ಮುಂಬೈ : ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರಿಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ನೀಡುವ 'ಸಾಧಕ ಪ್ರಶಸ್ತಿ'ಯನ್ನು ಏ.16ರಂದು ಮುಂಬೈಯ ಕಲಿನದಲ್ಲಿರುವ ವಿಶ್ವ ವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡದ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯಾಯರು ಪ್ರದಾನಿಸಿದರು.
ಪ್ರಶಸ್ತಿಯನ್ನು ಸ್ವೀಕರಿಸಿದ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಮಾತನಾಡಿ, ನನ್ನ ಸೇವಾಕಾರ್ಯಗಳನ್ನು ಗುರುತಿಸಿ ದೇಶದ ನಾನಾ ಭಾಗಗಳಿಂದ ನನಗೆ ಸನ್ಮಾನಗಳು ಲಭಿಸಿದೆ .ಆದರೆ ಮುಂಬಯಿ ವಿಶ್ವವಿದ್ಯಾಲಯದ ಪ್ರಶಸ್ತಿಯ ಗೌರವ ನನ್ನ ಬದುಕಿನಲ್ಲಿ ಅವಿಸ್ಮರಣೀಯವಾಗಿ ಉಳಿಯಲಿದೆ . ನಾನೇನು ಸಾಹಿತಿಯಲ್ಲ ಆದರೂ ನನ್ನ ಸಾಮಾಜಿಕ ಸೇವಾ ಕಾರ್ಯಗಳನ್ನು ಗುರುತಿಸಿ ನೀಡಿದ ಪ್ರಶಸ್ತಿ ನನ್ನ ಸಾಮಾಜಿಕ ಚಟುವಟಿಕೆಗೆ ಹೊಸ ಚೈತನ್ಯದ ಶಕ್ತಿ ತಂದಿದೆ ಎಂದರು.
ಬಾಲ್ಯದಲ್ಲಿ ಓದುವ ಹವ್ಯಾಸವನ್ನು ಬೆಳೆಸಿಕೊಂಡವು. ಲಾಕ್ಡೌನ್ ಸಂದರ್ಭದಲ್ಲಿ ಬಹಳಷ್ಟು ಪುಸ್ತಕಗಳನ್ನು ಓದಿದ್ದೇನೆ. ಓದಿದ ಪುಸ್ತಕಗಳನ್ನು ನನ್ನೂರಿನ ಲೈಬ್ರೆರಿಗೆ ನೀಡಿದ್ದೇನೆ. ಓದುವ ಅಭ್ಯಾಸವನ್ನು ನಾವು ಬದುಕಿನಲ್ಲಿ ರೂಢಿಸಿಕೊಳ್ಳಬೇಕು ಎಂದು ನುಡಿದರು.
ವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ ಎನ್ ಉಪಾಧ್ಯಾಯ ಅವರು ಸ್ವಾಗತಿಸಿದರು. ಡಾ. ಪೂರ್ಣಿಮಾ ಶೆಟ್ಟಿ ಪರಿಚಯಿಸಿದರು. ವೇದಿಕೆಯಲ್ಲಿ ಎಸ್ ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಡಾ. ಶ್ರೀಧರ್ ಶೆಟ್ಟಿ, ಹಿರಿಯ ಸಾಹಿತಿ ಡಾ| ಜಿ ವಿ ಕುಲಕರ್ಣಿ, ಉದ್ಯಮಿ ಸುರೇಶ್ ಭಂಡಾರಿ ಕಡಂದಲೆ, ಮತ್ತಿತರರು ಉಪಸ್ಥಿತರಿದ್ದರು.