ಐಕಳ ಹರೀಶ್ ಶೆಟ್ಟಿ ಅವರಿಗೆ 60ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು - ಬಂಟ್ಸ್ ನ್ಯೂಸ್. ಕಾಂ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಐಕಳ ಹರೀಶ್ ಶೆಟ್ಟಿ ಅವರಿಗೆ 60ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು - ಬಂಟ್ಸ್ ನ್ಯೂಸ್. ಕಾಂ

Share This
ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ 'ಸಮಾಜ ಕಲ್ಯಾಣ ಯೋಜನೆ' ಮೂಲಕ ಸಮಾಜದ ಸ್ವಂತ ಮನೆಯಿಲ್ಲದವರಿಗೆ ಮನೆ ನಿರ್ಮಾಣ, ವೈದ್ಯಕೀಯ ಸಹಾಯಹಸ್ತ, ವಿದ್ಯಾ ಸಹಾಯ ಹಸ್ತ, ಬಡ ಕುಟುಂಬದ ಹೆಣ್ಮಕ್ಕಳ ಮದುವೆಗೆ ಸಹಾಯ ಹಸ್ತ, ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ಹೀಗೆ ಹಲವು ರೀತಿಯಲ್ಲಿ ನಿರಂತರ ಸಹಾಯ ಮಾಡುವ ಮೂಲಕ ಬೆಳಕಾಗಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರಿಗೆ 60ನೇ ಜನ್ಮ ದಿನದ ಹಾರ್ದಿಕ ಶುಭಾಶಯಗಳು.
ಐಕಳ ಹರೀಶ್ ಶೆಟ್ಟಿ ಅವರು, ಸಮಾಜದ ನಮ್ಮ ನಿಮ್ಮೊಳಗಿನ ಅಪರೂಪದ ಹಾಗೂ ಅಸಾಮಾನ್ಯ ಸಾಧಕ, ಪಕ್ಕಾ ಕನಸುಗಾರ, ಸುಭದ್ರ ಸಾಮಾಜಿಕ ಚಟುವಟಿಕೆಗಳ ಹರಿಕಾರ, ಅನೇಕ ಸಂಘ ಸಂಸ್ಥೆಗಳ ಗುರಿಕಾರ, ಸಾಧನ ಶ್ರೇಷ್ಠ ಸನ್ಮಾನಗಳ ಸರದಾರ... 

ಜನನಾಯಕ, ಸಂಘಟಕ, ಕ್ರಿಯಾಶೀಲ ವ್ಯಕ್ತಿತ್ವದ ಸಮಾಜ ಸೇವಕ, ಜಾಗತಿಕ ಬಂಟರ ಸಂಘದ ಅಧ್ಯಕ್ಷ, ನಾಡವರ ನಾಡಿಮಿಡಿತ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐಕಳ ಹರೀಶ್ ಶೆಟ್ಟಿಯವರು ಮುಂಬೈ ತುಳು ಕನ್ನಡಿಗರ ಮಟ್ಟಿಗೆ ಆ ಹೆಸರೇ ಚಿರಪರಿಚಿತ. 

ಸಾಧನೆಗಳೇ ಅವರ ವ್ಯಕ್ತಿತ್ವದ ಕಳಶ. ವ್ಯಕ್ತಿಯಾಗಿ ಅಲ್ಲಾ, ಅವರೊಬ್ಬರು ಶಕ್ತಿಯಾಗಿ ಬೆಳೆದು ನಿಂತವರು. ಹರಿದು ಹಂಚಿ ಹೋಗಿದ್ದ ಬಂಟ ಸಮಾಜವನ್ನು ಸಮಾನ ಮನಸ್ಕರ ಜೊತೆಗೂಡಿ ಈ ಮಾಯಾನಗರಿಯಲ್ಲಿ ಕಟ್ಟಿ ಬೆಳೆಸುವುದರ ಜೊತೆಗೆ,"ಬಂಟರ ಸಂಘ ಮುಂಬಯಿ"ಯ ಕೀರ್ತಿಯನ್ನು ವಿಶ್ವದ ಅಗಲಕ್ಕೆ ಪಸರಿಸಿದ ಹೆಮ್ಮೆಯ ಬಂಟ, ಛಲದಂಕ ಮಲ್ಲ ಐಕಳ ಹರೀಶ್ ಶೆಟ್ಟಿ ಯವರು..!

ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪದ ಏಳತ್ತೂರು ಪಡುಮನೆ ರಾಮಣ್ಣ ಶೆಟ್ಟಿ ಹಾಗೂ ಐಕಳ ಕುರ್ಬಿಲ್ ಗುತ್ತು ದೇವಕಿ ಶೆಟ್ಟಿಯವರ ಸುಪುತ್ರರಾಗಿ ಜನಿಸಿದ ಇವರದ್ದು ಕೃಷಿಕ ಕುಟುಂಬ. ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಹಿನ್ನೆಲೆ ಇರುವ ಮನೆತನ ಆದುದರಿಂದ ಅವೆಲ್ಲವೂ ಬಾಲ್ಯದಲ್ಲೇ ಇವರಲ್ಲಿ ರಕ್ತಗತವಾಗಿ ಆವಿರ್ಭವಿಸಿದವು. 'ಬೆಳೆಯುವ ಸಿರಿ ಮೊಳಕೆಯಲ್ಲಿ' ಅನ್ನುವಂತೆ ಚಿಕ್ಕಂದಿನಿಂದಲೇ ನಾಯಕತ್ವದ ಗುಣವನ್ನು ಮೈಗೂಡಿಸಿಕೊಂಡು ಬೆಳೆದರು.

ವಿಜಯ ಕಾಲೇಜ್ ಮೂಲ್ಕಿ ಇಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದರು. ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾರ್ಥಿ ನಾಯಕನಾಗಿ, ಉತ್ತಮ ದೇಹದಾರ್ಢ್ಯ ಪಟುವಾಗಿ, ಅನೇಕ ಕ್ರೀಡಾ ಪ್ರಶಸ್ತಿಗೆ ಬಾಜನರಾಗಿ ಹುಟ್ಟಿದ ಊರಿಗೆ ಹಿರಿಮೆಯ ಗರಿ ಎನಿಸಿಕೊಂಡರು..!

ರಾಜಕೀಯವಾಗಿ ಗುರುತಿಸಿಕೊಳ್ಳುವ ಹಂಬಲ ಇಲ್ಲದಿದ್ದರೂ ಸಹ ಅತಿ ಕಿರಿಯ ಪ್ರಾಯದಲ್ಲೇ ಅಮರನಾಥ್ ಶೆಟ್ಟಿ, ಕೆ ಎಸ್ ಹೆಗ್ಡೆ, ವಿ ಎಸ್ ಆಚಾರ್ಯ ರಂತವರ ಒಡನಾಟ ಒದಗಿ ಬಂತು.

ಜೀವನ ಅಂದರೆ ನಿಮ್ಮನ್ನು ನೀವು ಹುಡುಕಿ ಕೊಳ್ಳುಹುದಲ್ಲ..ನಿಮ್ಮನ್ನು ನೀವು ರೂಪಿಸಿಕೊಳ್ಳುವುದು' ಅನ್ನುವಂತೆ, ಇನ್ನೇನನ್ನೋ ಮತ್ತಿಷ್ಟನ್ನು ಸಾಧಿಸುವ ಹುರುಪು, ಛಲ, ವಿದ್ಯೆ, ಬುದ್ದಿ, ತೋಳ್ಬಲ ಎಲ್ಲವೂ ಅವರಲ್ಲಿ ಇತ್ತು. ಹರಿಯುವ ಹೊಳೆಯನ್ನು ನೋಡುವುದಕ್ಕಿಂತ ಅಲೆಗಳ ಆರ್ಭಟವಿರುವ ಸಮುದ್ರವನ್ನು ನೋಡುವ ಗುಣವಿರುವ ಇವರು ಒಂದು ಶುಭ ದಿನ, ಗುರು ಹಿರಿಯರ ಆಶೀರ್ವಾದ ಪಡೆದು, ತಾಯಿ ಕಟೀಲು ದುರ್ಗಾಪರಮೇಶ್ವರಿಗೆ ನಮಿಸಿ, ಜನ್ಮ ಭೂಮಿಗೆ ನಮಸ್ಕರಿಸಿ ಮುಂಬಾದೇವಿಯ ಮಡಿಲಾದ ಮುಂಬೈಯನ್ನು ಸೇರಿಕೊಂಡರು..!

