ದೈವವೇ ಮೆಚ್ಚಿದ ದೈವ ಪಾತ್ರಿ: ಅಭಿಮಾನಿಗಳ ಸಿದ್ಧಿ ಪುರುಷ ಕಾಚೂರು ಶೇಖರ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ದೈವವೇ ಮೆಚ್ಚಿದ ದೈವ ಪಾತ್ರಿ: ಅಭಿಮಾನಿಗಳ ಸಿದ್ಧಿ ಪುರುಷ ಕಾಚೂರು ಶೇಖರ ಶೆಟ್ಟಿ

Share This
ತುಳುನಾಡು ದೈವರಾಧನೆಯ ನೆಲೆಬೀಡು. ಇಂತಹ ಪುಣ್ಯ ಭೂಮಿಯ ಪ್ರತಿಯೊಂದು ಗುತ್ತು, ಬರ್ಕೆ, ಊರು ಹಾಗು ಗ್ರಾಮಗಳಲ್ಲಿ ನೆಲೆ ನಿಂತ ದೈವ ದೇವರುಗಳ ಆರಾಧನೆ ನಿತ್ಯನಿರಂತರವಾಗಿ ನಡೆದುಕೊಂಡು ಬರುತ್ತಿದೆ. ದೈವರಾಧನೆಯಲ್ಲಿ ದೈವ ಪಾತ್ರಿಗಳು ಪ್ರಮುಖ ಸ್ಥಾನವನ್ನು ಪಡೆದಿದ್ದು ಅಂತಹ ದೈವ ಪಾತ್ರಿಗಳಲ್ಲಿ ಹಿರಿಯರಾದ ಶೇಖರ ಶೆಟ್ಟಿ ಕಾಚೂರು ಪ್ರಮುಖರು. ಮೂಲ್ಕಿ ಸಮೀಪ ಶಿಮಂತೂರು ಕಾಚೂರು ಶೇಖರ ಶೆಟ್ಟಿ ಅವರ ಹುಟ್ಟೂರು. ಪುನರೂರು ಬರ್ಕೆ ಶೀನ ಶೆಟ್ಟಿ ಹಾಗೂ ಕಾಚೂರು ಜಲಜ ಶೆಟ್ಟಿ ಅವರ ಮಗನಾಗಿ ಜನಿಸಿದ ಶೇಖರ ಶೆಟ್ಟಿ ಅವರು ದೈವ ಪ್ರೇರಣೆಯಂತೆ ತನ್ನ 7ನೇ ವಯಸ್ಸಿನಿಂದಲೇ ಕಾಂತೇರಿ ಧೂಮಾವತಿ ದೈವದ ಸೇವೆ ಮಾಡುತ್ತ ಆರಂಭಿಸಿದ್ದರು.
ಸರಿಸುಮಾರು 200 ವರ್ಷಕ್ಕೂ ಹಿಂದಿನ ಮನೆಯಾದ ಕಾಚೂರು ಧರ್ಮಚಾವಡಿಯಲ್ಲಿ ದೈವದ ಸೇವೆ ಸಲ್ಲಿಸುತ್ತಿದ ಹಿರಿಯರಿಗೆ ವೃದ್ದಾಪ್ಯದ ಕಾರಣದಿಂದ ಸೇವೆ ಮಾಡಲು ಕಷ್ಟವಾಗುತ್ತದೆ. ಆ ಸಂದರ್ಭ ಹಿರಿಯರ ಮಾರ್ಗದರ್ಶನದಂತೆ ದೈವದ ಕಟ್ಟುಪಾಡಿನಂತೆ ಹೊಸ ದೈವಪಾತ್ರಿಗಾಗಿ ದೈವ ದರ್ಶನವನ್ನು ಮಾಡಿ ತನ್ನಿಚ್ಚೆಯ ದೈವಪಾತ್ರಿಯನ್ನು ತೋರಿಸಿ ಕೊಡುವಂತೆ ಕಾಂತೇರಿ ಜುಮಾಧಿ ದೈವವನ್ನು ಕೋರಲಾಗುತ್ತದೆ. ಒಂದೆಡೆ ಕುಟುಂಬದ ಪುರುಷರು ಸರತಿ ಸಾಲಲ್ಲಿ ನಿಂತು ದೈವದ ಪ್ರೇರಣೆಗಾಗಿ ಕಾಯುತ್ತಿದ್ದರೆ, ಇದ್ಯಾವುದರ ಅರಿವಿಲ್ಲದೆ ದೂರದಲ್ಲಿ ಆಟವಾಡುತ್ತಿದ್ದ 7 ವರ್ಷದ ಬಾಲಕ ಶೇಖರ ಶೆಟ್ಟಿ ಅವರು ದೈವ ಪ್ರೇರಣೆಯಂತೆ ಆವೇಶದಿಂದ ಓಡಿ ಬಂದು ದೈವದ ಜಿಟಿಕೆ ಹಿಡಿಯುತ್ತಾರೆ. ಅಂದಿನಿಂದ ಅವರ ಕಾಂತೇರಿ ಧೂಮಾವತಿ ದೈವ ಚಾಕರಿಯ ಸೇವೆ ನಡೆದುಕೊಂಡು ಬಂದಿತ್ತು.
