ಎ.23 : ಪುಳಿಂಚ ಪ್ರಶಸ್ತಿ ಪ್ರದಾನ, ಬಯಲಾಟ ಮತ್ತು ನಾಟಕ ಪ್ರದರ್ಶನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಎ.23 : ಪುಳಿಂಚ ಪ್ರಶಸ್ತಿ ಪ್ರದಾನ, ಬಯಲಾಟ ಮತ್ತು ನಾಟಕ ಪ್ರದರ್ಶನ

Share This
ಮಂಗಳೂರು : ಯಕ್ಷಗಾನ ರಂಗದ ಶ್ರೇಷ್ಠ ಕಲಾವಿದ, ಹಿರಿಯ ಬಣ್ಣದ ವೇಷಧಾರಿ, ಧೀರೋದಾತ್ತ ಪಾತ್ರಧಾರಿ, ತುಳು ಪ್ರಸಂಗಗಳ ಹಾಸ್ಯ ನಟ ಹಾಗೂ ಪ್ರಸಂಗಕರ್ತ ದಿ. ಪುಳಿಂಚ ರಾಮಯ್ಯ ಶೆಟ್ಟಿಯವರು ಧರ್ಮಸ್ಥಳ, ಮುಲ್ಕಿ, ಕೂಡ್ಲು, ಇರಾ, ಕರ್ನಾಟಕ, ಕುದ್ರೋಳಿ, ಇರುವೈಲ್, ಕದ್ರಿ ಇತ್ಯಾದಿ ಮೇಳಗಳಲ್ಲಿ ಸುಮಾರು 47 ವರ್ಷಗಳ ಸುದೀರ್ಘ ತಿರುಗಾಟ ನಡೆಸಿ ತೆಂಕುತಿಟ್ಟಿನ ಮೇರು ಕಲಾವಿದರಾಗಿ ಮೆರೆದವರು. 1939ರಲ್ಲಿ ಜನಿಸಿದ ಅವರು 2002 ಜುಲೈ 22ರಂದು ಕೇವಲ 63ರ ವಯಸ್ಸಿನಲ್ಲಿ ಆಕಸ್ಮಿಕವಾಗಿ ನಮ್ಮನ್ನು ಅಗಲಿ ಹೋದರು. ಅವರ ಪುತ್ರ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ‘ಪುಳಿಂಚ ಸೇವಾ ಪ್ರತಿಷ್ಠಾನದ ವತಿಯಿಂದ 2013ರಲ್ಲಿ ಪ್ರಾರಂಭವಾದ ಪುಳಿಂಚ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಪ್ರತಿ ಮೂರು ವರ್ಷಗಳಿಗೊಮ್ಮೆ ಪುಳಿಂಚರ ಕಾರ್ಯ ಕ್ಷೇತ್ರವಾಗಿದ್ದ ಬಾಳ್ತಿಲ ಗ್ರಾಮದ ಚೆಂಡೆ ‘ಪುಳಿಂಚ ಫಾರ್ಮ್ ಹೌಸ್’ನಲ್ಲಿ ನಡೆಯುತ್ತಿದೆ.
ಪುಳಿಂಚ ಪ್ರಶಸ್ತಿ ಪುರಸ್ಕೃತ ರು : ಪುಳಿಂಚ ರಾಮಯ್ಯ ಶೆಟ್ಟರ ಒಡನಾಡಿಗಳಾಗಿದ್ದ ಹಿರಿಯ ಕಲಾವಿದರನ್ನೇ ಆಯ್ಕೆ ಮಾಡಿ ಪ್ರಶಸ್ತಿ ನೀಡುವುದು ಪುಳಿಂಚ ಸೇವಾ ಪ್ರತಿಷ್ಠಾನದ ವೈಶಿಷ್ಟ್ಯ. ಅದರಲ್ಲಿ ಪ್ರಮುಖವಾದವರು ಅರುವ ಕೊರಗಪ್ಪ ಶೆಟ್ಟಿ (2013), ಕೋಳ್ಯೂರು ರಾಮಚಂದ್ರರಾವ್, ಕುಂಬ್ಳೆ ಸುಂದರ ರಾವ್, ಕೆ.ಎಚ್ ದಾಸಪ್ಪ ರೈ, ದಿ. ಮಿಜಾರು ಅಣ್ಣಪ್ಪ, ದಿ.ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ದಿ. ಅನಂತರಾಮ ಬಂಗಾಡಿ (2016); ದಿನೇಶ್ ಅಮ್ಮಣ್ಣಾಯ, ಶಿವರಾಮ ಜೋಗಿ, ಬಿ.ಸಿ.ರೋಡು ಪುಂಡರೀಕಾಕ್ಷ ಉಪಾಧ್ಯಾಯ (2019) ಅಲ್ಲದೆ ದೈವನರ್ತಕ ದಿವಂಗತ ಪದ್ಮ ಪಂಬದ ಮತ್ತು ಪೋಲಿಸ್ ಅಧಿಕಾರಿ ಕೇಪು ಗೌಡರಿಗೆ ಪುಳಿಂಚ ಸೇವಾರತ್ನ ಪುರಸ್ಕಾರಗಳನ್ನು ನೀಡಲಾಗಿದೆ.