'ಒಬ್ಬ ಯೋಚಿಸಿದ ಇನ್ನೊಬ್ಬ ಗಮನಿಸಿದ ಅವನೊಬ್ಬನೇ ಛಲ ಬಿಡದೆ ಸಾಧಿಸಿದ ಎಂಬಂತೆ, ಪ್ರಾರಂಭದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಬದುಕಿನ ಪಥದ ಪ್ರಯಾಣಕ್ಕೆ ಅಣಿಯಾದರು. ಅಲ್ಲಿ ಅನೇಕ ತುಳು ಕನ್ನಡಿಗ ಗೆಳೆಯರು ಇವರ ಜೊತೆಯಾದರು. ಸಮಾಜದ ನಡುವೆ ಎಲ್ಲರೊಳಗೊಂದಾಗಿ ಇರುತ್ತಿದ್ದ ಇವರಿಗೆ ನಾಲ್ಕು ಗೋಡೆಗಳ ಮಧ್ಯೆ ಕೆಲಸ ಮಾಡುವುದು ಮನಸ್ಸಿಗೊಪ್ಪದ ಮಾತಾಗಿತ್ತು. ಹಾಗಾಗಿ ಹಿರಿಯರ ಆಶೀರ್ವಾದ ಹಾಗೂ ಸ್ವಂತ ಪರಿಶ್ರಮದಿಂದ ಹೋಟೆಲ್ ಉದ್ಯಮವನ್ನು ಪ್ರಾರಂಭಿಸಿದರು. ವಸಾಯಿ ಪರಿಸರದಿಂದ ಮೊದಲ್ಗೊಂಡು ನಗರದಾದ್ಯಂತ ವ್ಯಾಪಾರ ವಹಿವಾಟನ್ನು ಮುನ್ನಡೆಸಿ ಕೊಂಡು ಬಂದ ಪರಿಣಾಮ ಯಶಸ್ವಿ ಯುವ ಉದ್ಯಮಿ ಅನ್ನಿಸಿ ಕೊಂಡರು. 

ಹೋಟೆಲಿಗರ ಸಮಸ್ಯೆಗಳನ್ನು ಕಣ್ಣಾರೆ ಕಂಡರು. ಕೆಲಸ ಮಾಡುವ ಕಾರ್ಮಿಕರ ಬವಣೆಗಳನ್ನು ಅವರ ಏಕಾಂಗಿತನ ವನ್ನು ನೋಡಿದ ಇವರು 'ಸಾಯಿ ಸಂದ್ಯಾ ಆರ್ಟ್ಸ್' ಎನ್ನುವ ಸಂಸ್ಥೆಯ ಗೌರವಾಧ್ಯಕ್ಷರಾಗಿ ಹೋಟೆಲ್ ನಲ್ಲಿ ಕೆಲಸ ಮಾಡುವ ಹುಡುಗರನ್ನೆಲ್ಲಾ ಒಂದೆಡೆ ಸೇರಿಸುವ ಉದ್ದೇಶದಿಂದ ನಿಮ್ಮೊಂದಿಗೆ ನಾವು ನಮ್ಮೊಂದಿಗೆ ನೀವು ಎನ್ನುವ ಉದಾತ್ತ ವಿಚಾರಗಳೊಂದಿಗೆ "ಕಟಿಲೇಶ್ವರಿ ಟ್ರೋಫಿ" ಎನ್ನುವ ಕ್ರಿಕೆಟ್ ಪಂದ್ಯಕೂಟವನ್ನು ಆಯೋಜನೆ ಮಾಡಿದರು. ಇಡೀ ಮಾಯನಗರಿಯಲ್ಲಿ ಇದು ಪ್ರಸಿದ್ದಿಗೆ ಬಂತು. ಗೊತ್ತು ಗುರಿ ಇಲ್ಲದವರಿಗೆ ಪ್ರೀತಿಯ ಅಣ್ಣಾ ಎನಿಸಿಕೊಂಡರು.ಯುವಕರ ಕಣ್ಮಣಿಯಾಗಿ ಮಿಂಚತೊಡಗಿದರು..!

