ಬೇಡಿಕೆ ಈಡೇರದಿದ್ದರೆ ಚುನಾವಣೆಯಲ್ಲಿ ಉತ್ತರ: ಬಂಟರ ಎಚ್ಚರಿಕೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬೇಡಿಕೆ ಈಡೇರದಿದ್ದರೆ ಚುನಾವಣೆಯಲ್ಲಿ ಉತ್ತರ: ಬಂಟರ ಎಚ್ಚರಿಕೆ

Share This
ಮಂಗಳೂರು: ಬಂಟ ಸಮಾಜಕ್ಕೆ ನಿಗಮ, ಮೀಸಲಾತಿಯನ್ನು ೩ಬಿಯಿಂದ ೨ಎಗೆ ವರ್ಗಾಯಿಸಬೇಕು ಎನ್ನುವ ಎರಡು ಬೇಡಿಕೆಗಳನ್ನು ಬಿಜೆಪಿ ರಾಜ್ಯಾಧ್ಯಕ್ಷರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ, ಬೇಡಿಕೆ ಈಡೇರದಿದ್ದಲ್ಲಿ ರಸ್ತೆಗಿಳಿಯುವುದಿಲ್ಲ, ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಎಚ್ಚರಿಸಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ನಿನ್ನೆ ಬಂಟ್ಸ್ ಹಾಸ್ಟೆಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಸಮಾಜಕ್ಕೂ ನಿಗಮ, ಸರಕಾರದಿಂದ ಸಹಾಯ ಸಿಗುತ್ತಿದೆ, ಆದರೆ ಬಂಟರಿಗೆ ಅಂಥ ಸಹಕಾರ, ನಿಗಮ ಬಂದಿಲ್ಲ. ಇದುವರೆಗೂ ನಾವು ಹೋರಾಟ ಮಾಡಿಲ್ಲ, ಇದರರ್ಥ ನಮಗೆ ಶಕ್ತಿ ಇಲ್ಲ ಎಂದಲ್ಲ. ಬಂಟ ಸಮಾಜದ ಐವರು ಶಾಸಕರಿದ್ದು, ಅವರೇ ನಮ್ಮ ಬೇಡಿಕೆ ಈಡೇರಿಸಬೇಕಿತ್ತು, ಇದಕ್ಕಾಗಿ ನಮ್ಮ ಅಗತ್ಯವಿರಲಿಲ್ಲ. ಈಗ ನಮ್ಮ ನಾಯಕರನ್ನು ಸಮಾಜ ಪ್ರಶ್ನಿಸುತ್ತಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಂಟರು, ಬ್ರಾಹ್ಮಣರಿಗೂ ನಿಗಮದ ಭರವಸೆ ನೀಡಲಾಗಿದೆ. ಅದಕ್ಕಿಂತ ಮೊದಲು ಸರಕಾರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಬಂಟ ಸಮುದಾಯ ಮೇಲ್ನೋಟಕ್ಕೆ ಅತ್ಯಂತ ಶ್ರೀಮಂತ ಸಮುದಾಯವಾಗಿ ಕಂಡು ಬರುತ್ತಿದ್ದರೂ ಶೇ.೭೫ರಷ್ಟು ಮಂದಿ ಮಧ್ಯಮ ಮತ್ತು ಬಡತನ ರೇಖೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದುವರೆಗೂ ಬಂಟ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಯನ್ನು ಯಾವುದೇ ಆಡಳಿತ ಪಕ್ಷಗಳು ಕೊಟ್ಟಿಲ್ಲ. ಐದು ಜನ ಶಾಸಕರು ಬಂಟರಾಗಿದ್ದರೂ ಸ್ವಸಮುದಾಯಕ್ಕೆ ಸಹಾಯ ಮಾಡಿದರೆ ಇತರ ಸಮುದಾಯಕ್ಕೆ ಕೋಪ ಬರಬಹುದೇ ಎನ್ನುವ ಅಳುಕು ಇರಬಹುದು ಎಂದು ತಿಳಿಸಿದರು.

