ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ : ಬಂಟರಿಗೆ ಐಕಳ ಹರೀಶ್ ಶೆಟ್ಟಿ ಕರೆ
ಮಂಗಳೂರು : ಬಂಟರ ತಮ್ಮ ಸ್ವಾಭಿಮಾನವನ್ನು ಬಿಡದೆ ಇತರ ಸಮುದಾಯವನ್ನೂ ಸಮಾನವಾಗಿ ಗೌರವಿಸುವಂಥ ಹೃದಯ ಶ್ರೀಮಂತರು. ಬಂಟ ಸಮುದಾಯದಲ್ಲಿ ಹುಟ್ಟಿರುವುದೇ ಒಂದು ಹೆಮ್ಮೆ. ಬಂಟರು ಯಾವುದೇ ಕ್ಷೇತ್ರದಲ್ಲೂ ಹಿಂದುಳಿದಿಲ್ಲ. ಅವರು ಮನಸ್ಸು ಮಾಡಿದರೆ ಸಮುದಾಯದಿಂದ ಬಡತನವನ್ನು ದೂರ ಮಾಡಲು ಸಾಧ್ಯ. ಆದ್ದರಿಂದ ಬಂಟ ನಾಯಕರೆಲ್ಲರೂ ತಮ್ಮ ಸಮುದಾಯದ ಹಿತರಕ್ಷಣೆಗಾಗಿ ಎಲ್ಲಾ ಭಿನ್ನಾಭಿಪ್ರಾಯವನ್ನು ಮರೆತು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಹೇಳಿದ್ದಾರೆ.
ಅವರು ಮಂಗಳೂರಿನ ಮೋತಿ ಮಹಲ್ ನಲ್ಲಿ ನಡೆದ ಜಾಗತಿಕ ಬಂಟ ಪ್ರತಿಷ್ಠಾನ (ರಿ) ಮಂಗಳೂರು ಇದರ 25 ನೇ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ನಾನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷನಾದ ಬಳಿಕ ಶಿವಮೊಗ್ಗದಿಂದ ಕಾಸರಗೋಡಿನವರೆಗೆ ಯಾವುದೇ ಬಂಟನೂ ಮುಳಿ ಮನೆಯಲ್ಲಿರಬಾರದು, ಆರ್ಥಿಕ ಸಮಸ್ಯೆಯಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು ಎಂಬ ಗುರಿ ಇರಿಸಿ ಕೆಲಸ ಮಾಡುತ್ತಿದ್ದೇವೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಯಾವುದೇ ಆದಾಯ ಮೂಲಗಳಿಲ್ಲದಿದ್ದರೂ ದಾನಿಗಳ ಸಹಾಯ ಪಡೆದು ಪ್ರತಿ ತಿಂಗಳೂ ಲಕ್ಷಾಂತರ ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ಸಮಾಜದ ಆಶಕ್ತರಿಗೆ ನೀಡಲಾಗುತ್ತಿದೆ. ಈವರೆಗೆ ಸುಮಾರು 9.5 ಕೋಟಿ ರೂಪಾಯಿಯನ್ನು ಬಹುತೇಕ ಮುಂಬಯಿಯ ಉದ್ಯಮಿಗಳಿಂದ ಸಂಗ್ರಹಿಸಿ ಬಡ ಬಂಟರಿಗೆ ನೀಡಲಾಗಿದೆ. ಪ್ರತಿಯೊಂದು ತಾಲೂಕಿನಲ್ಲೂ ಅರ್ಹ ಕುಟುಂಬಕ್ಕೇ ಈ ಸಹಾಯ ತಲುಪಬೇಕು ಎಂಬ ಉದ್ದೇಶದೊಂದಿಗೆ ಫಲಾನುಭವಿಗಳ ಮನೆಗೆ ತೆರಳಿ ಪರಿಶೀಲಿಸಿ ಅವರು ಅರ್ಹರಾಗಿದ್ದರೆ ಮಾತ್ರ ಸಹಾಯ ನೀಡಲಾಗುತ್ತಿದೆ. ಮುಂದೆಯೂ ಈ ಕೆಲಸವನ್ನು ನಿರಂತರವಾಗಿ ಮಾಡಲಾಗುವುದು ಎಂದು ಅವರು ಹೇಳಿದರು.
ನಾವು ಬೇರೆ ಬೇರೆ ಸಂಘಟನೆ ಹೆಸರಲ್ಲಿ ಕೆಲಸ ಮಾಡುತ್ತಿರಬಹುದು. ಆದರೆ ಬಡ ಬಂಟರ ಪ್ರಗತಿಯೇ ಪ್ರಮುಖ ಉದ್ದೇಶವಾಗಿರಬೇಕು. ಇದಕ್ಕಾಗಿ ಎಲ್ಲ ಬಂಟರೂ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕು ಎಂದು ಅವರು ಕರೆ ನೀಡಿದರು.
ಸಮಾರಂಭದಲ್ಲಿ ಯಕ್ಷಗಾನ ಕಲಾವಿದ ಬೋಳಾರ ಸುಬ್ಬಯ್ಯ ಶೆಟ್ಟಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜ್ ಕಿರಣ್ ರೈ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಮಾಲತಿ ಶೆಟ್ಟಿ ಮಾಣೂರು ಅವರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟ ಪ್ರತಿಷ್ಠಾನದ ಅಧ್ಯಕ್ಷ ಎ.ಜೆ. ಶೆಟ್ಟಿ ವಹಿಸಿದ್ದರು. ಸಮಾಜದ ಏಳಿಗೆಗಾಗಿ ಮತ್ತು ಬಡವರ ಶ್ರೇಯೋಭಿವೃದ್ದಿಗಾಗಿ ಪ್ರತಿಷ್ಠಾನ ಕೆಲಸ ಮಾಡಲಿದೆ ಎಂದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸಿಎ ಸುಧೀರ್ ಕುಮಾರ್ ಶೆಟ್ಟಿ ಸಭೆಯಲ್ಲಿ ವರದಿ ಮಂಡಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಕುಶಾಲ್ ಎಸ್ ಹೆಗ್ಡೆ ಪುಣೆ, ಕೋಶಾಧಿಕಾರಿ ಸಿಎ ರಘುಚಂದ್ರ ಶೆಟ್ಟಿ, ಸಂಜೀವ ರೈ ಮೊದಲಾದವರು ಉಪಸ್ಥಿತರಿದ್ದರು. ಎ.ಜೆ ಶೆಟ್ಟಿ ಸ್ವಾಗತಿಸಿದರು. ಪ್ರೊ ಭಾಸ್ಕರ ರೈ ಕುಕ್ಕುವಳ್ಳಿ ಸನ್ಮಾನಿತರ ಪರಿಚಯ ನೀಡಿದರು. ಸಿಎ ಸುಧೀರ್ ಕುಮಾರ್ ಶೆಟ್ಟಿ ವಂದಿಸಿದರು. ನ್ಯಾಯವಾದಿ ಕಳ್ಳಿಗೆ ತಾರಾನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.