ಮಂಗಳೂರು : ಬಂಟರು ಧೈರ್ಯಶಾಲಿಗಳು, ಹಿಡಿದ ಕೆಲಸವನ್ನು ಸುಲಭದಲ್ಲಿ ಬಿಡುವವರಲ್ಲ. ಕೆಲಸದಲ್ಲಿ ಶ್ರದ್ಧೆ, ಭಕ್ತಿ ಇದ್ದಾಗ ಮಾತ್ರ ಕೈ ಗೊಳ್ಳುವ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಬಿಡುವಿಲ್ಲದೆ ಕೆಲಸ ಮಾಡಿದ್ದಾರೆ. ಐಕಳ ಹರೀಶ್ ಶೆಟ್ಟಿ ಅವರಲ್ಲಿ ನಾಯಕತ್ವದ ಗುಣ ಇದೆ. ಐಕಳರಲ್ಲಿ ಹೃದಯ ಶ್ರೀಮಂತಿಕೆ ಇದೆ. ಅವರಂತಹ ನಾಯಕರು ಬಂಟ ಸಮಾಜಕ್ಕೆ ಬೇಕು ಎಂದು ಮುಂಬಯಿಯ ಆರ್ಗನಿಕ್ ಕೆಮಿಕಲ್ಸ್ ಸಂಸ್ಥೆಯ ಸಿ.ಎಂ.ಡಿ ಆನಂದ್ ಎಂ. ಶೆಟ್ಟಿ ಹೇಳಿದರು.
ಅವರು ಬಂಟ್ಸ್ ಹಾಸ್ಟೆಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಸಮಾಜ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು. ಸಮಾಜದಲ್ಲಿ ಕಷ್ಟದಲ್ಲಿರುವ ಕುಟುಂಬಗಳ ಕಣ್ಣೀರನ್ನು ಒರೆಸುವ ಕೆಲಸ ಐಕಳ ಮಾಡುತ್ತಿದ್ದಾರೆ. ಅವರು ಬಂಟ ಸಮಾಜಕ್ಕೊಂದು ಶಕ್ತಿ ತುಂಬಿದ್ದಾರೆ. ಅವರಿಂದ ಸಮಾಜಕ್ಕೆ ತುಂಬಾ ಕೆಲಸ ಕಾರ್ಯಗಳು ಆಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಅವರೊಂದಿಗೆ ಕೈ ಜೋಡಿಸೋಣ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಉದ್ಯಮಿ ಮುಂಬಯಿ ಶಶಿಧರ ಶೆಟ್ಟಿ ಇನ್ನಂಜೆ ಮಾತನಾಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಕಳೆದ ನಾಲ್ಕು ವರ್ಷಗಳಲ್ಲಿ 9 ಕೋಟಿಗೂ ಮಿಕ್ಕಿ ಸಹಾಯಧನ ನೀಡಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ, ಪತ್ರಕರ್ತರಾದ ಬಿ. ರವೀಂದ್ರ ಶೆಟ್ಟಿ, ಪ್ರದೀಪ್ ಕುಮಾರ್ ರೈ ಐಕಳ ಬಾವ, ಶಿಕ್ಷಕ ಸಾಯಿನಾಥ ಶೆಟ್ಟಿ ಮುಂಡ್ಕೂರು, ಪಿಎಚ್‌ಡಿ ಪದವಿ ಪಡೆದ ಡಾ. ಸುಧಾರಾಣಿ, ಡಾ. ಅಂಪಾರು ನಿತ್ಯಾನಂದ ಶೆಟ್ಟಿ, ಶಿವಾನಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಿದ್ದರು. ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವಿಕ ಮಾತುಗಳನ್ನಾಡಿದರು, ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್ ಫಲಾನುಭವಿಗಳ ಹೆಸರನ್ನು ವಾಚಿಸಿದರು.
ಕೋಶಾಧಿಕಾರಿ ಉಳ್ತೂರು ಮೋಹನ್‌ದಾಸ ಶೆಟ್ಟಿ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ್, ಕಾರ್ಪೋರೇಟರ್ ಮನೋಹರ ಶೆಟ್ಟಿ ಉಪಸ್ಥಿತರಿದ್ದರು.
ಅದೇ ರೀತಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಬೊಲ್ಯೊಟ್ಟು ಶಶಿಧರ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಬೆಳ್ಳಂಪಳ್ಳಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ, ಗುರುಪುರ ಬಂಟರ ಸಂಘದ ಅಧ್ಯಕ್ಷ ಸಂತೋಷ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಸಮಾಜ ಕಲ್ಯಾಣ ಯೋಜನೆಯಡಿ ಒಟ್ಟು 95 ಮಂದಿಗೆ 30 ಲಕ್ಷ ರೂಪಾಯಿ ಪರಿಹಾರ ಧನದ ಚೆಕ್‌ನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ವಿತರಿಸಿದರು. ಪ್ರತೀ ತಿಂಗಳು ಸಮಾಜ ಕಲ್ಯಾಣ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಾರಿ ವೈದ್ಯಕೀಯ, ಮದುವೆ, ಶಿಕ್ಷಣ, ದತ್ತು ಸ್ವೀಕಾರ, ಮನೆ ರಿಪೇರಿ ಮತ್ತು ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಚೆಕ್‌ನ್ನು ವಿತರಿಸಲಾಯಿತು. ಉದಯಕುಮಾರ್ ರೈ ಪ್ರಾರ್ಥನೆಗೈದರು. ಪುರುಷೋತ್ತಮ ಭಂಡಾರಿ ಅಡ್ಯಾರ್, ಶರತ್ ಶೆಟ್ಟಿ ಕಿನ್ನಿಗೋಳಿ, ಸತೀಶ್ ಅಡಪ ಸಂಕಬೈಲ್ ಸನ್ಮಾನ ಪತ್ರ ವಾಚಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರ್ವಹಿಸಿದರು.