ಇವರೊಂದಿಗೆ 2016ರಲ್ಲಿ ಪ್ರೋ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಂಪಾದಕತ್ವದಲ್ಲಿ ‘ಪುಳಿಂಚ ಸ್ಮೃತಿ-ಕೃತಿ’ ಎಂಬ ಗ್ರಂಥ ಹಾಗೂ ‘ಪುಳಿಂಚ ಜೀವನ-ಸಾಧನೆ’ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಲಾಗಿದೆ. ಪುಳಿಂಚ ಸೇವಾ ಪ್ರತಿಷ್ಠಾನದ ವತಿಯಿಂದ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಗಿಡ ನೆಡುವ ಕಾರ್ಯಕ್ರಮ, ಕೊರೋನಾ ಸಂತ್ರಸ್ತರಿಗೆ ಕಿಟ್ ವಿತರಣೆ ಹಾಗೂ ಇತರ ಸೌಲಭ್ಯಗಳು, ಸಾರ್ವಜನಿಕರಿಗಾಗಿ ವೈದ್ಯಕೀಯ ಶಿಬಿರ, ಕಣ್ಣಿನ ಶಸ್ತ್ರಚಿಕಿತ್ಸೆ, ಅಶಕ್ತರಿಗೆ ಆರ್ಥಿಕ ಸಹಾಯ, ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಮೊದಲಾದ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಎಪ್ರಿಲ್ 23ಕ್ಕೆ ಪುಳಿಂಚ ಪ್ರಶಸ್ತಿ ಪ್ರದಾನ: ಇದೀಗ ನಾಲ್ಕನೇ ಬಾರಿಗೆ ಪುಳಿಂಚ ಸೇವಾ ಪ್ರತಿಷ್ಠಾನದ ‘ಪುಳಿಂಚ ಪ್ರಶಸ್ತಿ ಪ್ರದಾನ’ ಸಮಾರಂಭ ನಡೆಯುತ್ತಿದೆ. 2022 ಎಪ್ರಿಲ್ 23ರಂದು ಶನಿವಾರ ಸಾಯಂಕಾಲ ಗಂಟೆ ನಾಲ್ಕರಿಂದ ಬಂಟ್ವಾಳ ತಾಲೂಕು ಕಲ್ಲಡ್ಕ ಸಮೀಪದಲ್ಲಿರುವ ಬಾಳ್ತಿಲ ಗ್ರಾಮದ ಚೆಂಡೆ ಶ್ರೀ ಕಾರಣಿಕದ ಕಲ್ಲುರ್ಟಿ ದೈವಸ್ಥಾನ ಆವರಣದ ಬೋಳ್ನಾಡುಗುತ್ತು ದಿ. ಸರೋಜಿನಿ ರಾಮಯ್ಯ ಶೆಟ್ಟಿ ಪುಳಿಂಚ ಬಯಲು ರಂಗಮಂಟಪದಲ್ಲಿ ‘ಪುಳಿಂಚ ಪ್ರಶಸ್ತಿ ಪ್ರದಾನ 2022, ಯಕ್ಷಗಾನ ಬಯಲಾಟ, ತುಳು ಹಾಸ್ಯಮಯ ನಾಟಕ ಮತ್ತು ಶ್ರೀ ಕಲ್ಲುರ್ಟಿ ದೈವದ ತ್ರೈಮಾಸಿಕ ಕೋಲ’ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಬೆಳ್ಳಾರೆ ವಿಶ್ವನಾಥ ರೈ, ಬಾಯಾರು ರಘುನಾಥ ಶೆಟ್ಟಿ, ಕೊಳ್ತಿಗೆ ನಾರಾಯಣ ಗೌಡ, ಜಪ್ಪು ದಯಾನಂದ ಶೆಟ್ಟಿ ಮತ್ತು ಮುಂಡಾಜೆ ಬಾಲಕೃಷ್ಣ ಶೆಟ್ಟಿ ಅವರಿಗೆ ತಲಾ ರೂ. 