ಸರ್ಕಾರಿ ಹಿ. ಪ್ರಾ. ಶಾಲೆಯ ನಿರ್ಮಾಪಕ ರವಿ ರೈ ಕಳಸರಿಂದ ಹೊಸ ಚಿತ್ರದ ಯೋಜನೆ..! - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸರ್ಕಾರಿ ಹಿ. ಪ್ರಾ. ಶಾಲೆಯ ನಿರ್ಮಾಪಕ ರವಿ ರೈ ಕಳಸರಿಂದ ಹೊಸ ಚಿತ್ರದ ಯೋಜನೆ..!

Share This
BUNTS NEWS, ಮಂಗಳೂರು: ನಾವೆಲ್ಲರೂ ರಿಷಬ್ ಶೆಟ್ಟಿ ನಿರ್ದೇಶನದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ನೋಡಿ ಖುಷಿಪಟ್ಟಿದ್ದೇವೆ. ಇಂಥದ್ದೊಂದು ಸಿನಿಮಾ ನೀಡಿರುವ ತಂಡಕ್ಕೆ ಶುಭ ಹಾರೈಸಿದ್ದೇವೆ. ಹಾರೈಕೆಯಲ್ಲಿ ದೊಡ್ಡ ಪಾಲು ಸಿಗಬೇಕಾದುದು ಸಿನಿಮಾದ ನಿರ್ಮಾಪಕ ರವಿ ರೈ ಕಳಸ ಅವರಿಗೆ.
ಶಾಲೆಯೊಂದರ ಕಥೆ ಮತ್ತು ಮಕ್ಕಳನ್ನೇ ಬಳಸಿ ಸಿನಿಮಾ ಮಾಡಲು  ಮುಂದಾಗುವುದು ಸಣ್ಣ ಸಂಗತಿಯೇನಲ್ಲ. ರಿಷಬ್ ಶೆಟ್ಟಿ ಅವರು ಕಥೆಯೊಂದಿಗೆ ರವಿ ರೈ ಅವರನ್ನು ಭೇಟಿಯಾದಾಗ ಸ್ವಲ್ಲ ಆಲೋಚನೆ ಮಾಡಿದ್ದರು ಕೂಡ. ಆದರೆ ಹಿಂದೆ ತಾನು ಶಾಲೆ ಉಳಿವಿಗಾಗಿ ಮಾಡಿದ್ದ ಹೋರಾಟ ಮತ್ತು ಅದರಲ್ಲಿ ಕಂಡ ಯಶಸ್ಸಿನ ಕಾರಣದಿಂದ ಇಂಥದ್ದೊಂದು  ಸಿನಿಮಾ ಮಾಡುವ ಧೈರ್ಯ ತೋರಿದರು. ಬಳಿಕದ ಯಶಸ್ಸು ಒಂದು ಸಾಹಸಗಾಥೆಯೇ.

ರವಿ ರೈ ಕಳಸ ಅವರು ಮೂಲತ: ಪುತ್ತೂರು ತಾಲೂಕಿನವರು. ಪ್ರಸ್ತುತ ಕಳಸದಲ್ಲಿ ರೆಸಾರ್ಟ್ ಮತ್ತು ಹೊಟೇಲ್ ಉದ್ಯಮಿಯಾಗಿದ್ದಾರೆ. ಕಾಫಿ ಎಸ್ಟೇಟ್ ಕೂಡ ಹೊಂದಿದ್ದು, ಕೃಷಿಯಲ್ಲು ನಿರತರಾಗಿದ್ದಾರೆ. ಮೈ ನೇಮ್ ಈಸ್ ಅಣ್ಣಪ್ಪ ತುಳು ಸಿನಿಮಾದ ಸಹ ನಿರ್ಮಾಪಕನೂ ಆಗಿರುವ ಅವರು ಸಿನಿಮಾ ರಂಗ ಸಹಿತ ಕಲೆಯಲ್ಲಿ ಉತ್ತಮ ಆಸಕ್ತಿ ಹೊಂದಿರುವವರು. ಖ್ಯಾತ ನಟ ರವಿಚಂದ್ರನ್ ಅವರ ಆತ್ಮೀಯ ಗೆಳೆಯರ ಸಾಲಿನಲ್ಲಿ ಇವರೂ ಸೇರಿದ್ದಾರೆ.

ರವಿ ರೈ ಅವರ ತಂದೆ ಪುತ್ತೂರಿನ ಕರ್ನೂರು ಮೂಲದವರು ಮತ್ತು ತಾಯಿ ಪುಂಜಾಲಕಟ್ಟೆಯವರು. ತಂದೆ ವ್ಯವಹಾರ ನಿಮಿತ್ತ ಕಳಸಕ್ಕೆ ತೆರಳಿದ ಕಾರಣ ರವಿ ರೈ ಅವರ ಹೆಸರಿನ ಜತೆಗೂ ಕಳಸ ಸೇರಿಕೊಂಡಿತು. ಅಲ್ಲಿದ್ದರೂ ಇವರಿಗೆ ತುಳುವಿನ ಮೇಲಿನ ಸೆಳೆತ ಮತ್ತು ಪ್ರೀತಿ ಹೆಚ್ಚಾಗುತ್ತಲೇ ಹೋದ ಪರಿಣಾಮ ತುಳು ಸಿನಿಮಾ ಮಾಡಿದ್ದು, ಮುಂದೆ ಒಂದು ಭಿನ್ನ ತುಳು  ಸಿನಿಮಾ ಮಾಡುವ ಆಸೆಯೂ ಅವರಿಗಿದೆ.

ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ಹತ್ತಿರದ ಸಂಬಂಧಿಯಾಗಿರುವ ರವಿ ರೈ ಅವರು ಪಟ್ಲರ  ಮೂಲಕವೇ ತುಳು ಸಿನಿಮಾ ರಂಗದ ಸಂಪರ್ಕ ಸಾಧಿಸಿದ್ದರುಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ಸಂಬಂಧಿಸಿ ಅವರು ಹೇಳುವುದೇನೆಂದರೆ  ಸಿನಿಮಾದ ಆಫರ್ ಬರುವಾಗ ನಾನು ಕಟೀಲು  ದೇವಸ್ಥಾನದಲ್ಲಿದ್ದೆ. ಅಲ್ಲಿದ್ದ ಕಾರಣಕ್ಕೆ ನಾನು ಮೊದಲು ಒಪ್ಪಿಕೊಂಡೆ. ಬಳಿಕ ರಿಷಬ್ ಶೆಟ್ಟಿ ಅವರು ಕಥೆ ಹೇಳಿದಾಗ ಖುಷಿಯಾಯಿತು. ಜತೆಗೆ ನಾನು ಹಿಂದೆ ಕುದುರೆಮುಖದ ಕಬ್ಬಿಣದ  ಅದಿರು ಕಂಪೆನಿಯವರು ಶಾಲೆಯೊಂದನ್ನು ಮೂರು ತಿಂಗಳು ತರಗತಿ ನಡೆಸಿ ಏಕಾಏಕಿ ಮುಚ್ಚಲು ನಿರ್ಧರಿಸಿದಾಗ ಮಾಡಿದ್ದ ಪ್ರತಿಭಟನೆ ಮತ್ತು ಅದರಲ್ಲಿ ಪಡೆದ ಯಶಸ್ಸು ನೆನಪಾಗಿ ಸಿನಿಮಾವನ್ನು ಮಾಡಲೇಬೇಕು ಎಂದು  ನಿರ್ಧರಿಸಿದೆ

ಜಾಗೃತ ನಾಗರಿಕ ವೇದಿಕೆ ಕಳಸ ಎಂಬ ಸಂಘಟನೆ ರೂಪಿಸಿ ನಾವು ಅಲ್ಲಿ ಶಾಲೆಯನ್ನು ಉಳಿಸಿಕೊಂಡಿದ್ದೆವು. ಪ್ರತಿಭಟನೆ ಆರಂಭವಾಗುವಾಗ ಸುಮಾರು 400ಕ್ಕೂ ಮಿಕ್ಕಿದ ಜನರಿದ್ದರೂ ಕಂಪೆನಿಯ ತಂತ್ರ ಮತ್ತು  ಬೆದರಿಕೆ ಕಾರಣದಿಂದ ಕೊನೆಗೆ ಉಳಿದದ್ದು ಕೇವಲ 22 ಮಂದಿಯಾಗಿದ್ದರೂ ನಾವು ಗೆದ್ದಿದ್ದೆವು.  ಅಂಥದ್ದೇ ಶಾಲೆ ಉಳಿಸುವ ಸಿನಿಮಾವೂ ಯಶಸ್ಸು ಕಂಡಿರುವುದು ಖುಷಿ ಕೊಟ್ಟಿದೆ ಎಂಬುದು ಅವರ ಮಾತು.

ಇವರು ಮುಕ್ತ ಮುಕ್ತ ತಂಡದ ಶ್ರೀನಾಥ್ ಹಾಲನಾಯಕನಹಳ್ಳಿ ಮತ್ತು ಮಧುಕರ ರಾವ್ ಜತೆಗೆ ಸುಮಾರು 25 ವರ್ಷಗಳ ಸ್ನೇಹ ಹೊಂದಿದ್ದಾರೆ. ಅವೆಲ್ಲವೂ ಇವರಲ್ಲಿರುವ ಕಲಾಸಕ್ತಿಯನ್ನು ಬೆಳೆಸಿತು. ರವಿಚಂದ್ರನ್ ಅವರು ಸಿನಿಮಾವೊಂದರ ಶೂಟಿಂಗ್ಗೆ ಬಂದಿದ್ದಾಗ ಇವರ ಲಾಡ್ಜ್ನಲ್ಲೇ ಉಳಿದುಕೊಂಡಿದ್ದರು. ಇವರ ಒಂದು ಜೀಪನ್ನು ಸುಮಾರು ಒಂದು ತಿಂಗಳ ಕಾಲ ಬಳಸಿದ್ದರು ಎಂಬುದು ಹೆಮ್ಮೆಯ ಸಂಗತಿ.