ಬಿಲ್ಲವರಿಗೆ ನಿಗಮ ಆಗಿದ್ದು ಸಂತೋಷ, ಅವರಿಗೆ ಶಾಸಕರು, ಸಚಿವರು ಬೆಂಬಲ ನೀಡಿದ್ದಾರೆ. ಆದರೆ ನಮ್ಮವರು ಏನು ಮಾಡುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ. ರಸ್ತೆ ವಿಚಾರದಲ್ಲಿ ಸುಂದರ ಶೆಟ್ಟಿಯವರ ಹೆಸರು ಬಂದಾಗ ಎಲ್ಲ ಬಂಟರು ಒಗ್ಗಟ್ಟಾಗಿದ್ದರು. ವಿಶ್ವದಾದ್ಯಂತ ಇರುವ ಬಂಟರನ್ನು ತರಿಸಿ ಪ್ರತೀ ಕ್ಷೇತ್ರದಲ್ಲೂ ಓರ್ವ ಬಂಟ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ, ಐದು ಸಾವಿರ ಮತಗಳನ್ನು ಪಡೆದರೂ ಗೆಲ್ಲುವ ಅಭ್ಯರ್ಥಿಯನ್ನು ಸೋಲಿಸುವ ಸಾಮರ್ಥ್ಯ ನಮಗಿದೆ ಎಂದು ಎಚ್ಚರಿಸಿದರು.

ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷರಾದ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಒಂದು ಅಭ್ಯರ್ಥಿಯನ್ನು ಗೆಲ್ಲಿಸುವ ಮತ್ತು ಸೋಲಿಸುವ ಶಕ್ತಿ ಬಂಟ ಸಮಾಜಕ್ಕಿದೆ. ನಮ್ಮ ಸಮಾಜದ ಐವರು ಶಾಸಕರು ಸಮಾಜದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಯಾವ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸುತ್ತಾರೋ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಬಂಟರು ಹೇಡಿಗಳಲ್ಲ ಎಂದರು.

ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಜತೆಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ, ಪುಣೆ ಸಂತೋಷ್ ಶೆಟ್ಟಿ, ಶಶಿಧರ ರೈ ಬಾಲ್ಯೊಟ್ಟು, ಕರಾವಳಿ ಭಾಗದ ವಿವಿಧ ಕ್ಷೇತ್ರಗಳ ಬಂಟರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.

ಚುನಾವಣೆಗೆ ನಿಲ್ಲುವವರಿಗೆ ಬೆಂಬಲ: ಈಗಿನ ಸರಕಾರ ಬೇಡಿಕೆಯನ್ನು ಈಡೇರಿಸದಿದ್ದರೆ ಬಂಟ ಸಮುದಾಯದ ಪ್ರತಿನಿಧಿಯಾಗಿ ಲೋಕಸಭಾ ಚುನಾವಣೆಗೆ ನಿಲ್ಲುತ್ತೀರಾ ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಐಕಳ, ನಮಗೆ ಯಾರ ಮೇಲೂ ವೈಯುಕ್ತಿಕ ಹಗೆತನವಿಲ್ಲ, ಅಲ್ಲದೆ ನಾನು ಎಂದೋ ಚುನಾವಣೆಗೆ ನಿಂತಿದ್ದರೆ ಶಾಸಕ, ಸಚಿವನಾಗುತ್ತಿದ್ದೆ. ಹಾಲಾಡಿಯವರನ್ನು ಹೊರತುಪಡಿಸಿ ಇತರ ಎಲ್ಲರೂ ನನಗಿಂತ ಕಿರಿಯರಾಗಿದ್ದು ನಾನು ಬೆಂಬಲ ನೀಡಿದ್ದೇನೆ. ಈಗ ನನಗೆ ವಯಸ್ಸಾಗಿದ್ದು, ನಮ್ಮ ಸಮುದಾಯವನ್ನು ಬೆಂಬಲಿಸುವವರಿಗೆ ನಾವು ಬೆಂಬಲ ನೀಡುತ್ತೇವೆ. ಆಗಲಾದರೂ ನಮ್ಮ ಬೇಡಿಕೆ ಈಡೇರಿಸದ ಬಗ್ಗೆ ಈಗಿನ ಶಾಸಕರಿಗೆ ಪಶ್ಚಾತ್ತಾಪ ಆಗಬಹುದು ಎಂದರು.