25000/- ಗೌರವ ನಿಧಿಯೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಲ್ಲದೆ ಕರ್ನಾಟಕ ಮೇಳದಲ್ಲಿ ಟೆಂಟಿನ ಮೇಸ್ತ್ರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಪೂವಪ್ಪ ಪೂಜಾರಿ ಚೆಂಡೆ ಹಾಗೂ SSLCಯಲ್ಲಿ ಹೆಚ್ಚು ಅಂಕಗಳಿಸಿದ ಕು. ಜೀವಿತ ಚೆಂಡೆ ಅವರನ್ನು ಸನ್ಮಾನಿಸಲಾಗುವುದು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಸಮಾರಂಭವನ್ನು ಉದ್ಘಾಟಿಸುವರು. ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸುವರು, ಸಂಸದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮುಖ್ಯ ಅತಿಥಿಗಳಾಗಿರುವರು. ಯಕ್ಷಗಾನ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ ಸಂಸ್ಮರಣಾ ಭಾಷಣ ಮಾಡುವರು. ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೋ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಅಭಿನಂದನಾ ಭಾಷಣ ಮಾಡುವರು. ಕಲಾವಿದ ಅಶೋಕ್ ಭಟ್ ಉಜಿರೆ ಕಾರ್ಯಕ್ರಮ ಸಂಯೋಜಿಸುವರು.

ಸಮಾರಂಭದ ಅಂಗವಾಗಿ ಸಂಜೆ ಗಂಟೆ 4:00ಕ್ಕೆ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ 'ಚಂದ್ರಾವಳಿ ವಿಲಾಸ' ಯಕ್ಷಗಾನ ಹಾಸ್ಯ ಪ್ರಸಂಗ, ನಿಧಿ ಶೆಟ್ಟಿ ಪುಳಿಂಚ ಅವರ ಭರತನಾಟ್ಯ, ಗೌರವ್ ರೈ ತಂಡದಿಂದ ‘ವಂದೇ ಮಾತರಂ’ ದೇಶಭಕ್ತಿ ಗೀತೆ ಹಾಗೂ ರಾತ್ರಿ ಗಂಟೆ 9:00ಕ್ಕೆ ಚಾಪರ್ಕ ಕಲಾವಿದರಿಂದ ದೇವದಾಸ್ ಕಾಪಿಕಾಡ್ ಅವರು ರಚಿಸಿ, ನಟಿಸಿ, ನಿರ್ದೇಶಿಸಿರುವ ‘ಕುರೆ ಪಟ್’ ವಿಭಿನ್ನ ಶೈಲಿಯ ತುಳು ಹಾಸ್ಯಮಯ ನಾಟಕ ಪ್ರದರ್ಶನವಿದೆ. ಅದೇ ದಿನ ರಾತ್ರಿ ಗಂಟೆ 12ರಿಂದ ಶ್ರೀ ಕಲ್ಲುರ್ಟಿ ದೈವದ ತ್ರೈವಾರ್ಷಿಕ ಕೋಲ ಮತ್ತು ಹರಕೆಯ ಕೋಲ ದೊಂದಿ ಬೆಳಕಿನಲ್ಲಿ ಜರಗಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕೋರಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ, ಶ್ರೀಧರ ಶೆಟ್ಟಿ ಪುಳಿಂಚ, ಪ್ರತಿಭಾ ಶ್ರೀಧರ ಶೆಟ್ಟಿ ಪುಳಿಂಚ, ಬೆಜ್ಜದ ಗುತ್ತು ಸುನೀಲ್ ಕುಮಾರ್ ಶೆಟ್ಟಿ, ಸತೀಶ್ ಪೂಜಾರಿ ಚೆಂಡೆ ಉಪಸ್ಥಿತರಿದ್ದರು.

Pages