ಸುರತ್ಕಲ್: ಬಂಟರ ಸಂಘ(ರಿ) ಸುರತ್ಕಲ್ ಇದರ ವತಿಯಿಂದ ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಭೆಯನ್ನು ಉದ್ದೇಶಿಸಿ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, "ಸುರತ್ಕಲ್ ಬಂಟರ ಸಂಘ ಸುಧಾಕರ್ ಪೂಂಜಾರ ಅವಧಿಯಲ್ಲಿ ಶ್ಲಾಘನೀಯ ಕಾರ್ಯವನ್ನು ಮಾಡಿದೆ. ಸಂಘ ಸಂಸ್ಥೆಗಳು ಕೇವಲ ಹೆಸರಿಗೆ ಮಾತ್ರ ಇರಬಾರದು. ಸುರತ್ಕಲ್ ಬಂಟರ ಸಂಘದಂತೆ ಬಡವರ, ಅಶಕ್ತರ ಆಶಾಕಿರಣವಾಗಿ ಸಮಾಜದಲ್ಲಿ ಹೆಸರನ್ನು ಅಚ್ಚಳಿಯದೆ ಉಳಿಯುವಂತೆ ನೋಡಿಕೊಳ್ಳಬೇಕು. ಶಿಕ್ಷಣ, ಮೂಲಭೂತ ಸೌಕರ್ಯಗಳಿಗೆ ಬಂಟರ ಸಂಘ ನೆರವು ನೀಡುತ್ತಾ ಬಂದಿದ್ದು ಮುಂದೆಯೂ ಇಂತಹ ಕೆಲಸಕ್ಕೆ ಬೆನ್ನೆಲುಬಾಗಿ ನಿಲ್ಲಲಿದೆ" ಎಂದರು.
ಬಳಿಕ ಮಾತಾಡಿದ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮಾನಾಥ್ ಶೆಟ್ಟಿ ಅವರು, "ಸುರತ್ಕಲ್ ಬಂಟರ ಸಂಘ ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜದಲ್ಲಿ ಇಂದು ಗುರುತಿಸಿಕೊಳ್ಳುವಂತೆ ಮಾಡಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾದ ಸಂಘದ ಕಾರ್ಯ ಚಟುವಟಿಕೆಯ ಹಿಂದೆ ಇದರ ಅಧ್ಯಕ್ಷರ ಶ್ರಮ ಅಡಗಿದೆ. ಪ್ರಾಮಾಣಿಕ ಸೇವೆಗೆ ಪ್ರತಿಫಲವಾಗಿ ಮಾತ್ರ ಇಂತಹ ಹಿರಿಮೆ ಪಡೆಯಲು ಸಾಧ್ಯ. ವರ್ಷದಿಂದ ವರ್ಷಕ್ಕೆ ವಿನೂತನ ಯೋಜನೆಗಳ ಮೂಲಕ ಸಂಘ ಜನರಿಗೆ ಹತ್ತಿರವಾಗಿರುವ ಸುರತ್ಕಲ್ ಬಂಟರ ಸಂಘ ಮುಂದೆ ಇನ್ನಷ್ಟು ಸಮಾಜಮುಖಿಯಾಗಿ ಬೆಳೆಯಲಿ" ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಕೃಷ್ಣಾಪುರ ಕಾಟಿಪಳ್ಳ ನಿವಾಸಿ ರಜನಿ ರೈ ಅವರಿಗೆ ಸುರತ್ಕಲ್ ಬಂಟರ ಸಂಘ ಕೊಡಮಾಡಿದ ನೂತನ ಮನೆಯ ಕೀಲಿಕೈ ಅನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಅವರು ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ವಿಕಲ ಚೇತನರಿಗೆ ಸಹಾಯಹಸ್ತ,102 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಜರುಗಿತು. ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸುರತ್ಕಲ್ ಬಂಟರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲೋಕಯ್ಯ ಶೆಟ್ಟಿ ಮುಂಚೂರು ಅವರು ಮಾತನಾಡಿ, "ಸಂಘದ ಸದಸ್ಯರು, ಬಂಟ ಸಮಾಜದ ಬಾಂಧವರು ಇಲ್ಲಿಯವರೆಗೆ ಸಹಕಾರ ಕೊಟ್ಟಂತೆ ಇನ್ನು ಮುಂದೆಯೂ ನನಗೆ ಸಹಕಾರ ಕೊಡಬೇಕು" ಎಂದು ಮನವಿ ಮಾಡಿದರು.
