BUNTS NEWS, ಮಂಗಳೂರು: ಲೈಟ್’ಹೌಸ್ ಹಿಲ್ ರಸ್ತೆಗೆ ಮೇ.24, 2017ರಂದು ಸರ್ಕಾರ ಆದೇಶಿಸಿದ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ನಾಮಕರಣದ ಆದೇಶವನ್ನು ಯಥಾಸ್ಥಿತಿ ಪಾಲಿಸುವಂತೆ ಫೆ.9ರಂದು ಹೈಕೋರ್ಟ್ ಆದೇಶಿಸಿದ್ದು ರಸ್ತೆ ನಾಮಕರಣ ಮಾಡುವಂತೆ ವಿಜಯಬ್ಯಾಂಕ್ ನೌಕರರ ಸಂಘ, ಮುಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿ ಬಳಗ ಒತ್ತಾಯ ಮಾಡಿದೆ.
ವಿಜಯಬ್ಯಾಂಕ್ ನೌಕರರ ಸಂಘದ ಸುದ್ದಿಗೋಷ್ಠಿಯಲ್ಲಿ ಮುಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿ ಹನುಮಂತ್ ಕಾಮತ್ ಮಾತನಾಡಿ, ಲೈಟ್’ಹಾಸ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರಿಡುವಂತೆ ಸರ್ಕಾರದ ಆದೇಶವಿದ್ದರೂ ನಂತರ ಬಂದ ತಡೆಯಾಜ್ಞೆ ಪ್ರಶ್ನಿಸಿ ಹೈಕೋರ್ಟ್’ಗೆ ಮನವಿ ಸಲ್ಲಿಸಿದಾಗ ಹೈಕೋರ್ಟ್ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರಿಡುವಂತೆ ಆದೇಶ ನೀಡಿದೆ. ರಸ್ತೆ ನಾಮಕರಕ್ಕೆ ಈ ಹಿಂದೆ 5 ಗಂಟೆಯೊಳಗೆ ತಡೆಯಾಜ್ಞೆ ತಂದಿದ್ದ ಶಾಸಕ ಲೋಬೊರವರಿಗೆ ಹೈಕೋರ್ಟ್ ಆದೇಶವಿದ್ದರೂ 1 ಗಂಟೆಯೊಳಗೆ ನಾಮಕರಣ ಮಾಡಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ಇದೀಗ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ ತನ್ನ ಫಲಕಗಳಲ್ಲಿ ಸಂತ ಅಲೋಶಿಯಸ್ ರಸ್ತೆ ಎಂಬುದಾಗಿ ಹಾಕುತ್ತಿರುವುದು ಸರಿಯಲ್ಲ. ಚಾಲ್ತಿಯಲ್ಲಿ ಅಧಿಕೃತವಲ್ಲದ ಲೈಟ್’ಹೌಸ್ ಹಿಲ್ ರಸ್ತೆ ಹೆಸರು ಬಿಟ್ಟರೆ ಸಂತ ಅಲೋಶಿಯಸ್ ರಸ್ತೆ ಎಂಬುದಾಗಿ ಇರಲಿಲ್ಲ. ಈಗ ಅಧಿಕೃತವಾಗಿರೋದು ಮುಲ್ಕಿ ಸುಂದರರಾಮ ಶೆಟ್ಟಿ ಹೆಸರು ಮಾತ್ರ. ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿರುವುದರಿಂದ ಅಲೋಶಿಯಸ್ ರಸ್ತೆ ಎಂಬುದಾಗಿ ಹಾಕುತ್ತಿರುವುದು ತಪ್ಪಾಗಿದ್ದು ಶಿಕ್ಷಣ ನೀಡುವ ಸಂಸ್ಥೆ ಈ ತರ ಮಾಡೋದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಜಯಬ್ಯಾಂಕ್ ನೌಕರರ ಸಂಘದ ಮಾಜಿ ಅಧ್ಯಕ್ಷ ಮುಲ್ಕಿ ಕರುಣಾಕರ ಶೆಟ್ಟಿ, ಇಂಟರ್’ನ್ಯಾಶನಲ್ ಬಂಟ್ಸ್ ವೆಲ್ಫೆರ್ ಟ್ರಸಿನ ರಾಜ್ ಗೋಪಾಲ್ ರೈ, ದೇವಿಚರಣ್ ಶೆಟ್ಟಿ, ವಿಜಯಬ್ಯಾಂಕ್ ನೌಕರರ ಸಂಘದ ವಲಯ ಕಾರ್ಯದರ್ಶಿ ರಘುರಾಮ ಸುವರ್ಣ ಹಾಗೂ ಮುಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿಗಳು ಉಪಸ್ಥಿತರಿದ್ದರು.