ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಐಕಳ ಹರೀಶ್ ಶೆಟ್ಟಿ ಆಯ್ಕೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಐಕಳ ಹರೀಶ್ ಶೆಟ್ಟಿ ಆಯ್ಕೆ

Share This
ಮಂಗಳೂರು: ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ(ರಿ.) ಪುತ್ತೂರು ಸಹಯೋಗದೊಂದಿಗೆ ನಡೆಸುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ಯಕ್ಷಗಾನ ತಾಳಮದ್ದಳೆ ಸಪ್ತಾಹದ ದಶಮಾನ ಸಡಗರ ಇದೇ ನವೆಂಬರ 21ರಿಂದ 27ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಲಿದೆ. ಈ ಸಂದರ್ಭದಲ್ಲಿ ನೀಡಲಾಗುವ 'ಯಕ್ಷಾಂಗಣ ರಾಜ್ಯೋತ್ಸವ' ಪುರಸ್ಕಾರಕ್ಕೆ ಮುಂಬೈ ಉದ್ಯಮಿ ಮತ್ತು ಕಲಾಪೋಷಕ ಐಕಳ ಹರೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಐಕಳ ಹರೀಶ್ ಶೆಟ್ಟಿ: ನಿರಂತರ ಸೇವಾರಾಧಕರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಐಕಳ ಹರೀಶ್ ಶೆಟ್ಟಿ ಮುಂಬೈ ನಗರದ ಪ್ರತಿಷ್ಠಿತ ಉದ್ಯಮಿ ಹಾಗೂ ಸಮಾಜಸೇವಕರು. ತಮ್ಮ ಶಾಲಾ ದಿನಗಳಿಂದಲೇ ಹುಟ್ಟೂರಿನಲ್ಲಿ ಉತ್ತಮ ಕ್ರೀಡಾಪಟುವಾಗಿ ದೇಹದಾರ್ಢ್ಯತೆ ಸ್ಪರ್ಧೆಯಲ್ಲಿ ರಾಜ್ಯ-ರಾಷ್ಟ್ರಮಟ್ಟದಲ್ಲಿ ಮಿ.ದಕ್ಷಿಣ ಕನ್ನಡ, ಕರ್ನಾಟಕ ಕಿಶೋರ್, ಭಾರತ್ ಕಿಶೋರ್ ಪ್ರಶಸ್ತಿಗಳನ್ನು ಪಡೆದವರು.

ಮುಂಬೈ ಆಹಾರ್ ಉಪಾಧ್ಯಕ್ಷರಾಗಿ, ಸಾಯಿ ಸಂಧ್ಯಾ ಆರ್ಟ್ಸ್ ಗೌರವಾಧ್ಯಕ್ಷರಾಗಿ, ಮಾತೃಭೂಮಿ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ, ಎಸ್ಎಂಎಸ್ ಕಾಲೇಜು ಕಟ್ಟಡ ಸಮಿತಿ ಕಾರ್ಯಾಧ್ಯಕ್ಷರಾಗಿ ದುಡಿದವರು. ಬಂಟರ ಸಂಘದ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷರಾಗಿ ಅಖಿಲ ಭಾರತ ಮಟ್ಟದ ಕ್ರೀಡೋತ್ಸವ ನಡೆಸಿದ್ದಾರೆ. ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷರಾಗಿ 1500 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಒಂದು ಕೋಟಿಗೂ ಮಿಕ್ಕಿದ ಶಾಶ್ವತ ನಿಧಿ ಸ್ಥಾಪನೆ, ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ಆರ್ಥಿಕ ಸಹಾಯ, ಬಟ್ಟೆ ಬರೆ ವಿತರಣೆ ಇತ್ಯಾದಿ ಅವರ ಸಮಾಜ ಸೇವೆಯಲ್ಲಿ ಕೆಲವು.