ಕಾಚೂರು ಶೇಖರ ಶೆಟ್ಟಿ ತುಳುನಾಡಿನ ಪ್ರಮುಖ ದೈವ ಕ್ಷೇತ್ರಗಳಾದ ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನ, ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು, ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನ ಖಂಡಿಗೆ ಚೇಳ್ಯಾರು, ಸುರತ್ಕಲ್ ಕಾವರ ಸ್ಥಾನ, ಕುಂಜಿರಾಯ ಸ್ಥಾನ ಅತ್ತೂರು, ಕುಂಜಿರಾಯ ಸ್ಥಾನ ಕೊಡೆತ್ತೂರು, ಪಣಂಬೂರು ಹಾಗೂ ಪ್ರಮುಖ ಗುತ್ತುಮನೆಗಳಾದ ಪಂಜದ ಗುತ್ತು, ಪುನರೂರು ಗುತ್ತು, ತೋಕೊರು ಗುತ್ತು, ಮಡ್ಡಿ ಗುತ್ತು ಪೆರ್ಮುದೆ, ಕಡಂದೆಲೆ, ಪರಾರಿ, ಕೂಳೂರು ಪೈಯಾರಗುಡ್ಡೆ, ಮಣ್ಣಗುಡ್ಡೆ ಇನ್ನಿತರ ಪ್ರಮುಖ ಕಡೆಗಳಲ್ಲಿ ದೈವದ ಸೇವೆ ಸಲ್ಲಿಸಿದ್ದರು. ಹಲವು ಮಂದಿಗೆ ದೈವ ಚಾಕರಿಯ ಗಡಿಯನ್ನು ಮಾಡಿದ್ದು ಅವರ ನಿಸ್ವಾರ್ಥ ಸೇವೆಗಾಗಿ ಹಲವು ಸಂಘ-ಸಂಸ್ಥೆಗಳು, ದೈವಸ್ಥಾನ, ದೇವಸ್ಥಾನಗಳು ಶೇಖರ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಿದೆ.
“ಅಭಿಮಾನಿಗಳಿಗೆ ಸಿದ್ಧಿ ಪುರುಷ”: ತಮ್ಮ 70 ವರ್ಷಗಳ ದೈವಪಾತ್ರಿಯ ಸೇವೆಯಲ್ಲಿ ಕಾಚೂರು ಶೇಖರ ಶೆಟ್ಟಿ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಪಡೆದಿದ್ದಾರೆ. ತಮ್ಮ ಕಷ್ಟಗಳನ್ನು ತೋಡಿಕೊಂಡು ಬರುವ ದೈವ ಭಕ್ತರಿಗೆ ಸಮಸ್ಯೆಯ ಮೂಲವನ್ನು ತಿಳಿಸಿ ಪರಿಹಾರವನ್ನು ಸೂಚಿಸುವ ಮೂಲಕ ನೂರಾರು ಜನರ ಬಾಳನ್ನು ಬೆಳಗಿಸಿದ ಕೀರ್ತಿ ಶೇಖರ ಶೆಟ್ಟಿ ಅವರಿಗೆ ಸಲ್ಲುತ್ತದೆ. ಯಾವುದೇ ವಿಚಾರಗಳನ್ನು ದರ್ಶನ ಮಾತ್ರವಲ್ಲದೇ ಯಾವುದೇ ಸಮಯದಲ್ಲಿಯೂ ಕರಾರುವಕ್ಕಾಗಿ ತಿಳಿಸಿ ಪರಿಹಾರ ಸೂಚಿಸುವ ಮೂಲಕ ಕಾಚೂರು ಶೇಖರ ಶೆಟ್ಟಿ ಅವರು “ಅಭಿಮಾನಿಗಳ ಸಿದ್ಧಿ ಪುರುಷ” ಎನಿಸಿಕೊಂಡಿದ್ದರು.

ದೈವಪಾತ್ರಿಗಳಲ್ಲಿ ಹಿರಿಯರಾದ ಕಾಚೂರು ಶೇಖರ ಶೆಟ್ಟಿ ಅವರು ಮಾ.29, 2021ರಲ್ಲಿ ದೈವಾಧೀನರಾದರು. ಶಿಮಂತೂರಿನ ಕಾಚೂರು ಧರ್ಮಚಾವಡಿಯಲ್ಲಿ ಮೈಸಂದಾಯ, ಕಾಂತೇರಿ ಧೂಮಾವತಿ, ದುಗ್ಗೊಡಿ, ಸರಳ ಧೂಮಾವತಿ ಹಾಗೂ ಅಣಪ್ಪ ಪಂಜುರ್ಲಿ ಧರ್ಮದೈವಗಳು ಆನಾದಿ ಕಾಲದಿಂದಲೂ ಆರಾಧಿಸಲ್ಪಡುತ್ತಿವೆ. ಬರಹ: ರವಿರಾಜ್ ಶೆಟ್ಟಿ ಕಟೀಲು, ಫೋಟೊ ಕೃಪೆ: ಜೀವಿತ್ ಶೆಟ್ಟಿ

Pages