ಅಳಿಕೆ ರಾಮಯ್ಯ ರೈ ತೆಂಕುತಿಟ್ಟಿಗೆ ಗೌರವ ತಂದ ಕಲಾವಿದ : ಡಾ.ಜೋಶಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಅಳಿಕೆ ರಾಮಯ್ಯ ರೈ ತೆಂಕುತಿಟ್ಟಿಗೆ ಗೌರವ ತಂದ ಕಲಾವಿದ : ಡಾ.ಜೋಶಿ

Share This
BUNTS NEWS, ಮಂಗಳೂರು: ತಂತ್ರಜ್ಞಾನಗಳ ಯುಗಾರಂಭವಾಗುವ ಮೊದಲೇ ಯಕ್ಷಾಗಾನದಂತಹ ಸಾಂಪ್ರದಾಯಿಕ ರಂಗ ಕಲೆಯನ್ನು ಎತ್ತರಕ್ಕೆ ಬೆಳೆಸಿದವರು ಅಂದಿನ ಶ್ರೇಷ್ಠ ಕಲಾವಿದರು. ಅಳಿಕೆ ರಾಮಯ್ಯ ರೈ ಅಂತಹ ಓರ್ವ ಪ್ರಾತಿನಿಧಿಕ ಕಲಾವಿದ. ಅವರು ತೆಂಕುತಿಟ್ಟು ಯಕ್ಷಗಾನಕ್ಕೆ ಗೌರವ ತಂದುಕೊಟ್ಟ ಉತ್ಕೃಷ್ಟ ಕಲಾಕಾರ. ಮಾತು,ನೃತ್ಯ ಮತ್ತು ಅಭಿನಯ ಕೌಶಲದಿಂದ ಪಂಡಿತ-ಪಾಮರರಿಬ್ಬರಿಗೂ ಪ್ರಿಯರಾಗಿದ್ದ ಅಳಿಕೆ ಆರು ದಶಕಗಳ ಕಾಲ ರಂಗದಲ್ಲಿ ವಿಜೃಂಭಿಸಿದ್ದರು' ಎಂದು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ವಿದ್ವಾಂಸ, ಹಿರಿಯ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.
ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಬೆಂಗಳೂರು ಹಾಗೂ 'ಯಕ್ಷಾಂಗಣ ಮಂಗಳೂರು' ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಆಶ್ರಯದಲ್ಲಿ ನಗರದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಕಲಾಮಂಟಪದಲ್ಲಿ ಎ.13 ರಂದು ಜರಗಿದ 'ಅಳಿಕೆ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ' ಸಮಾರಂಭದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿ ಮಾತನಾಡಿದರು. 'ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ ದಿ.ಅಳಿಕೆಯವರು ಚಿತ್ರಿಸಿದ ಕೆಲವು  ಪಾತ್ರಗಳು ಯಕ್ಷಗಾನದ ಇತಿಹಾಸದಲ್ಲಿ ದಾಖಲಾಗಿವೆ. ಅವು ನಮ್ಮ ಯುವ ಕಲಾವಿದರಿಗೆ ಮಾದರಿಯಾಗಬೇಕು' ಎಂದವರು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ ಸಂಸ್ಮರಣಾ ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಳಿಕೆ ಸಹಾಯ ನಿಧಿ, ಪ್ರಶಸ್ತಿ ಪ್ರದಾನ: ಟ್ರಸ್ಟ್ ಸಲಹೆಗಾರ ಮತ್ತು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ 'ಪ್ರತಿ ವರ್ಷ ಅರ್ಹ ಕಲಾವಿದರ ಮನೆಗೆ ಹೋಗಿ ಅಳಿಕೆ ಸಹಾಯ ನಿಧಿ ವಿತರಿಸುತ್ತಿದ್ದ ಟ್ರಸ್ಟ್ ಪ್ರಸ್ತುತ ಹತ್ತನೇ ವರ್ಷಾಚರಣೆ ಸಲುವಾಗಿ ಅಳಿಕೆಯವರ ಸಂಸ್ಮರಣಾ ಕಾರ್ಯಕ್ರಮದೊಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿದೆ ಎಂದರು.