ಸ್ವತಃ ದೇಹದಾರ್ಢ್ಯವನ್ನು ತನ್ನ ಕ್ರೀಡೆಯ ಮೂಲ ಅಂಗವನ್ನಾಗಿ ಮಾಡಿಕೊಂಡ ಶ್ರೀಯುತರು ರಾಜ್ಯ ಮತ್ತು ಅಂತಾರಾಜ್ಯ ಮಟ್ಟದಲ್ಲಿ ಮಿಚಿದವರು. ತನ್ನಂತೆ ತನ್ನ ಸಮಾಜದ ಯುವ ಪೀಳಿಗೆಯು ಸಹ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಅನ್ನುವುದನ್ನು ಹೇಳುತ್ತಾ ಬಂದವರು. ಅದಕ್ಕನುಗುಣವಾಗಿ ಸಂಘದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡು, ಮುಂಬೈನಲ್ಲಿ 'ಬಂಟ ಕ್ರೀಡೋತ್ಸವ' ವನ್ನು ಹಬ್ಬದ ಸಂಭ್ರಮದಂತೆ ಆಯೋಜಿಸುತ್ತಾ ಬಂದರು.

ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ ಅವಿಸ್ಮರಣೀಯ ಕಾರ್ಯ ಕ್ರಮಗಳನ್ನು ಕೈಗೊಂಡು ದಾನಿಗಳ ನೆರವಿನಿಂದ ಅನೇಕ ವಿದ್ಯಾಲಯಗಳ ಹುಟ್ಟಿಗೆ ಕಾರಣೀಭೂತರದರು. ಡಾ. ಪಿ. ವಿ ಶೆಟ್ಟಿಯವರು ಸಂಘದ ಅಧ್ಯಕ್ಷ ರಾಗಿದ್ದಾಗ ಐಕಳರವರು ಉಪಾಧ್ಯಕ್ಷರಾಗಿದ್ದರು. ನಂತರ ಯೋಗ್ಯವಾಗಿಯೇ ಅವರಿಗೆ ಅಧ್ಯಕ್ಷ ಪಟ್ಟ ಒಲಿದು ಬಂತು."ತಾನು ಸ್ವೀಕರಿಸಿದ ಪದವಿಯಿಂದ ತನ್ನ ವ್ಯಕ್ತಿತ್ವದ ಹಿರಿಮೆ ಹೆಚ್ಚುವುದಿಲ್ಲ. ಬದಲಾಗಿ ತನ್ನ ಸಾಮರ್ಥ್ಯದ ವ್ಯಕ್ತಿತ್ವ ದಿಂದಾಗಿ, ಕಾರ್ಯ ಸಾಧನೆಯಿಂದಾಗಿ ಆ ಪದವಿಯ ಘನತೆ ಹೆಚ್ಚಾದರೆ, ಪದವಿ ಸ್ವೀಕಾರ ಸಾರ್ಥಕವಾದಂತೆ..!" ಮುಂಬೈ ಬಂಟರ ಸಂಘದ ಅಧ್ಯಕ್ಷ ಪದ ಗ್ರಹಣದ ವೇಳೆ ಆಡಿದ ಮಾತಿನಂತೆ ನಡೆದುಕೊಂಡ ಎಂಟೆದೆಯ ಬಂಟ ಐಕಳ ಹರೀಶ್ ಶೆಟ್ಟಿಯವರು...!