ಬಳಿಕ ಮಾತಾಡಿದ ಸಂಘದ ಅಧ್ಯಕ್ಷ ಸುಧಾಕರ ಎಸ್. ಪೂಂಜಾ ಅವರು, "ನಾನು ಬಂಟರ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಆಡಳಿತ ಕಮಿಟಿಯಲ್ಲಿದ್ದ ನನ್ನ ಮಿತ್ರರ ಸಹಕಾರ ಕಾರಣ. ಅವರೆಲ್ಲರನ್ನು ನಾನು ಈ ಸಂದರ್ಭದಲ್ಲಿ ಸ್ಮರಿಸುತ್ತಿದ್ದೇನೆ. ಮುಂದಿನ ಅಧ್ಯಕ್ಷರಿಗೂ ನೀವೆಲ್ಲರೂ ಇದೇ ರೀತಿಯಲ್ಲಿ ಸಹಕಾರ ಕೊಡಬೇಕು" ಎಂದರು.
ವೇದಿಕೆಯಲ್ಲಿ ಹುಬ್ಬಳ್ಳಿ ಪಂಜುರ್ಲಿ ಗ್ರೂಪ್ಸ್ ಮಾಲಕ ರಾಜೇಂದ್ರ ಶೆಟ್ಟಿ, ಇಂಟರ್ ನ್ಯಾಪನಲ್ ಬಂಟ್ಸ್ ವೆಲ್ಪೇರ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ದೇವಿಚರಣ್ ಶೆಟ್ಟಿ, ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿ ಸಂಚಾಲಕ ವಸಂತ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಕುಳಾಯಿಗುತ್ತು ರೋಹಿತಾಕ್ಷ ರೈ ಮಾಜೀ ಅಧ್ಯಕ್ಷ ಎಂ ದೇವಾನಂದ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಕೋಶಾಧಿಕಾರಿ ರತ್ನಾಕರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಕುಡುಂಬೂರು, ಸಂಘಟನಾ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಮಹಿಳಾ ವೇದಿಕೆಯ ಅಧ್ಯೆಕ್ಷೆ ಚಿತ್ರಾ ಜೆ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಾಳ, ಕ್ರೀಡಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಕಾಟಿಪಳ್ಳ, ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಐಕಳ ಹರೀಶ್ ಶೆಟ್ಟಿ, ರಾಜೇಂದ್ರ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ವಸಂತ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ರತ್ನಾಕರ ಶೆಟ್ಟಿ ಎಕ್ಕಾರ್ ಮೊದಲಾದವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಸುಧಾಕರ ಪೂಂಜ ಅವರನ್ನು ರೋಹಿರಾಕ್ಷ ರೈ, ದೇವಾನಂದ ಶೆಟ್ಟಿ, ಉಲ್ಲಾಸ್ ಶೆಟ್ಟಿ ಮತ್ತು ಸಂಘದ ಪದಾಧಿಕಾರಿಗಳು ಗೌರವಿಸಿದರು.
ಸುಧಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಅನುಪ್ ಶೆಟ್ಟಿ ಇಡ್ಯಾ ಪ್ರಾರ್ಥಿಸಿದರು. ಲೋಕಯ್ಯ ಶೆಟ್ಟಿ ಸ್ವಾಗತಿಸಿದರು. ಪ್ರವೀಣ್ ಶೆಟ್ಟಿ ವಂದಿಸಿದರು. ರಾಜೇಶ್ವರಿ ಡಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.