆ ಪರಿಗಣಿಸಿದೆ.
ಎಳವೆಯಲ್ಲೇ
ಯಕ್ಷಗಾನಾಸಕ್ತಿ ಹೊಂದಿದ್ದ ವಿಶ್ವನಾಥ ಶೆಟ್ಟರು ಎಂಕು ಭಾಗವತರಿಂದ
ಚೆಂಡೆ-ಮದ್ದಳೆ, ಮೂಡಬಿದ್ರೆ ವಾಸು
ಅವರಿಂದ ಯಕ್ಷಗಾನದ ಕುಣಿತ, ಕೂರ್ಯಾಳ ತಮ್ಮಯ್ಯ
ಆಚಾರ್ಯ ಮತ್ತು ನಾಂಞ ಕಿಲ್ಲೆಯವರಿಂದ
ಅರ್ಥಗಾರಿಕೆ ಹಾಗೂ ರಾಜನ್ ಅಯ್ಯರ್
ರಿಂದ ತಾಂಡವ ನೃತ್ಯವನ್ನು ಅಭ್ಯಸಿಸಿದ್ದಾರೆ.
ಸೊರ್ನಾಡು ಶ್ರೀ ದುರ್ಗಾಪರಮೇಶ್ವರಿ ಮೇಳವನ್ನು
ಕಟ್ಟಿ ಯಕ್ಷಗಾನ ಬಯಲಾಟಗಳನ್ನು ನಡೆಸಿಕೊಂಡು
ಬಂದರು.
ಉತ್ತಮ ಪುಂಡು ವೇಷಧಾರಿಯಾಗಿ ಹೆಸರು
ಪಡೆದ ಅವರು ಮುಂದೆ ಹನೂಮಂತ,
ಹರಿಶ್ಚಂದ್ರ, ಭಸ್ಮಾಸುರ, ಹಿರಣ್ಯಕಶ್ಯಪ, ಕೋಟಿ ಮುಂತಾದ ಪಾತ್ರಗಳಲ್ಲಿ
ಖ್ಯಾತಿ ಪಡೆದರು. ಈ ನಡುವೆ
ಅವರು ಅಧ್ಯಾತ್ಮದ ಹಾದಿ ತುಳಿದು ಬಂಟ್ವಾಳ
ತಾಲೂಕಿನ ಸುವರ್ಣನಾಡು ಶ್ರೀ ದುರ್ಗಾಂಬಿಕಾ ದೇವಸ್ಥಾನದ
ಸ್ಥಾಪಕರಾಗಿ ವಿಶ್ವನಾಥ ಸ್ವಾಮಿಯೆನಿಸಿಕೊಂಡರು.
ಇದೀಗ ತಮ್ಮ 79ನೇ ವಯಸ್ಸಿನಲ್ಲಿರುವ
ವಿಶ್ವನಾಥ ಶೆಟ್ಟರ ಯಕ್ಷಗಾನ ಸೇವೆಯನ್ನು
ಪರಿಗಣಿಸಿ ಜಾಗತಿಕ ಬಂಟ ಪ್ರತಿಷ್ಠಾನವು
ಅವರಿಗೆ ಪ್ರಶಸ್ತಿ ನೀಡುತ್ತಿದೆ. 2019 ಆಗಸ್ಟ್ 25 ರಂದು ಮಂಗಳೂರಿನ ಐ.ಎಂ.ಎ. ಸಭಾಂಗಣದಲ್ಲಿ
ಜರಗುವ ಮಾಹೆ ಉಪಕುಲಪತಿ ಡಾ.ಎಚ್.ಎಸ್. ಬಲ್ಲಾಳ್
ಅವರ ಅಭಿನಂದನಾ ಸಮಾರಂಭದಲ್ಲಿ ಜಾಗತಿಕ ಬಂಟ ಪ್ರತಿಷ್ಠಾನದ
ಅಧ್ಯಕ್ಷ ಬಿ.ಸಚ್ಚಿದಾನಂದ ಶೆಟ್ಟಿ
ಅವರು ಸೊರ್ನಾಡು ವಿಶ್ವನಾಥ ಶೆಟ್ಟರಿಗೆ ಪ್ರಶಸ್ತಿ ಪ್ರದಾನ ಮಾಡುವರು ಎಂದು ಪ್ರತಿಷ್ಠಾನದ
ಕಾರ್ಯದರ್ಶಿ ಕೆ.ಎಂ.ಶೆಟ್ಟಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.