ರಾಧಾ ಭಾಯಿ ಸಭಾಗ್ರಹದ ನವೀಕರಣದಿಂದ ಪ್ರಾರಂಬಗೊಂಡು ಉನ್ನತ ಶಿಕ್ಷಣ ಯೋಜನೆಯ ಶಶಿಮನಮೋಹನ ಶೆಟ್ಟಿ ಸಂಕೀರ್ಣದ ಕಾಲೇಜುಗಳ ನವಿಕರಣದವರೆಗೊ ವಿರಮಿಸದೆ ತನಗಾಗಿ ಸ್ವಲ್ಪ ಸಮಯ, ಸಂಘಕ್ಕಾಗಿ ಉಳಿದೆಲ್ಲಾ ಸಮಯ ಅನ್ನುವಂತೆ ಕಡಿಮೆ ಅವಧಿಯಲ್ಲಿ ಛಲ ಬಿಡದ ತ್ರಿವಿಕ್ರಮನಂತೆ ಯೋಜನೆಗಳ ಮೇಲೆ ಯೋಜನೆಗಳನ್ನು ತಂದು ಅದನ್ನು ಕಾರ್ಯರೂಪಕ್ಕೆ ಇಳಿಸಿ ಸಂಘದ ಇತಿಹಾಸದಲ್ಲೇ ಒಂದು ವಿಶಿಷ್ಟ ಅಧ್ಯಾಯವನ್ನು ಬರೆದರು..!

ಐಕಳ ಹರೀಶ್ ಶೆಟ್ಟಿಯವರು ಕೇವಲ ಬಂಟರ ಸಂಘಕ್ಕೆ ಮಾತ್ರ ಸೀಮಿತವಾಗಿ ಕಾರ್ಯ ನಿರ್ವಹಿಸುವ ವ್ಯಕ್ತಿ ಅಲ್ಲಾ. ಆ ರೀತಿ ಹೇಳಿದರೆ ಅವರ ವ್ಯಕ್ತಿತ್ವದ ಇನ್ನೊಂದು ಭಾಗವನ್ನು ಮುಚ್ಚಿ ಇಟ್ಟಂತೆ ಆಗುತ್ತದೆ. ಇನ್ನಿತರ ಹಲವು ಸಮಾಜ ಭಾಂದವ ಸಂಘಟನೆಗಳ ಜೊತೆ ಅವರ ಭಾಂದವ್ಯ ತುಂಬಾನೇ ಮದುರವಾಗಿದೆ. ಜಾತಿ ಮತಗಳನ್ನು ಮೀರಿ ನಿಂತು ವ್ಯವಹರಿಸುವ ಸರಳ ಸಜ್ಜನಿಕೆಯ ವ್ಯಕ್ತಿತ್ವ ಇವರದ್ದು..!