ಸರಕಾರಿ ಶಾಲೆಯ ಯಶಸ್ಸಿನ ಬಳಿಕ ಸುಮಾರು 50ಕ್ಕೂ ಮಿಕ್ಕಿದ ಮಂದಿ ಕಥೆ ಹಿಡಿದುಕೊಂಡು ಇವರನ್ನು ಸಂಪರ್ಕಿಸಿದ್ದಾರೆ. ಆದರೆ ಗಟ್ಟಿತನ ಇಲ್ಲದ ಕಥೆಯತ್ತ ಇವರು ಗಮನ ಹರಿಸುವುದಿಲ್ಲ. ದರ್ಶನ್ ಅವರನ್ನು ಬಳಸಿಕೊಂಡು ಒಂದು ಸಿನಿಮಾ ಮಾಡಬೇಕು ಎಂಬ ಆಸೆಯೂ ಇವರಿಗಿದೆ. ಜತೆಗೆ ತುಳುವಿನಲ್ಲಿ ಒಂದು ಉತ್ತಮ ಸಿನಿಮಾವನ್ನು ತುಳುವರನ್ನೇ ಬಳಸಿಕೊಂಡು ಮಾಡಬೇಕು ಎಂಬ ಆಸೆ ಹೊಂದಿದ್ದಾರೆ. ಕೇವಲ ಹಾಸ್ಯಕ್ಕಷ್ಟೇ ತುಳು ಸಿನಿಮಾ ಮೀಸಲಾಗಬಾರದು. ಉತ್ತಮ ಕಥೆ ಹೊಂದಿರುವ ಸಿನಿಮಾಗಳತ್ತ ಪ್ರೇಕ್ಷಕರನ್ನು ಸೆಳೆಯುವ  ಪ್ರಯತ್ನ ಆಗಬೇಕು. ಜತೆಗೆ ತುಳುವರನ್ನೇ ಗರಿಷ್ಠ ಸಂಖ್ಯೆಯಲ್ಲಿ ಬಳಸಿ ಸಿನಿಮಾ ಮಾಡಬೇಕು ಎಂಬ ಹಂಬಲ ಅವರದ್ದು. ಆದರೆ ಅದಕ್ಕಿಂತ ಮೊದಲು ಕನ್ನಡ ಸಿನಿಮಾ ಮಾಡುವುದು ಅವರ ಉದ್ದೇಶ. ಮಧ್ಯೆ  ನಿರ್ದೇಶಕ ರಿಷಬ್ ಶೆಟ್ಟಿ ಜತೆ ಆತ್ಮೀಯ ಸಂಬಂಧ ಹೊಂದಿರುವ ಇವರು ಅವರೊಂದಿಗೆ ಹೊಸ ಸಿನಿಮಾ ಮಾಡುವ ಉದ್ದೇಶವೂ ಇದೆ.

ತುಳು ಚಿತ್ರರಂಗದ ಗುಂಪುಗಾರಿಕೆ ಬಗ್ಗೆಯೂ ಬೇಸರ ವ್ಯಕ್ತಪಡಿಸುವ ಅವರು, ಮಂಗಳೂರಿನಲ್ಲಿ ಒಂದು ತಿಂಗಳು ಇದ್ದರೆ ಅಲ್ಲಿನ ಹುಳುಕುಗಳೆಲ್ಲ ಗೊತ್ತಾಗುತ್ತದೆ. ಆದರೆ ತುಳುವಿನಲ್ಲಿ ಹೀಗೆಲ್ಲ ಇದೆ ಎಂದು ಮೊದಲು ಗೊತ್ತಿರಲಿಲ್ಲ ಎಂದು ಹೇಳುವ ಅವರು,  ತುಳು ಚಿತ್ರರಂಗ ಒಟ್ಟಾಗಿ ಹೋಗುವ ಅಗತ್ಯವಿದೆ ಎನ್ನುತ್ತಾರೆ.

ರವಿ ರೈ ಕಳಸ ಅವರಂಥ ಓರ್ವ ಉತ್ಸಾಹಿ ಹಾಗೂ ಕಲಾಪ್ರೇಮಿಯಾಗಿರುವ ನಿರ್ಮಾಪಕರೊಬ್ಬರು ಸಿಕ್ಕಿರುವುದು  ತುಳುನಾಡಿಗೆ ಹೆಮ್ಮೆಯ ಸಂಗತಿ. ಅವರನ್ನು ಬಳಸಿಕೊಂಡು ತುಳು ಚಿತ್ರರಂಗವನ್ನು ಬೆಳೆಸಲು ನಾವು ಮುಂದಾಗಬೇಕಿದೆ. ಅತ್ಯಂತ ಸರಳ ಮತ್ತು ಆತ್ಮೀಯತೆ ಹೊಂದಿರುವ ಇವರಂಥ ಕಲಾಸಕ್ತ  ನಿರ್ಮಾಪಕರು ಸಿಕ್ಕಿರುವುದು ನಮ್ಮ ಅದೃಷ್ಟ ಎಂಬುದು  ನಿಸ್ಸಂಶಯ.

Pages