ಮಂಗಳೂರು: ಕಳೆದ ಕೆಲವು ವರ್ಷಗಳಿಂದ ನಗರದ ಸುಚಿತ್ರಾ, ಪ್ರಭಾತ್ ಚಿತ್ರಮಂದಿರದ ವ್ಯವಸ್ಥಾಪಕ ಮಂಡಳಿ ತುಳು ಚಲನಚಿತ್ರಗಳಿಗೆ ಪ್ರದರ್ಶನದ ಅವಕಾಶ ನೀಡುತ್ತಿಲ್ಲ. ಹಲವಾರು ಬಾರಿ ಈ ಕುರಿತು ಸಂಬಂಧ ಪಟ್ಟವರಲ್ಲಿ ಮಾತುಕತೆಯನ್ನೂ ನಡೆಸಲಾಗಿತ್ತು.
ತುಳುನಾಡಿನಲ್ಲಿ ತುಳುವರ ನೆಲದಲ್ಲಿ ವ್ಯವಹಾರ ನಡೆಸಿ ತುಳು ಚಿತ್ರಗಳಿಗೆ ಪ್ರದರ್ಶನ ಅವಕಾಶ ನೀಡುವುದಿಲ್ಲ ಎನ್ನುವುದು ಅವಮಾನಕರ, ಬೇಸರದ ವಿಷಯವಾಗಿತ್ತು. ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಹಲವಾರು ಬಾರಿ ಆಡಳಿತ ಮಂಡಳಿಯಲ್ಲಿ ವಿನಂತಿಸಿದರೂ ಅವಕಾಶ ಸಿಕ್ಕಿಲ್ಲ.
ಪ್ರಸ್ತುತ ಸಾಲು ಸಾಲು ತುಳು ಸಿನಿಮಾಗಳು ತೆರೆಗೆ ಬರುತ್ತಿರುವ ಹಿನ್ನಲೆಯಲ್ಲಿ ಕ್ಯಾಟ್ಕ(ರಿ) ಸಂಸ್ಥೆಯ ಅಧ್ಯಕ್ಷ ಮೋಹನ ಕೊಪ್ಪಲ ಅವರ ನೇತೃತ್ವದಲ್ಲಿ ತುಳು ಚಿತ್ರರಂಗದ ಅಭಿಮಾನಿಗಳು ಮತ್ತು ತುಳು ಸಂಘಟಕರು ಸುಚಿತ್ರಾ ಮತ್ತು ಪ್ರಭಾತ್ ಚಿತ್ರಮಂದಿರದ ಆಡಳಿತ ಮಂಡಳಿಗೆ ತುಳು ಚಿತ್ರ ಪ್ರದರ್ಶನ ಅವಕಾಶ ನೀಡುವಂತೆ ಮನವಿ ಸಲ್ಲಿಸಿದರು.
ಬಳಿಕ ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಅವರು ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲು ಸಹಕರಿಸುವುದಾಗಿ ತಿಳಿಸಿದರು. ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ಅವರು ಚಿತ್ರ ಮಂದಿರದ ಆಡಳಿತದಾರರೊಂದಿಗೆ ದೀರ್ಘ ಮಾತುಕತೆ ನಡೆಸಿ ಮನವಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಕ್ಯಾಟ್ಕದ ಅಧ್ಯಕ್ಷ ಮೋಹನ್ ಕೊಪ್ಪಲ, ಮಾಜಿ ಅಧ್ಯಕ್ಷ ಪಮ್ಮಿ ಕೊಡಿಯಾಲ್ ಬೈಲ್, ಉಪಾಧ್ಯಕ್ಷ ಸುಹಾನ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ ತುಳು ಸಂಘಟಕ ರೋಶನ್ ರೋನಾಲ್ಡ್, ನಟ ಅರ್ಜುನ್ ಕಾಪಿಕಾಡ್, ಅನೂಪ್ ಸಾಗರ್, ರಾಜ್ ಆಂಡ್ ಸೌಂಡ್ಸ್ ತುಳು ಸಿನಿಮಾದ ತಂಡ, ಕ್ಯಾಟ್ಕದ ಸದಸ್ಯರು ಉಪಸ್ಥಿತರಿದ್ದರು.