ಕಟೀಲು ಮೇಳದ 10 ಕಲಾವಿದರಿಗೆ 'ಪೂಲ ವಿಠಲ ಶೆಟ್ಟಿ ಪ್ರಶಸ್ತಿ' - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕಟೀಲು ಮೇಳದ 10 ಕಲಾವಿದರಿಗೆ 'ಪೂಲ ವಿಠಲ ಶೆಟ್ಟಿ ಪ್ರಶಸ್ತಿ'

Share This
ಬಂಟ್ಸ್ ನ್ಯೂಸ್, ಮಂಗಳೂರು : ಕಂಬಳ ಕ್ಷೇತ್ರದಲ್ಲಿ ಓಟದ ಕೋಣಗಳ ಯಜಮಾನನಾಗಿ ಎಂಭತ್ತರ ದಶಕದಲ್ಲಿ ಖ್ಯಾತಿ ಪಡೆದಿದ್ದ ಮುಂಬೈಯ ಉದ್ಯಮಿ ಕೀರ್ತಿಶೇಷ ಪೂಲ ವಿಠಲ ಶೆಟ್ಟಿ ಸ್ಮರಣಾರ್ಥ ಕಟೀಲು ಮೇಳದ ಹತ್ತು ಕಲಾಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜನವರಿ 15 ಶನಿವಾರ ಪಡುಬಿದ್ರೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜರಗಲಿದೆ.
ಘಾಟ್ ಕೋಪರ್ ನ ಭಾರತ್ ಕೆಫೆಯ ಸಂಸ್ಥಾಪಕ ಪೂಲ ವಿಠಲ ಶೆಟ್ಟಿ ಯವರು ಕಟೀಲು ದೇವಿಯ ಭಕ್ತರಾಗಿದ್ದು ಮುಂಬೈ, ಎರ್ಮಾಳು,ಪಡುಬಿದ್ರೆ ಪರಿಸರದಲ್ಲಿ ಹಲವಾರು ಧಾರ್ಮಿಕ, ಸಾಂಸ್ಕೃತಿಕ, ಸೇವಾ ಕಾರ್ಯಕ್ರಮಗಳನ್ನು ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಮಾರ್ಗದರ್ಶನದಲ್ಲಿ ನಡೆಸಿದ್ದರು. ಅವರ ಪತ್ನಿ ರಾಧಾ ವಿಠಲ ಶೆಟ್ಟಿ ಹಾಗೂ ಮಕ್ಕಳು ಕಳೆದ 24 ವರ್ಷಗಳಿಂದ ಕಟೀಲು ಮೇಳದ ಯಕ್ಷಗಾನ ಸೇವೆಯನ್ನು ಪಡುಬಿದ್ರೆಯಲ್ಲಿ ನಡೆಸಿಕೊಂಡು ಬಂದಿದ್ದು ಹಲವು ವರುಷಗಳಿಂದ ಪೂಲ ವಿಠಲ ಶೆಟ್ಟಿ ಪ್ರಶಸ್ತಿ ನೀಡುತ್ತಿದ್ದಾರೆ.

ಯಕ್ಷಗಾನ ಸೇವೆಯ ರಜತ ವರ್ಷ ಸಂಭ್ರಮಾಚರಣೆ 'ಬೊಳ್ಳಿ ಪರ್ಬ'ದ ಸಂದರ್ಭದಲ್ಲಿ ಕಟೀಲು ಆರು ಮೇಳಗಳ ಸಂಚಾಲಕ ಶ್ರೀ ದೇವಿಪ್ರಸಾದ ವಿಠಲ ಶೆಟ್ಟಿ ಅವರಿಗೆ ರಜತ ಸಂಭ್ರಮ ಗೌರವ ಪ್ರಶಸ್ತಿ ನೀಡಲಾಗುವುದು.

ಪೂಲ ವಿಠಲ ಶೆಟ್ಟಿ ಸ್ಮೃತಿ ಪ್ರಶಸ್ತಿಗೆ ಕಟೀಲು ಮೇಳದಲ್ಲಿ ಸೇವೆಸಲ್ಲಿಸಿದ್ದ ಐವರು ನಿವೃತ್ತ ಹಿರಿಯ ಕಲಾವಿದರು ಹಾಗೂ ಈಗ ತಿರುಗಾಟ ನಡೆಸುತ್ತಿರುವ ಐವರು ಹಿರಿಯ ಸಾಧಕರ ಆಯ್ಕೆಯನ್ನು ಕದ್ರಿ ನವನೀತ ಶೆಟ್ಟಿ, ಐಕಳ ವಿಶ್ವನಾಥ ಶೆಟ್ಟಿ ಯವರನ್ನೊಳಗೊಂಡ ಸಮಿತಿಯು ಮಾಡಿದ್ದು, ರಜತ ಪದಕದೊಂದಿಗೆ ಗೌರವ ಪತ್ರ ,ಗೌರವಧನ ನೀಡಿ ಸಂಮಾನಿಸಲಾಗುವುದು ಎಂದು ಸೇವಾಕರ್ತ ಎರ್ಮಾಳು ಸತೀಶ ವಿ ಶೆಟ್ಟಿ ತಿಳಿಸಿದ್ದಾರೆ.

ಹಿರಿಯ ಶ್ರೀ ದೇವಿ ಪಾತ್ರಧಾರಿಗಳಿಗೆ ಪ್ರಶಸ್ತಿ : ಕಟೀಲು ಮೇಳದಲ್ಲಿ ದೀರ್ಘಕಾಲ ಕಲಾ ಸೇವೆಗೈದು ನಿವೃತ್ತ ರಾಗಿರುವ, ಶ್ರೀ ದೇವೀ ಮಹಾತ್ಮೆ ಪ್ರಸಂಗದ ಶ್ರೀ ದೇವಿ ಪಾತ್ರ ನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದಿರುವ ಮುಳಿಯಾಲ ಭೀಮ ಭಟ್ಟ, ಕೋಡಿ ಕೃಷ್ಣ ಗಾಣಿಗ (ಕುಂದಾಪುರ ಕುಷ್ಟ), ಪುಂಡರೀಕಾಕ್ಷ ಉಪಾಧ್ಯಾಯ, ತೋಡಿಕ್ಕಾನ ವಿಶ್ವನಾಥ ಗೌಡ, ಉಮೇಶ ಹೆಬ್ಬಾರ್ ಹಾಗೂ ಕಟೀಲು ಮೇಳ(2 ನೇ ಮೇಳ)ದ ಹಿರಿಯ ಕಲಾವಿದರಾದ ಬಲಿಪ ಪ್ರಸಾದ ಭಾಗವತ, ಶ್ರೀಧರ ಪೂಜಾರಿ ಪಂಜಾಜೆ, ರಮೇಶ ಭಟ್ ಬಾಯಾರು, ಗುರುವಪ್ಪ ಬಾಯಾರು, ಶಶಿಧರ ಶೆಟ್ಟಿ ಪಂಜ ,ಅಮ್ಮುಂಜೆ ಮೋಹನ ಅವರನ್ನು ಕಟೀಲು ಮೇಳದ ವೇದಿಕೆಯಲ್ಲಿ ಪೂಲ ವಿಠಲ ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನಂತರ "ಶ್ರೀ ದೇವೀ ಮಹಾತ್ಮೆ" ಯಕ್ಷಗಾನ ಬಯಲಾಟವಿದೆ.

Pages