ರಾಜಕೀಯವಾಗಿ ಅವಕಾಶ ಹುಡುಕಿ ಕೊಂಡು ಬಂದಾಗಲೂ ಅದನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ. ಕಾರಣ ಯಾವುದಾದರೂ ಒಂದು ಪಕ್ಷಕ್ಕೆ ಸೀಮಿತವಾದರೆ,ಇನ್ನೊಂದು ಪಂಗಡಕ್ಕೆ ಬೇಜಾರು ಮಾಡಿದಂತಾಗುತ್ತದೆ. ಅದು ಬೇಡ. ಎಲ್ಲರಲ್ಲೂ ಒಂದಾಗಿ ಕೊನೆ ತನಕ ಇರುತ್ತೇನೆ ಎನ್ನುವ ಸ್ನೇಹಜೀವಿ ಇವರು. ಊರಿನ ದೇವಸ್ಥಾನಗಳ ಬ್ರಹ್ಮಕಲಶವಿರಬಹುದು, ವಿಶ್ವ ತುಳು ಸಮ್ಮೇಳನ ಇರಬಹುದು, ಜನ ಜಾಗೃತಿ ಕಮ್ಮಟ ಇರಬಹುದು, ಶೈಕ್ಷಣಿಕ ಕಾರ್ಯಕ್ರಮ ಗಳಿರಬಹುದು ಎಲ್ಲವುದರಲ್ಲೂ ಜಾತಿ ಮತ ಭೇದವಿಲ್ಲದೆ ಬಾಗವಹಿಸುವ ಹಿತ ಚಿಂತಕ ಶ್ರೀಯುತ ಹರೀಶ್ ಶೆಟ್ಟಿಯವರು. ಈ ಎಲ್ಲ ಸಾಮಾಜಿಕ ಚಟುವಟಿಕೆ ಗಳಿಗೆ ಬೆನ್ನೆಲುಬಾಗಿ ನಿಂತವರು ಇವರ ಧರ್ಮ ಪತ್ನಿ ಶ್ರೀಮತಿ ಚಂದ್ರಿಕಾ ಶೆಟ್ಟಿಯವರು. ಈ ಆದರ್ಶ ದಂಪತಿಗಳಿಗೆ ಅರ್ಜುನ್ ಮತ್ತು ಸನ್ನಿಧಿ ಎನ್ನುವ ಇಬ್ಬರು ಮಕ್ಕಳು."ಬೆಚ್ಚನೆಯ ಮನೆ ಇರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಚೆಯನರಿತು ನಡೆಯುವ ಸತಿ ಇರಲು.."ಅಂದಂತೆ ಸಂತೃಪ್ತ ಕುಟುಂಬ ನೆಮ್ಮದಿಯ ಬದುಕು ಇವರದ್ದು. ಎಲ್ಲವೂ ಸಹ ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಕೃಪೆ ಅನ್ನುವ ಐಕಳ ಹರೀಶ್ ಶೆಟ್ಟಿ ಯವರಿಗೆ ಇನ್ನಷ್ಟು ಜನಪರ ಸೇವೆ ಮಾಡುವ ಯೋಗ ಬಾಗ್ಯಗಳು ಸಿಗಲಿ..ಮತ್ತಷ್ಟು ಮಾನ ಸನ್ಮಾನ ಗಳು ಒಲಿದು ಬರಲಿ ಅನ್ನುವುದೇ ನಮ್ಮೆಲ್ಲರ ಹಾರೈಕೆಯಾಗಿದೆ..!

ಲಾಕ್ ಡೌನ್ ಸಂದರ್ಭ ಅಸಹಾಯಕರ ಪಾಲಿಗೆ ಬೆಳಕಾದ ಮಹನಿಯರಿವರು : ಮುಂಬೈ ಸೇರಿ ಬಹುತೇಕ ಎಲ್ಲಾ ಕಡೆ ಕೊರೋನ ಮಹಾಮಾರಿಯಿಂದ ಜನಜೀವನ ಅಸ್ತವ್ಯಸ್ತ ಗೊಂಡು ದಿಕ್ಕುದೆಸೆ ಇಲ್ಲದಂತೆ ಆದಾಗ,ಅಂತಹ ಸಂದರ್ಭದಲ್ಲಿ ಹೆಚ್ಚಿನವರು ಊರು ಸೇರಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದಾಗ ಕರ್ನಾಟಕ ಸರ್ಕಾರ ನಕಾರಾತ್ಮಕ ದೋರಣೆ ತೋರ್ಪಡಿಸಿತು. ಆಗ ಐಕಳ ಹರೀಶ್ ಶೆಟ್ಟಿಯವರು ಹಾಗೂ ಅವರ ಸ್ನೇಹಿತರನೇಕರು ಜಿಲ್ಲಾಡಳಿತ, ಹಾಗೂ ಕರಾವಳಿಯ ಜನಪ್ರತಿನಿಧಿಗಳ ಜೊತೆ ನಿರಂತರ ಮಾತುಕತೆ ನಡೆಸಿ ಉತ್ತಮ ಪಲಿತಾಂಶವನ್ನು ತಂದುಕೊಡುವಲ್ಲಿ ಇವರ ಪರಿಶ್ರಮವನ್ನು ಮರೆಯುವಂತದಲ್ಲ. ಬಂಟರ ಸಂಘದ ವತಿಯಿಂದ ನಿರ್ಗತಿಕರ ಸೇವೆಯನ್ನು ಈ ಸಮಯದಲ್ಲಿ ಪ್ರಚಾರ ಇಲ್ಲದೆ ಮಾಡಿದ ಇವರು,ಕರಾವಳಿ ಭಾಗದಲ್ಲಿ ದೈವ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡವರು ಕಷ್ಟದಲ್ಲಿದ್ದಾಗ ಅವರ ನೋವು ಸರ್ಕಾರಕ್ಕೆ ಕೇಳದೆ ಇದ್ದಾಗ ಸ್ವತಃ ಅಂತವರ ನೆರವಿಗೆ ಧಾವಿಸಿ, ಅವರ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟ ಆಪತ್ಭಾಂದಾವ.!