ಬಂಟರ ಮೀಸಲಾತಿ 3ಬಿಯಿಂದ ಎಗೆ ವರ್ಗಾಯಿಸಿ: ಬಂಟರ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿ 3ಬಿಯಿಂದ 2ಎಗೆ ವರ್ಗಾಯಿಸಬೇಕು, ಬಂಟರ ಯಾನೆ ನಾಡವರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಹಕ್ಕೊತ್ತಾಯ ಮಾಡುವುದಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಒತ್ತಾಯಿಸಿದ್ದಾರೆ. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದೇ ಇದ್ದರೆ ಚುನಾವಣೆಯಲ್ಲಿ ಸೂಕ್ತ ಪಾಠ ಕಲಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ನಮ್ಮ ಸಂಸದರು, ಐವರು ಶಾಸಕರು ಬಂಟ ಸಮುದಾಯಕ್ಕೆ ಸೇರಿದವರು. ಇವರಿಗೆ ನಮ್ಮ ಬೇಡಿಕೆ ಬಗ್ಗೆ ಎರಡು ರ್ಷ ಹಿಂದೆಯೇ ಮನವಿ ಸಲ್ಲಿಸಿದ್ದೆವು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಬಳಿಯೂ ಪ್ರಸ್ತಾಪಿಸಿದ್ದು, ಅವರು ಪ್ರತ್ಯೇಕ ಬಂಟ ನಿಗಮ ಹಾಗೂ 3ಬಿ ಯಿಂದ 2ಎ ಗೆ ಮೀಸಲಾತಿ ವರ್ಗಾಯಿಸಲು ಒಪ್ಪಿದ್ದಾರೆ. ಆದರೆ ಈ ಬಾರಿಯ ಬಜೆಟ್‌ನಲ್ಲಿ ಹಾಗೂ ನಂತರ ಸರ್ಕಾರ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಇದು ಬಂಟ ಸಮುದಾಯದ ಸ್ವಾಭಿಮಾನವನ್ನು ಪ್ರಶ್ನೆ, ನಾವು ಯಾರಲ್ಲೂ ಭಿಕ್ಷಾಟನೆ ಮಾಡುತ್ತಿಲ್ಲ. 150 ಬಂಟರ ಸಂಘಟನೆಗಳ ಒಕ್ಕೂಟ ಇದಾಗಿದ್ದು, ನಮ್ಮ ಬೇಡಿಕೆನ್ನು ಈಡೇರಿಸುವ ಯಾವುದೇ ಪಕ್ಷವನ್ನು ನಾವು ಬೆಂಬಲಿಸುತ್ತೇವೆ ಎಂದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಿಲ್ಲವ, ಬ್ರಾಹ್ಮಣ, ಬಂಟರಿಗೆ ಪ್ರತ್ಯೇಕ ನಿಗಮ ಘೋಷಣೆಯ ಪ್ರಸ್ತಾಪ ಹೇಳಿದೆ. ಸರ್ಕಾರ ಕೂಡ ಬಜೆಟ್ ಅಧಿವೇಶನ ಮುಕ್ತಾಯಗೊಂಡರೂ ನಮ್ಮ ಬೇಡಿಕೆ ಈಡೇರಿಸಲು ಮುಂದಾಗಬೇಕು. ಶೇ.75ರಷ್ಟು ಬಂಟರು ಬಡವರೇ ಇದ್ದಾರೆ. ಬಂಟ ಸಮುದಾಯಕ್ಕೆ ತನ್ನದೇ ಆದ ಇತಿಹಾಸ ಇದೆ. ಬಂಟರು ಹೇಡಿಗಳು ಹಾಗೂ ದ್ರೋಹಿಗಳಲ್ಲ. ಒಂದು ವೇಳೆ ನಮ್ಮ ಬೇಡಿಕೆ ಈಡೇರಿಸದಿದ್ದರೆ, ಚುನಾವಣೆಯಲ್ಲಿ ನಮ್ಮದೇ ಅಭ್ಯರ್ಥಿಗಳನ್ನು ಎಲ್ಲ ಕ್ಷೇತ್ರಗಳಲ್ಲೂ ನಿಲ್ಲಿಸಿ, ಪ್ರಮುಖ ಪಕ್ಷಗಳ ಸೋಲಿಸುತ್ತೇವೆ ಎಂದರು.

Pages