ಅಪ್ಪಟ ದೈವಭಕ್ತರಾದ ಐಕಳರು ಶ್ರೀ ಕ್ಷೇತ್ರ ಬಪ್ಪನಾಡು ಮತ್ತು ಕಟೀಲು ದೇವಳದ ಮಹಾದ್ವಾರ ನಿರ್ಮಾಣ, ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿ ಕಾರ್ಯಭಾರ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮ ಕಳಶೋತ್ಸವದಲ್ಲಿ ಮುಂಬೈ ಸಮಿತಿ ಅಧ್ಯಕ್ಷರಾಗಿ ಶ್ರೀದೇವಿಗೆ ಚಿನ್ನದ ಕಳಶ ಸಮರ್ಪಣೆ, ಮುಂಬೈ ಬಂಟರ ಸಂಘದ ಅಧ್ಯಕ್ಷರಾಗಿ ಸುಸಜ್ಜಿತ ಕಟ್ಟಡ ನಿರ್ಮಾಣ, ಜಾತಿ ಮತ ಭೇದವಿಲ್ಲದೆ ಸಂತ್ರಸ್ತರಿಗೆ ಸಹಾಯ ಹಸ್ತ ಇತ್ಯಾದಿಗಳಿಂದ ಅವರು ಪಡೆದ ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿ ಸಾರ್ಥಕವೆನಿಸಿದೆ.

ಪ್ರಸ್ತುತ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಎರಡು ವರ್ಷಗಳಿಂದ ವಿವಿಧ ಸಮಾಜದ ಬಡವರಿಗೆ, ರೋಗಿಗಳಿಗೆ, ವಸತಿ ರಹಿತರಿಗೆ ಮತ್ತು ಶಿಕ್ಷಣಾರ್ಥಿಗಳಿಗೆ ಸುಮಾರು 11 ಕೋಟಿ ರೂಪಾಯಿಯ ಸಮಾಜ ಸೇವಾ ಕಾರ್ಯಗಳ ಮೂಲಕ ಐಕಳ ಹರೀಶ್ ಶೆಟ್ಟಿ ಅವರು ಎಲ್ಲರಿಗೂ ಮಾದರಿಯೆನಿಸಿ ಗಮನ ಸೆಳೆದಿದ್ದಾರೆ. 

ವಿವಿಧ ರಂಗದ ಕಲಾವಿದರನ್ನು ಪ್ರೋತ್ಸಾಹಿಸುವುದರೊಂದಿಗೆ ಕಲೆ ಹಾಗೂ ಕಲಾ ಸಂಸ್ಥೆಗಳನ್ನು ನಿರಂತರ ಪೋಷಿಸುತ್ತಿರುವ ಐಕಳ ಹರೀಶ್ ಶೆಟ್ಟರಿಗೆ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಗೌರವ ಸಮ್ಮಾನಗಳು ಲಭಿಸಿವೆ. ಅವರ ಸಾಧನೆಯ ಕುರಿತಾಗಿ ಮುಂಬೈ ವಿಶ್ವವಿದ್ಯಾನಿಲಯ ಪ್ರಕಟಿಸಿದ 'ಸಾರ್ವಭೌಮ' ಗೌರವ ಗ್ರಂಥ ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ.

ಪ್ರಶಸ್ತಿ ಪ್ರದಾನ: ಇದೇ ನವಂಬರ 21ರಂದು ಸಾಯಂಕಾಲ ಜರಗುವ ಯಕ್ಷಾಂಗಣದ ದಶಮಾನ ಸಡಗರ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಎಸ್. ಯಡಪಡಿತ್ತಾಯ ಅವರು ಐಕಳ ಹರೀಶ್ ಶೆಟ್ಟರಿಗೆ ದಶಮಾನೋತ್ಸವ ಸಂಭ್ರಮದ ವಿಶೇಷ 'ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ' ಪ್ರದಾನ ಮಾಡುವರು. ಸಂಸ್ಥೆಯ ಗೌರವಾಧ್ಯಕ್ಷ ಡಾ. ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸುವರು. ಶಾಸಕ ಡಿ.ವೇದವ್ಯಾಸ ಕಾಮತ್, ಎ. ಸದಾನಂದ ಶೆಟ್ಟಿ, ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಶಶಿಧರ ಶೆಟ್ಟಿ ಬರೋಡ, ವಿ. ಕರುಣಾಕರ, ಕೆ.ಕೆ.ಶೆಟ್ಟಿ ಅಹಮದ್ ನಗರ ಮೊದಲಾದ ಗಣ್ಯರು ಅತಿಥಿಗಳಾಗಿರುವರು. ಬಳಿಕ ಹತ್ತನೇ ವರ್ಷದ ನುಡಿ ಹಬ್ಬವಾಗಿ ನವೆಂಬರ 27ರವರೆಗೆ 'ಸಪ್ತ ವಿಜಯ' ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸರಣಿ ತಾಳಮದ್ದಳೆ, ಸನ್ಮಾನ ಮತ್ತು ಸಂಸ್ಮರಣ ಕಾರ್ಯಕ್ರಮಗಳು ಜರಗಲಿವೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Pages