ಐಕಳರ ಸಾಧನಾ ಶಿಖರಕ್ಕೆ ಸಂದ ಪ್ರಶಸ್ತಿ ಪುರಸ್ಕಾರಗಳು : ಬಂಟರ ಸಂಘದ ಉತ್ತಮ ಸಮಾಜ ಸೇವಕ ಪ್ರಶಸ್ತಿ ಮತ್ತು ಚಿನ್ನದ ಪದಕ. ಪುಣೆ ಬಂಟರ ಸಂಘದ "ದಿ.ಗುಂಡುರಾಜ್ ಶೆಟ್ಟಿ ಸ್ಮರಣಾರ್ಥ"ಪ್ರಶಸ್ತಿ. ಕಾಪು ಧರಣಿ ಸೇವಾ ಸಂಸ್ಥೆಯ"ಸಮಾಜ ಸೇವಾ ರತ್ನಾ"ಪ್ರಶಸ್ತಿ. ಕಿನ್ನಿಗೋಳಿ ಯಕ್ಷಲಹರಿಯ "ಕಲಾ ಪೋಷಕ"ಬಿರುದು. ಉದಯವಾಣಿಯ "ಹೊರನಾಡ ಕನ್ನಡಿಗ"ಪ್ರಶಸ್ತಿ. ಹೃದಯವಾಹಿನಿ ಪತ್ರಿಕೆ ಹಾಗೂ ಮುಂಬೈ ಕರ್ನಾಟಕ ಸಂಘದ ವತಿಯಿಂದ "ಹೃದಯವಂತರು" ಪ್ರಶಸ್ತಿ. ಮೂಲ್ಕಿ ಬಿಲ್ಲವ ಸಮಾಜದ ವತಿಯಿಂದ "ಅಮೃತಾ ಮಹೋತ್ಸವ ಕ್ರೀಡಾ"ಪ್ರಶಸ್ತಿ. ವಿಜಯ ಕಾಲೇಜ್ ಮೂಲ್ಕಿ ಇವರಿಂದ" ಸಾಧನಾ ಪುರಸ್ಕಾರ". ಶ್ರೀಕೃಷ್ಣ ಪ್ರತಿಷ್ಠಾನದ ಪ್ರಶಸ್ತಿ. ಮಿಸ್ಟರ್ ದ.ಕನ್ನಡ,ಕರ್ನಾಟಕ ಕಿಶೋರ,ಭಾರತ ಕಿಶೋರ ಪುರಸ್ಕಾರ. ಕರ್ನಾಟಕ ಸರ್ಕಾರದ ವತಿಯಿಂದ "ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ". ಬೆಂಗಳೂರು ಬಂಟರ ಸಂಘದ 'ಮುಲ್ಕಿ ಸುಂದರರಾಮ ಸ್ಮಾರಕ ಪ್ರಶಸ್ತಿ.

Pages