ಬಂಟ್ಸ್ ನ್ಯೂಸ್, ಮುಂಬೈ: ಸಮಾಜ ಸೇವೆಯ ಮೂಲಕ ನೂರಾರು ಜನರ ಕಷ್ಟಕ್ಕೆ ಧ್ವನಿಯಾದ
ಕೊಡುಗೈ ದಾನಿ ಡಾ. ಮೂಡಂಬೈಲು ರವಿ ಶೆಟ್ಟಿ ಅವರು ಪ್ರತಿಷ್ಠಿತ ನೆಲ್ಸನ್
ಮಂಡೇಲ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರೇರಣಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇಂಧೋರಿನಲ್ಲಿ ಡಿ.20ರ
ಭಾನುವಾರ ನಡೆದ ಆತ್ಮ ನಿರ್ಭರ ಭಾರತ ರಾಷ್ಟ್ರೀಯ ಸಮ್ಮೇಳನದಲ್ಲಿ ಅನಿವಾಸಿ ಭಾರತೀಯ ಉದ್ಯಮಿ, ಸಮಾಜ
ಸೇವಕ ಡಾ. ಮೂಡಂಬೈಲು ರವಿ ಶೆಟ್ಟಿ ಅವರ ಸಮಾಜ ಸೇವೆಯನ್ನು ಗುರುತಿಸಿ ಮಾನವೀಯತೆಯ ವಿಭಾಗದಲ್ಲಿ ನೆಲ್ಸನ್
ಮಂಡೇಲ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರೇರಣಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಮಾರಂಭದಲ್ಲಿ ರವಿ
ಶೆಟ್ಟಿ ಅವರ ಪರವಾಗಿ ಅವರ ಬಂಧು ಶಿವಾನಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಕೊಡುಗೈ ದಾನಿ ‘ರವಿ ಅಣ್ಣ’ ಎಂದೇ ಖ್ಯಾತರಾಗಿರುವ ಡಾ. ರವಿ ಶೆಟ್ಟಿ ಮೂಡಂಬೈಲು ಅವರು ಕತಾರ್’ ಎಟಿಎಸ್ ಗ್ರೂಪಿನ ವ್ಯವಸ್ಥಾಪಕ ನಿರ್ದೇಶಕರು. ರವಿ ಶೆಟ್ಟಿ ಅವರ ಉದಾತ್ತ ಸಮಾಜ ಸೇವೆಯನ್ನು ಭಾರತ ಹಾಗೂ ವಿದೇಶಗಳಲ್ಲಿ ಹಲವಾರು ಸಂಘ-ಸಂಸ್ಥೆಗಳು, ಸರ್ಕಾರ ಗುರುತಿಸಿ ಸನ್ಮಾನಿಸಿ ಗೌರವಿಸಿದೆ. ಅವುಗಳಲ್ಲಿ ಮದರ್ ತೇರೆಸಾ ಸಾಮಾಜಿಕ ಸಾಮರಸ್ಯ ಪ್ರಶಸ್ತಿ, ಮುಂಬೈ ಕಲಾಸಂಪದದ ರಾಜರತ್ನ ಪ್ರಶಸ್ತಿ, ಸಮಾಜ ಸೇವೆಗಾಗಿ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ಸೃಷ್ಟಿ ಕಲಾಭೂಮಿಯ ತುಳುನಾಡ ಬೊಳ್ಳಿ ಪ್ರಶಸ್ತಿ, ಕರ್ನಾಟಕ ಸಂಘ ಕತಾರ್’ನಿಂದ ಅಭಯಾಂತರಾಶ್ರಿ ಪ್ರಶಸ್ತಿ, ಸಮಾಜ ಸೇವೆಗಾಗಿ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಉದ್ಯಮಶೀಲತೆ ಹಾಗೂ ಸಮಾಜ ಸೇವೆಗಾಗಿ ಕೈರಾಲಿ ವಾಹಿನಿ ನೀಡುವ ಕತಾರ್ ಎನ್ಆರ್’ಐ ಪ್ರಶಸ್ತಿ ಹಾಗೂ ದೋಹಾ ಫಸ್ಟ್ ಎಡಿಷನ್ 2017ರ ಗೋಲ್ಡನ್ ಆಚಿವ್ಮೆಂಟ್ ಆವಾರ್ಡ್ ಮುಖ್ಯವಾದವುಗಳು.
ಜೊತೆಗೆ ಕನ್ನಡ ತುಳು ಭಾಷಾ ಕಾರ್ಯಕ್ರಮಗಳಿಗೆ ಸಾದಾ ಪ್ರೋತ್ಸಾಹ ನೀಡುವ ಮಹಾನೀಯರಾದ ರವಿ ಶೆಟ್ಟಿ ಅವರು ಮೂರು ವರ್ಷಗಳ ಕಾಲ ತುಳು ಕೂಟ ಕತಾರಿನ ಅಧ್ಯಕ್ಷರಾಗಿ, ಬಂಟ್ಸ್ ಕತಾರ್ ಇದರ ಸ್ಥಾಪಕಾಧ್ಯಕ್ಷರಾಗಿ ಹಾಗೂ ಕರ್ನಾಟಕ ಸಂಘ ಕತಾರಿನ ಉಪಾಧ್ಯಕ್ಷರಾಗಿ, ಪುತ್ತೂರು ತಾಲೂಕು ಮೂಂಡೂರು ಸುಬ್ರಾಯ ದೇವಸ್ಥಾನದ ಆಡಳಿತ ಮೋಕ್ತೆಸರರಾಗಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.