ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್ ಕೆಲಸ ಶ್ಲಾಘನೀಯ : ಎ. ಸದಾನಂದ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್ ಕೆಲಸ ಶ್ಲಾಘನೀಯ : ಎ. ಸದಾನಂದ ಶೆಟ್ಟಿ

Share This
ಮಂಗಳೂರು: ಬಾಡ್ಮಿಂಟನ್ ಕ್ರೀಡೆಗಾಗಿ ದುಡಿಯುತ್ತಿರುವ ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್‍ನಂತಹ ಸಂಘಟನೆ ಇಡೀ ರಾಜ್ಯದಲ್ಲಿಯೇ ಇಲ್ಲ. ಗ್ರಾಮೀಣ ಸೇರಿದಂತೆ ನಗರದ ಕ್ರೀಡಾಪಟುಗಳಿಗೆ ಬೆಳೆಸುವ ಕೆಲಸ ಶ್ಲಾಘನೀಯ ಎಂದು ಮಂಗಳೂರಿನ ಶ್ರೀದೇವಿ ಗ್ರೂಪ್ ಆಫ್ ಎಜುಕೇಶನಲ್ ಇನ್ಸ್‍ಸ್ಟಿಟ್ಯೂಶನ್‍ನ ಚೇರಮನ್ ಎ.ಸದಾನಂದ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್‍ನ ವತಿಯಿಂದ ನಡೆದ ಮಂಗಳಾ ಕಪ್-2022 ಆಲ್ ಇಂಡಿಯಾ ಓಪನ್ ಬಾಡ್ಮಿಂಟನ್ ಟೂರ್ನ್‍ಮೆಂಟ್ ಉದ್ಘಾಟಿಸಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್‍ನ ಸಮಾಜಮುಖಿ ಕೆಲಸಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಂಗಳಾದ ಕೆಲಸಗಳು ನಿರಂತರವಾಗಿ ಮುಂದೆ ಸಾಗಬೇಕು ಎಂದರು.

ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್ ಇಂತಹ ರಾಷ್ಟ್ರಮಟ್ಟದ ಪಂದ್ಯಾಟವನ್ನು ಆಯೋಜಿಸುವ ಮೂಲಕ ಬರೀ ಜಿಲ್ಲೆಗೆ ಮಾತ್ರವಲ್ಲ ರಾಜ್ಯದಲ್ಲಿಯೇ ಗುರುತಿಸುವ ಕಾರ್ಯ ಮಾಡಿದೆ. ಜಿಲ್ಲೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಉರ್ವದಲ್ಲಿ ಬಾಡ್ಮಿಂಟನ್ ಸ್ಟೇಡಿಯಂ ಕಾಮಗಾರಿ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಅದಷ್ಟೂ ಬೇಗ ಇದರ ಉಪಯೋಗ ಕ್ರೀಡಾಪಟುಗಳಿಗೆ ಸಿಗಲಿದೆ ಎಂದರು.

ಯುವಜನಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ ಮಾತನಾಡಿ, ಕೋವಿಡ್ ಕಾರಣದಿಂದ ಎರಡು ವರ್ಷ ಮಂಕಾಗಿದ್ದ ಕ್ರೀಡಾಕೂಟಗಳಿಗೆ ಮಂಗಳಾ ಕಪ್ ಹೊಸ ಹುರುಪು ತಂದುಕೊಡುವ ಕೆಲಸ ಮಾಡಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಬಾಡ್ಮಿಂಟನ್ ಅಸೋಸಿಯೇಶನ್ ಉಪಾಧ್ಯಕ್ಷ ಹಾಗೂ ರಾಜ್ಯ ಬಾಡ್ಮಿಂಟನ್ ಚಾಂಪಿಯನ್ ಅಶೋಕ್ ಪೂವಯ್ಯ ಮಾತನಾಡಿ, ಮಂಗಳಾ ಕಪ್ ಮೂಲಕ ಬಾಡ್ಮಿಂಟನ್ ಕ್ರೀಡಾಪಟುಗಳಿಗೆ ಹೊಸ ಚೈತನ್ಯ ಶಕ್ತಿಯನ್ನು ನೀಡುವ ಕೆಲಸವಾಗಿದೆ. ಮತ್ತಷ್ಟೂ ಪಂದ್ಯಾಟಗಳನ್ನು ಆಯೋಜಿಸುವ ಕೆಲಸ ಮಂಗಳಾದಿಂದ ನಡೆಯಲಿ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್‍ನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಅವರು ಮಾತನಾಡಿ, ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್ ಈ ಹಿಂದೆ ಸಣ್ಣ ಸಣ್ಣ ಕ್ಲಬ್‍ಗಳ ಪಂದ್ಯಾಟವನ್ನು ಆಯೋಜಿಸುವ ಮೂಲಕ ಈಗ ರಾಷ್ಟ್ರಮಟ್ಟದ ಪಂದ್ಯಾಟಗಳನ್ನು ಆಯೋಜಿಸುವ ಮಟ್ಟಿಗೆ ಬೆಳೆದಿದೆ. ಇಲ್ಲಿ ತರಬೇತಿ ಪಡೆದವರು ಒಲಿಂಪಿಕ್ಸ್‍ನಲ್ಲಿ ಭಾಗವಹಿಸುವ ಮಟ್ಟಿಗೆ ಬೆಳೆಯಬೇಕು ಎಂದರು. 

ಈ ಸಂದರ್ಭ ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್‍ನ ಕಾರ್ಯದರ್ಶಿ ಶಿವಪ್ರಸಾದ್ ಪ್ರಭು ಇದ್ದರು. ಮಂಗಳಾ ಬಾಡ್ಮಿಂಟನ್ ಅಸೋಸಿಯೇಶನ್‍ನ ಅಧ್ಯಕ್ಷ ಅಶೋಕ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ಸುಮಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಬಾಡ್ಮಿಂಟನ್ ಪಟುಗಳ ಆಕರ್ಷಕ ಪಥ ಸಂಚಲನ ನಡೆಯಿತು.

ಮೂರು ದಿನಗಳ ಕ್ರೀಡಾಹಬ್ಬ: ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಮಂಗಳಾ ಕಪ್ ಕ್ರೀಡಾ ಕೂಟಕ್ಕೆ ಕರ್ನಾಟಕ, ಗೋವಾ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ 825 ಕ್ರೀಡಾಪಟುಗಳು 20ಕ್ಕೂ ಅಧಿಕ ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ.

ನಗರದ ಯು.ಎಸ್.ಮಲ್ಯ, ಗೋಲ್ಡನ್ ಶಟ್ಲ್ ಅಕಾಡೆಮಿ ಹಾಗೂ ಕೆ.ಎಂ.ಸಿ. ಯ ಮರೀನಾ ಕ್ರೀಡಾಂಗಣ ಗಳಲ್ಲಿ ಏಕ ಕಾಲದಲ್ಲಿ ಕ್ರೀಡಾ ಸ್ಪರ್ಧೆ ಗಳು ನಡೆಯುತ್ತಿದೆ. ಮಾ.6ರಂದು ಮಂಗಳಾ ಕಪ್‍ನ ಸಮಾರೋಪ ಸಂಜೆ 6ಕ್ಕೆ ನಡೆಯಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

Pages