ಇದೇ ಸಂದರ್ಭದಲ್ಲಿ ಯಕ್ಷಗಾನದ ಇಬ್ಬರು ಹಿರಿಯ ಪುಂಡುವೇಷಧಾರಿಗಳಾದ ಮಾಡಾವು ಕೊರಗಪ್ಪ ರೈ ಮತ್ತು ಮುಂಡಾಜೆ ಬಾಲಕೃಷ್ಣ ಶೆಟ್ಟಿ ಅವರಿಗೆ 2018-19 ನೇ ಸಾಲಿನ 'ಅಳಿಕೆ ಪ್ರಶಸ್ತಿ' ನೀಡಿ ತಲಾ ರೂ.10,000 ಸಹಾಯ ನಿಧಿಯೊಂದಿಗೆ ಗಣ್ಯರು ಸನ್ಮಾನಿಸಿದರು. ಹಿರಿಯ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಅಭಿನಂದಿಸಿದರು. ಯಕ್ಷಾಂಗಣದ ಸದಸ್ಯರಾದ ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ ಮತ್ತು ಉಮೇಶಾಚಾರ್ಯ ಗೇರುಕಟ್ಟೆ ಸನ್ಮಾನ ಪತ್ರ ವಾಚಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್.ಪ್ರದೀಪ ಕುಮಾರ್ ಕಲ್ಕೂರ, ಮಹೇಶ್ ಮೋಟಾರ್ಸ್ ಮಾಲಕ ಎ.ಕೆ.ಜಯರಾಮ ಶೇಖ, ಯಕ್ಷಗಾನ ಸಂಘಟಕ ಮತ್ತು ಉದ್ಯಮಿ ಕರುಣಾಕರ ಶೆಟ್ಟಿ ಪಣಿಯೂರು ಮುಖ್ಯ ಅತಿಥಿಗಳಾಗಿದ್ದರು. ಟ್ರಸ್ಟ್ ಪದಾಧಿಕಾರಿಗಳಾದ ಅಳಿಕೆ ಚಂದ್ರಹಾಸ ಶೆಟ್ಟಿ, ಮಹಾಬಲ ರೈ ಬಜನಿಗುತ್ತು, ಮಹೇಶ್ ಶೆಟ್ಟಿ, ಉಷಾ ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ಅಳಿಕೆ ರಾಮಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾಪ್ರಸಾದ್ ರೈ ಸ್ವಾಗತಿಸಿದರು. ಟ್ರಸ್ಟಿ ಅಳಿಕೆ ಬಾಲಕೃಷ್ಣ ಶೆಟ್ಟಿ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಪ್ರಶಾಂತ ರೈ ಮುಂಡಾಳ ಮತ್ತು ಡಾ.ಪ್ರಖ್ಯಾತ್ ಶೆಟ್ಟಿ ಅಳಿಕೆ ಅವರ ಭಾಗವತಿಕೆಯಲ್ಲಿ 'ವಾಲಿ ಮೋಕ್ಷ' ಯಕ್ಷಗಾನ ತಾಳಮದ್ದಳೆ ಜರಗಿತು. ಡಾ.ಎಂ.ಪ್ರಭಾಕರ ಜೋಶಿ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಉಬರಡ್ಕ ಉಮೇಶ್ ಶೆಟ್ಟಿ, ಉಮೇಶ ಆಚಾರ್ಯ ಗೇರುಕಟ್ಟೆ ಮತ್ತು ಪೂವಪ್ಪ ಶೆಟ್ಟಿ ಅಳಿಕೆ ಅರ್ಥಧಾರಿಗಳಾಗಿದ್ದರು. ರೋಹಿತ್ ಉಚ್ಚಿಲ್, ಹರಿಶ್ಚಂದ್ರ ನಾಯಗ ಮಾಡೂರು ಮತ್ತು ಮಯೂರ್ ನಾಯಗ ಹಿಮ್ಮೇಳದಲ್ಲಿ ಸಹಕರಿಸಿದರು.

Pages