ಮಂಗಳೂರು: ಸುಮಾರು 58 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸುರತ್ಕಲ್- ಗಣೇಶಪುರ(ಕೈಕಂಬ) ರಸ್ತೆಯಲ್ಲಿ ಆರುಪಥಗಳ ರಸ್ತೆ ನಿರ್ಮಾಣಕ್ಕೆ ಶುಕ್ರವಾರ ಗಣೇಶಪುರದಲ್ಲಿ ಚಾಲನೆ ನೀಡಲಾಯಿತು.
ಮಂಗಳೂರು ಉತ್ತರ ಶಾಸಕ ಬಿ.ಎ. ಮೊಹಿದೀನ್ ಬಾವಾ ಅವರು ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಸುರತ್ಕಲ್ ಪ್ರದೇಶದ ಜೀವನಾಡಿ ರಸ್ತೆಯಾಗಿರುವ ಈ ರಸ್ತೆಯು ಕಳೆದ ಹಲವು ದಶಕಗಳಿಂದ ದುರಸ್ತಿ ಕಾಣದೇ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿತ್ತು. ಎಂ.ಆರ್.ಪಿ.ಎಲ್. ಸೇರಿದಂತೆ ಹಲವಾರು ಬೃಹತ್ ಕೈಗಾರಿಕೆಗಳೂ ಈ ರಸ್ತೆಯಲ್ಲಿದ್ದು, ಜನ-ವಾಹನ ಸಂಚಾರಕ್ಕೆ ಈ ರಸ್ತೆ ಪ್ರಮುಖವಾಗಿದೆ. ಸುದೀರ್ಘ ಬೇಡಿಕೆಗೆ ಸ್ಪಂದಿಸಿ, ರಾಜ್ಯ ಸರಕಾರವು ರಸ್ತೆ ಅಭಿವೃದ್ಧಿಗೆ ಸುಮಾರು 58 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿದೆ. ಇದೀಗ ಆರು ಪಥಗಳ ರಸ್ತೆಯು ನಿರ್ಮಾಣವಾಗಲಿದ್ದು, ಇದರಿಂದ ಈ ಭಾಗದ ಸುಗಮ ಸಾರ್ವಜನಿಕ ಸಂಚಾರಕ್ಕೆ ಶಾಶ್ವತ ಪರಿಹಾರ ದೊರಕಿದೆ ಎಂದು ಹೇಳಿದರು.
ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಗಂಜಿಮಠ-ಕುಕ್ಕಟ್ಟೆ-ಕುಪ್ಪೆಪದವು ರಸ್ತೆ ಅಭಿವೃದ್ಧಿಗೆ ರೂ. 3 ಕೋಟಿ ಹಾಗೂ ಕೈಕಂಬ-ಅದ್ಯಪಾಡಿ- ವಿಮಾನನಿಲ್ದಾಣ ರಸ್ತೆ ಅಭಿವೃದ್ಧಿಗೆ ರೂ. 2 ಕೋಟಿ ಈಗಾಗಲೇ ಬಿಡುಗಡೆಯಾಗಿದೆ ಎಂದು ಶಾಸಕ ಮೊಹಿದೀನ್ ಬಾವಾ ತಿಳಿಸಿದರು.
ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಕಾಂತರಾಜು ಮಾತನಾಡಿ, ಸುರತ್ಕಲ್‍ನಿಂದ ಗಣೇಶಪುರದವರೆಗೆ ಸುಮಾರು 4.8 ಕಿ.ಮೀ. ಗಳ ಈ ರಸ್ತೆಯನ್ನು ಆರುಪಥಗಳ ರಸ್ತೆಯನ್ನಾಗಿಸಲು 58 ಕೋಟಿ ರೂ. ಬಿಡುಗಡೆಯಾಗಿದೆ. ರಸ್ತೆಯ ಮಧ್ಯದಿಂದ ಎರಡೂ ಬದಿಗಳಲ್ಲಿ ತಲಾ 13 ಮೀಟರ್ ಅಗಲದ ರಸ್ತೆ ನಿರ್ಮಾಣವಾಗಲಿದೆ. ರಸ್ತೆ ಅಗಲೀಕರಣಕ್ಕೆ ಸಾಕಷ್ಟು ಜಾಗ ಲಭ್ಯವಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ರಸ್ತೆ ನಿರ್ಮಾಣವಾಗಲಿದೆ. ರಸ್ತೆಯ ಮಧ್ಯದಲ್ಲಿ 2 ಮೀಟರ್ ಅಗಲದ ಡಿವೈಡರ್ ಬರಲಿದ್ದು, ಇದರಲ್ಲಿ ಮರ ಬೆಳೆಸಲಾಗುವುದು. ಇದಲ್ಲದೆ, ಪ್ರತ್ಯೇಕ ಸೈಕಲ್ ಟ್ರ್ಯಾಕ್ ಕೂಡಾ ನಿರ್ಮಾಣವಾಗಲಿದೆ. ಹಸಿರು ತಂತ್ರಜ್ಞಾನ ಮೂಲಕ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮಹಾನಗರಪಾಲಿಕೆ ಸದಸ್ಯರಾದ ಬಶೀರ್ ಅಹಮದ್, ಪ್ರತಿಭಾ ಕುಳಾಯಿ, ಧರ್ಮೇಂದ್ರ, ಲೋಕೋಪಯೋಗಿ ಇಲಾಖೆ ಎಇಇ ರವಿಕುಮಾರ್ ಮತ್ತಿತರರು ಇದ್ದರು. ಗಿರೀಶ್ ನಾವಡ ಕಾರ್ಯಕ್ರಮ ನಿರೂಪಿಸಿದರು.