ಮಂಗಳೂರು: ಇನ್‍ಬಾಕ್ಸ್ ಕ್ರಿಯೇಟಿವ್ಸ್ ಲಾಂಛನದಲ್ಲಿ ತಯಾರಾದ
ಮನೋಜ್ ಕುಮಾರ್ ಶ್ರೀ ಗರೋಡಿ ಸ್ಟೀಲ್ಸ್ ಪ್ರಸ್ತುತ ಪಡಿಸಿರುವ ಸೂರಜ್ ಬೋಳಾರ್ ನಿರ್ದೇಶನದ `ಪತ್ತೀಸ್‍ಗ್ಯಾಂಗ್'
ತುಳು ಸಿನಿಮಾದ ಪ್ರೀಮಿಯರ್ ಶೋ ಮತ್ತು ಬಿಡುಗಡೆ ಸಮಾರಂಭವು ಪಾಂಡೇಶ್ವರದ ಪಿವಿಆರ್‍ನಲ್ಲಿ ಜರಗಿತು.
ಸಮಾರಂಭವನ್ನು ಶ್ರೀದೇವಿ
ವಿದ್ಯಾಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ತುಳು ಸಿನಿಮಾರಂಗದಲ್ಲಿಂದು
ಸದಭಿರುಚಿಯ ಚಿತ್ರಗಳು ತೆರೆಕಾಣುತ್ತಿರುವುದು ಸಂತೋಷದ ವಿಚಾರ. ಸಮಾಜಕ್ಕೆ ಸಂದೇಶ ನೀಡುವ ಚಿತ್ರಗಳು
ತೆರೆಕಾಣುವಂತಾಗಲಿ ಎಂದು ಅವರು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ
ಪೊಲೀಸ್ ಕಮೀಷನರ್ ಟಿ.ಆರ್. ಸುರೇಶ್ ಅವರು, ತುಳು ಸಿನಿಮಾರಂಗ ಇಂದು ಕನ್ನಡ ಚಿತ್ರರಂಗದಂತೆಯೇ ಬೆಳೆಯುತ್ತಿದೆ.
ಭಾಷಾಭಿಮಾನದಿಂದ ಪ್ರೇಕ್ಷಕರು ತುಳುಭಾಷಾ ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದರು. ಇನ್ನೋರ್ವ
ಮುಖ್ಯ ಅತಿಥಿ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಮಾತನಾಡಿ, ತುಳು ಭಾಷಾ ಬೆಳವಣಿಗೆಗೆ ತುಳು ನಾಟಕಗಳು
ಯಾವ ರೀತಿ ಸಹಕಾರಿಯಾಗಿದೆಯೋ ಅದೇ ರೀತಿ ಇಂದು ತುಳು ಸಿನಿಮಾ ಕೂಡಾ ಭಾಷಾ ಬೆಳವಣಿಗೆಗೆ ಪೂರಕವಾಗಿ
ಬೆಳೆದು ನಿಂತಿದೆ ಎಂದರು.
ಸಮಾರಂಭದಲ್ಲಿ ಎಸ್‍ಡಿಸಿಸಿ
ಬ್ಯಾಂಕ್‍ನ ನಿರ್ದೇಶಕ ಭಾಸ್ಕರ ಕೋಟ್ಯಾನ್, ಶಾಸಕ ಡಾ. ವೈ ಭರತ್ ಶೆಟ್ಟಿ, ಮೇಯರ್ ಭಾಸ್ಕರ್ ಕೆ.,
ಗರೋಡಿ ಬ್ರಹ್ಮಬೈದರ್ಕಳ ದೇವಸ್ಥಾನದ ಕೆ. ಚಿತ್ತರಂಜನ್, ಎಸ್. ಹೇಮಾಜಿ ನಾೈಕ್ ಮೊದಲಾದವರು ಉಪಸ್ಥಿತರಿದ್ದರು.
ಸಿನಿಮಾದ ನಿರ್ಮಾಪಕ ಮನೋಜ್ ಕುಮಾರ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ವಿಸ್ಮಯ ವಿನಾಯಕ್, ಮೋಹನ್
ಶೇಣಿ, ಅಜೇಯರಾಜ್, ನವ್ಯತಾ ರೈ, ಚಂದ್ರಹಾಸ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು. ಸಹನಿರ್ಮಾಪಕ
ಪ್ರೀತಮ್ ಎಂ.ಎನ್. ಕಾರ್ಯಕ್ರಮ ನಿರ್ವಹಿಸಿದರು.
`ಪತ್ತೀಸ್ ಗ್ಯಾಂಗ್'
ಸಿನಿಮಾ ಪಿವಿಆರ್‍ನಲ್ಲಿ ಮೂರು ಪ್ರೀಮಿಯರ್ ಶೋಗೆ ಕಿಕ್ಕಿರಿದ ಜನಸಂದಣಿ ಸೇರಿತ್ತು. ಸಿನಿಮಾವು ಮಂಗಳೂರಿನಲ್ಲಿ
ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲೀಸ್, ಉಡುಪಿಯಲ್ಲಿ ಅಲಂಕಾರ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್,
ಮೂಡಬಿದ್ರೆಯಲ್ಲಿ ಅಮರಶ್ರೀ, ಸುಳ್ಯದಲ್ಲಿ ಸಂತೋಷ್, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್‍ನಲ್ಲಿ
ನಟರಾಜ್, ಪುತ್ತೂರಿನಲ್ಲಿ ಅರುಣಾ, ಮಣಿಪಾಲದಲ್ಲಿ ಬಿಗ್ ಸಿನಿಮಾಸ್ ಮತ್ತು ಐನಾಕ್ಸ್‍ನಲ್ಲಿ ಬಿಡುಗಡೆಗೊಂಡಿದೆ.
ಸಿನಿಮಾದಲ್ಲಿ ಮೋಸ
ಮಾಡುವವರ ಬಗ್ಗೆ ಜಾಗೃತಿ ಮೂಡಿಸುವ ಈ ಸಿನಿಮಾವು ತನ್ನ ವಿಭಿನ್ನ ನಿರೂಪಣೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದು
ಶುಕ್ರವಾರದಂದು ಎಲ್ಲಾ ಕೇಂದ್ರಗಳಲ್ಲೂ ಸಿನಿಮಾ ಹೌಸ್‍ಫುಲ್ ಪ್ರದರ್ಶನ ಕಂಡಿದೆ.