ಮಂಗಳೂರು: ನೂತನವಾಗಿ ಸ್ಥಾಪನೆಗೊಂಡಿರುವ ಕಡಬ ಹಾಗೂ ಮೂಡಬಿದ್ರೆ
ತಾಲೂಕುಗಳ ಉದ್ಘಾಟನೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಲಿದೆ.
ಈ ಕುರಿತು ಅಧಿಕಾರಿಗಳ ಪೂರ್ವಸಿದ್ಧತಾ
ಸಭೆ ಗುರುವಾರ ಅಪರ ಜಿಲ್ಲಾಧಿಕಾರಿ
ಕುಮಾರ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಆಗಸ್ಟ್ 15 ರಂದು ಬೆಳಿಗ್ಗೆ 10.30 ಗಂಟೆಗೆ
ಕಡಬ ತಾಲೂಕು ಹಾಗೂ ಸಂಜೆ
4 ಗಂಟೆಗೆ ಮೂಡಬಿದ್ರೆ ತಾಲೂಕು ಉದ್ಘಾಟನೆಯಾಗಲಿದೆ ಎಂದರು.
ಸರಕಾರದ ನಿರ್ದೇಶನದಂತೆ ತಾಲೂಕು
ಮಟ್ಟದಲ್ಲಿ ಸ್ಥಾಪನೆಯಾಗಬೇಕಾದ ಎಲ್ಲಾ ಇಲಾಖೆಗಳ ಸರಕಾರಿ
ಕಚೇರಿಗಳ ಸ್ಥಾಪನೆಗೆ ಆಯಾ ಇಲಾಖೆ ಜಿಲ್ಲಾ
ಮಟ್ಟದ ಅಧಿಕಾರಿಗಳು ಈಗಿನಿಂದಲೇ ಸಿದ್ಧತೆ ಮಾಡಬೇಕು. ಇದಕ್ಕಾಗಿ
ಸೂಕ್ತ ಕಚೇರಿಯನ್ನು ಹುಡುಕಬೇಕು. ತಾತ್ಕಾಲಿಕವಾಗಿ
ಬಾಡಿಗೆ ಕಟ್ಟಡದಲ್ಲಿ ಕಚೇರಿ ಸ್ಥಾಪಿಸಿ, ಮುಂದಿನ
ದಿನಗಳಲ್ಲಿ ಕಚೇರಿ ಕಟ್ಟಡ ನಿರ್ಮಿಸಲು
ಸೂಕ್ತ ಭೂಮಿ ಗುರುತಿಸಬೇಕು. ಆಯಾ
ಕಚೇರಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು
ನಿಯೋಜಿಸಬೇಕು. ಪೂರ್ಣ ಪ್ರಮಾಣದ ಅಧಿಕಾರಿ
ಇಲ್ಲದಿದ್ದರೆ ಪ್ರಭಾರ ವ್ಯವಸ್ಥೆ ಮಾಡಬೇಕು.
ಎಲ್ಲಾ ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು
ಈ ಬಗ್ಗೆ ತ್ವರಿತವಾಗಿ
ಗಮನಹರಿಸಿ ಸಿದ್ಧತಾ ಕಾರ್ಯ ಕೈಗೊಳ್ಳಬೇಕು ಎಂದು
ಅಪರ ಜಿಲ್ಲಾಧಿಕಾರಿಗಳು ಹೇಳಿದರು.
ಈಗಾಗಲೇ
ಕಡಬ ಮತ್ತು ಮೂಡಬಿದ್ರೆಯಲ್ಲಿ ಮಿನಿ ವಿಧಾನಸೌಧ
ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಇದರಲ್ಲಿ ತಾಲೂಕು ಕಚೇರಿ, ಸರ್ವೆ ಇಲಾಖೆ,
ಸಬ್ ರಿಜಿಸ್ಟ್ರಾರ್ ಹಾಗೂ ಖಜಾನೆ ಇಲಾಖೆ
ಇರಲಿದೆ ಎಂದು ಕುಮಾರ್ ತಿಳಿಸಿದರು.
ಕಡಬ ತಾಲೂಕು ಪುತ್ತೂರು ತಾಲೂಕಿನ 9 ಗ್ರಾಮ ಹಾಗೂ ಸುಳ್ಯ ತಾಲೂಕಿನ 7 ಗ್ರಾಮಗಳನ್ನು ಒಳಗೊಂಡಿದೆ. ಮೂಡಬಿದ್ರೆ ತಾಲೂಕು ಮೂಡಬಿದ್ರೆ ಹೋಬಳಿಯ ಎಲ್ಲಾ ಗ್ರಾಮಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದರು. [ಫೋಟೊ ಕೃಪೆ: ವೀಕಿಪೀಡಿಯ]