ಹಳೆಯಂಗಡಿ: ಮಹಿಳೆಗೆ ಅವಕಾಶ ನೀಡಿದಲ್ಲಿ ಸಾಧನೆಯ ಶಿಖರ ಏರಬಲ್ಲಳು. ಇತ್ತೀಚಿಗಿನ ವರುಷಗಳಲ್ಲಿ ಮಹಿಳೆಯರು ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರೂ ಅವರ ಸಾಧನೆ ಮೆಚ್ಚುವಂತಹದ್ದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನಿನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
ಶ್ರೀ ಕ್ಷೇತ್ರ ಪಾವಂಜೆಯಲ್ಲಿ ನಡೆದ ಯಕ್ಷಧ್ರುವ ಪಟ್ಲ ಪೌಂಢಷನ್ನ ಕೇಂದ್ರ ಮಹಿಳಾ ಘಟಕದ ಪಂಚಮ ವರ್ಷಾಚರಣೆಯ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಘಟಕದ ಸದಸ್ಯೆಯರಾದ ಅನೇಕ ಮಹಿಳಾ ಸಾಧಕಿಯರು ಕಳೆದ ಐದು ವರುಷಗಳಲ್ಲಿ ಫೌಂಡೇಶನ್ನ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಸ್ಥೆಗೆ ಬಲವಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ವಯಸ್ಸಿನ ಮಹಿಳಾ ಯಕ್ಷಗಾನ ಕಲಾವಿದೆ ಶ್ರೀಮತಿ ಸಾವಿತ್ರಿ ಎಸ್ ರಾವ್, ಪಾವಂಜೆ ಮೇಳದ ಹಿರಿಯ ಕಲಾವಿದರಾದ ಶ್ರೀ ದಿವಾಣ ಶಿವಶಂಕರ ಭಟ್ ಮತ್ತು ಬಾಲ ಯಕ್ಷಪ್ರತಿಭೆ ಆದಿ ಸ್ವರೂಪಳನ್ನು ಸಮ್ಮಾನಿಸಲಾಯಿತು. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಗೌರವ ಪ್ರಶಸ್ತಿಯನ್ನು ಪಡೆದಿದ್ದ ಯಕ್ಷಗಾನ ಮಹಿಳಾ ಪ್ರತಿಭೆಗಳಾದ ಬಿಂದಿಯಾ ಎಲ್ ಶೆಟ್ಟಿ, ದೀಕ್ಷಾ ಎಂ.ಶೆಟ್ಟಿ ಹಾಗೂ ಕೃತಿ ವಿ ರಾವ್ ಅವರನ್ನು ಗೌರವಿಸಿದರು.
ಮುಖ್ಯ ಅಭ್ಯಾಗತರಾಗಿ ಶ್ರೀಮತಿಯರಾದ ಪವಿತ್ರ ಯು ಅಮೀನ್ ಕೂಳೂರು, ಕಾತ್ಯಾಯಿನೀ ಸೀತಾರಾಂ ರಾವ್, ಚಿತ್ರಾ ಜೆ ಶೆಟ್ಟಿ, ಲೀಲಾವತಿ ರೈ ಅಡ್ಯಾರು ಗುತ್ತು, ದೀಪಾ ಅಶೋಕ್ ಶೆಟ್ಟಿ, ಮೀರಾವಾಣಿ ಎಂ ಶೆಟ್ಟಿ, ಭಾರತಿ ಎಸ್ ರಾವ್ ಆಗಮಿಸಿ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಸ್ವಾಗತಿಸಿದರು. ಕಾರ್ಯದರ್ಶಿ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು ಮತ್ತು ವಂದಿಸಿದರು. ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ, ಯಕ್ಷಧ್ರುವ ಪಟ್ಲ ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ರೈ, ಉಪಾಧ್ಯಕ್ಷ ಮನುರಾವ್, ಸಂತೋಷ್ ಶೆಟ್ಟಿ, ಪ್ರಭಾಕರ್ ಡಿ. ಸುವರ್ಣ ದುಬೈ ಮುಂತಾದವರು ಉಪಸ್ಥಿತರಿದ್ದರು.
ಬಳಿಕ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾ ಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ ಕವಿ ಮುದ್ದಣ ವಿರಚಿತ "ಕುಮಾರ ವಿಜಯ" ಯಕ್ಷಗಾನ ಬಯಲಾಟ ಜರುಗಿತು.