ಮಂಗಳೂರು : ಅತ್ಯಂತ ಶ್ರಮವಹಿಸಿ ದುಡಿದು ಯಶಸ್ವಿ ಉದ್ಯಮಿಯಾಗಿ ಇಂದು ನೂರಾರು ಜನರಿಗೆ ಉದ್ಯೋಗದಾತರಾಗಿರುವ ಹಾಗೂ ತಮ್ಮ ಸಮಾಜಸೇವೆಯ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಬೆಳಕಾಗಿ, ಕೊಡುಗೈ ದಾನಿಯಾಗಿರುವ ಡಾ| ರವಿ ಶೆಟ್ಟಿ ಮೂಡಂಬೈಲು, ಕತಾರ್ ಅವರ ಸಾಧನೆಯ ಬಗ್ಗೆ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ರಚಿಸಿದ 'ರವಿತೇಜ' ಪುಸ್ತಕವು ಮೇ.21ರಂದು ಲೋಕಾರ್ಪಣೆಗೊಂಡಿತು.
ಪುತ್ತೂರಿನ ಪ್ರಶಾಂತ್ ಮಹಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ವಿಶ್ರಾಂತ ಕುಲಪತಿ ಪ್ರೋ. ಬಿ. ವಿ. ವಿವೇಕ್ ರೈ ಅವರು 'ರವಿತೇಜ' ಪುಸ್ತಕ ಬಿಡುಗಡೆಗೊಳಿಸಿದರು. ಇದೇ ಸಂದರ್ಭ ಮತ್ತೊಂದು ಕೃತಿ 'ಸುಭಾಷಿತವನ್ನು ಉದ್ಯಮಿ, ಸಂಘಟಕ ಸರ್ವೋತ್ತಮ ಶೆಟ್ಟಿ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ 'ರವಿತೇಜ' ಪುಸ್ತಕ ರಚಿಸಿದ ಮುಂಬೈ ವಿಶ್ವವಿದ್ಯಾಲಯದ ಡಾ| ಪೂರ್ಣಿಮಾ ಎಸ್. ಶೆಟ್ಟಿ ಹಾಗೂ ಅದರ ಇಂಗ್ಲಿಷ್ ಅನುವಾದ ಮಾಡಿರುವ ಮಿಥಾಲಿ ಪಿ. ರೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪದ್ಮಶ್ರೀ ಹಾಜಬ್ಬರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಅಕ್ಷರ ಸಂತ ಪದ್ಮಶ್ರೀ ಹಾಜಬ್ಬರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಹಾಜಬ್ಬರು ತಾವು ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟುವಲ್ಲಿಂದ ಇಲ್ಲಿಯವರೆಗೆ ನೆರವಾದ ಎಲ್ಲರನ್ನೂ ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಭಿಮಾನಿಗಳ ಅಭಿಮಾನದ ಪ್ರತೀಕವಾಗಿ ಡಾ| ರವಿ ಶೆಟ್ಟಿ ಮೂಡಂಬೈಲು ಅವರನ್ನು ಅಭಿಮಾನಿಗಳು, ಅವರ ಹಿತೈಷಿಗಳು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ವಹಿಸಿದ್ದರು. ಹಿರಿಯ ಲೇಖಕ ನರೇಂದ್ರ ರೈ ದೇರ್ಲದೇರ್ಲ ಕೃತಿ ಪರಿಚಯಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಚಾಲಕ ಡಾ| ತುಕಾರಾಮ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದೇಶ-ವಿದೇಶದ ರವಿಯಣ್ಣನ ಅಭಿಮಾನಿ ಬಳಗ ನೆರೆದಿದ್ದರು.
ಐಲೇಸಾ ಸಾರಥಿ ಡಾ. ರಮೇಶ್ಚಂದ್ರ ತಂಡದವರಿಂದ ಗಾನ ಸೌರಭ ಸಂಗೀತ ಕಾರ್ಯಕ್ರಮ ನಡೆಯಿತು. ಶಾಂತಾರಾಮ ಶೆಟ್ಟಿ ಸ್ವಾಗತಿಸಿದರು. ಶ್ರೀಮತಿ ಜ್ಯೋತಿ ಶೆಟ್ಟಿ ಅತಿಥಿಗಳಿಗೆ ಹೂಗುಚ್ಛ ನೀಡಿದರು. ಮಿಥಾಲಿ ಪ್ರಸನ್ನ ರೈ ಕಾರ್ಯಕ್ರಮ ನಿರ್ವಹಿಸಿದರು. ಐಲೇಸಾ ತಂಡದ ಸುರೇಂದ್ರ ಶೆಟ್ಟಿ ಮಾರ್ನಾಡ್ ಧನ್ಯವಾದ ಸಮರ್ಪಿಸಿದರು.