ಮಂಗಳೂರು: ಸ್ಯಾಂಡಲ್ ವುಡ್ ನಲ್ಲಿ ವಿಶೇಷ ಕಥಾ ಹಂದರ ಹೊಂದಿರುವ,ವಿಭಿನ್ನ ಟೈಟಲ್ ಮೂಲಕವೇ ಜನರ ಗಮನ ಸೆಳೆದಿರುವ “ಹರೀಶ ವಯಸ್ಸು 36” ಇದರ ಫಸ್ಟ್ ಲುಕ್ ಪೋಸ್ಟರ್ ಪದ್ಮವಿಭೂಷಣ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ಅಮೃತ ಹಸ್ತದಿಂದ ಧರ್ಮಸ್ಥಳದಲ್ಲಿ ಬಿಡುಗಡೆಗೊಂಡಿತು.
ಚಿತ್ರದ ನಿರ್ದೇಶಕ ಗುರುರಾಜ್ ಜೇಷ್ಠ, ಚಿತ್ರನಟ ಯೋಗೀಶ್ ಶೆಟ್ಟಿ, ವಿಷ್ಣು, ಜಿ ಹಾಗೂ ಥಾಮಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕರಾವಳಿಯ ಪ್ರತಿಭಾನ್ವಿತರನ್ನು ಸೇರಿಸಿಕೊಂಡು ಅಚ್ಚ ದೇಸಿ ಸೊಗಡಿನ ಚಿತ್ರವೊಂದು ನಿರ್ಮಾಣವಾಗಿ ಕಲಾ ರಂಗಕ್ಕೆ ಕೊಡುಗೆಯಾಗುತ್ತಿರುವುದರ ಬಗ್ಗೆ ಡಾ| ವೀರೇಂದ್ರ ಹೆಗ್ಗಡೆಯವರು ಸಂತೋಷ ವ್ಯಕ್ತಪಡಿಸಿ ಶುಭ ಹಾರೈಸಿದರು.
ಏನೇನಿದೆ ಸಿನಿಮಾದೊಳಗೆ......?!! : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಖ್ಯಾತಿ ಚಿತ್ರದ ಜೋಸೆಫ್ ಪಾತ್ರಧಾರಿ, ಮೂಲತಃ ಮಂಜೇಶ್ವರದ ಯೋಗಿಶ್ ಶೆಟ್ಟಿ ಕಡಂಬಾರ್ ಅವರು ಸಂಪೂರ್ಣವಾಗಿ ನಾಯಕನಟನಾಗಿ ಅಭಿನಯಿಸಿರುವ ಮಂಗಳೂರು ಮೂಲದ ಗುರುರಾಜ್ ಜೇಷ್ಠ ಅವರ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಚಿತ್ರಕ್ಕೆ ಸ್ವತಃ ನಿರ್ದೇಶಕರೇ ಸಂಗೀತ ಸಂಯೋಜಿಸಿ ನಿರ್ದೇಶಿಸಿರುವುದು ಸಿನಿಮಾದ ಇನ್ನೊಂದು ವಿಶೇಷತೆಯಾಗಿದೆ.
ಕನ್ನಡ,ತುಳು, ಮಲೆಯಾಳ ಹೀಗೆ ತ್ರಿಭಾಷಾ ಚಿತ್ರೊದ್ಯಮದಲ್ಲಿ ಪಳಗಿದ ಮೋಹನ್ ಪಡ್ರೆ ಅವರ ಛಾಯಾಗ್ರಹಣದಲ್ಲಿ ಕರಾವಳಿ ಭಾಗಗಳಲ್ಲಿ ಸಂಪೂರ್ಣ ಚಿತ್ರೀಕರಣ ನಡೆದಿರುವುದರಿಂದ ಇಲ್ಲಿನ ಸಂಸ್ಕೃತಿ- ಸಂಸ್ಕಾರದ ದೇಸಿ ಸೊಗಡನ್ನು ಚಿತ್ರ ಬಿಂಬಿಸಲಿದೆ.
ಇನ್ನುಳಿದಂತೆ ಸಿನಿಮಾದಲ್ಲಿ "ಸೈಮಾ ಪ್ರಶಸ್ತಿ" ವಿಜೇತ ಪ್ರಕಾಶ್ ತೂಮಿನಾಡು,ಹಿರಿಯ ಚಿತ್ರನಟ ಉಮೇಶ್ , ಶ್ವೇತಾ ಅರೆಹೊಳೆ , ಉಮೇಶ್ ಮಿಜಾರ್, ಶೋಭಾ ಶೆಟ್ಟಿ , ಮಂಜುಳಾ ಜನಾರ್ಧನ್, ರಮೇಶ್ ರೈ ಕುಕ್ಕುವಳ್ಳಿ, ರಾಜೇಶ್ ಸ್ಕೈಲಾರ್ಕ್, ರಕ್ಷಣ್ ಮಾಡೂರ್ ಸೇರಿದಂತೆ ಅನೇಕರ ತಾರಾಬಳಗವಿದೆ.
ಚಿತ್ರದ ನಿರ್ಮಾಪಕರಾಗಿ ಲಕ್ಷ್ಮೀಕಾಂತ್ ಹೆಚ್.ವಿ.ರಾವ್, ತ್ರಿಲೋಕ್ ಕುಮಾರ್ ಝಾ, ಚಿಂತಕುಂಟ ಶ್ರೀದೇವಿ, ವಿ. ರಜನಿ ಸಹಕರಿಸಿದ್ದಾರೆ. ದಿಪಿನ್ ದಿವಾಕರ್ ಸಂಕಲನ,ರಾಜೇಶ್ ಬಂದ್ಯೋಡ್ - ಕಲೆ, ಸ್ಟಾರ್ ಗಿರಿ - ನೃತ್ಯ, ಮೋಹನ್ ರಂಗ ಕಹಳೆ-ಡಿ .ಐ, ದೇವಿ ರೈ - ಪ್ರಚಾರ ಕಲೆ, ರಾಜೇಶ್ ಕುಡ್ಲ- ಪ್ರೋಡಕ್ಷನ್ ಮೆನೇಜರ್, ಅಕ್ಷತ್ ವಿಟ್ಲ - ಸಹಾಯಕ ನಿರ್ದೇಶನಗೈದಿದ್ದಾರೆ. ಚಿತ್ರದ ಟೈಟಲ್ ಸಾಂಗನ್ನು ಪುನೀತ್ ರಾಜಕುಮಾರ್ ಹಾಡಿದ್ದು ಅತೀ ಶೀಘ್ರ ದಲ್ಲಿ ಹಾಡು ಬಿಡುಗಡೆ ಕಾರ್ಯ ನಡೆಯಲಿದ್ದು, ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. (ವಿಜಯಕುಮಾರ್ ಶೆಟ್ಟಿ ಮಜಿಬೈಲು (ದುಬೈ)