“ದೈವದ ಸಂಚಾರ” ಲೇಖಕರು: ನಿತಿನ್ ರೈ ಕುಕ್ಕುವಳ್ಳಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

“ದೈವದ ಸಂಚಾರ” ಲೇಖಕರು: ನಿತಿನ್ ರೈ ಕುಕ್ಕುವಳ್ಳಿ

Share This
BUNTS NEWS: ಹಿಂದಿನ ದಿನಗಳನ್ನ ನೆನೆದರೆ ಒಂದು ಕ್ಷಣ ನಾವು ಎಷ್ಟೊಂದು ಬದಲಾಗಿದ್ದೇವೆ ಎಂದು ಅನಿಸಿಬಿಡುತ್ತೆ. ನಮ್ಮ ಊರಿನ ಹಳೆಯ ನೆನಪುಗಳು, ನಮ್ಮ ಹಿರಿಯರ ಜೊತೆ ನಡೆದ ಕೆಲವು ಸಾಹಸಮಯ ಸನ್ನಿವೇಶಗಳು, ಇದನ್ನೆಲ್ಲಾ ನಾವು ಚಿಕ್ಕವರಿರುವಾಗ ನಮ್ಮ ಹಿರಿಯರು ಹೇಳುತ್ತಿದ್ದರು. ಆದರೆ ಇಂದಿನ ಬದಲಾದ ಜೀವನ ಶೈಲಿಯಲ್ಲಿ ಅಂತ ಕಥೆಗಳನ್ನ ಕೇಳುವವರು ಯಾರು, ಎಲ್ಲರು ವಾಟ್ಸಪ್, ಫೇಸ್ ಬುಕ್ ನಲ್ಲೆ ಪ್ರಪಂಚ ಪರ್ಯಟನೆಗೆ ಹೊರಟುಹೋಗಿದ್ದಾರೆ. ಚಂದಿರನನ್ನ ತೋರಿಸುತ್ತ ಕೈಯಲ್ಲೊಂದು ಬಂದೂಕು ಹಿಡಿದು ಕುಳಿತು ಅಜ್ಜ ಹೇಳಿದ ಅವರ ಕೆಲವೊಂದು ಸಾಹಸ ದೃಶ್ಯಗಳು ಇಂದಿಗೂ ಕಣ್ಣಮುಂದೆ ಬಂದಾಗ ಮೈ ಜುಮ್ಮೆನ್ನುತ್ತೆ.

ಅದೊಂದು ದಿನ ಅಜ್ಜ ದಟ್ಟ ಕಾಡಿನ ಮದ್ಯದಲ್ಲಿ ನಡೆದ ಘಟನೆಯೊಂದನ್ನ ವಿವರಿಸ ತೊಡಗಿದರು” ಎಂದಿನಂತೆ ನಾನು ಮನೆಯಿಂದ ರಾತ್ರಿ 10 ರ ಸುಮಾರಿಗೆ ಬೇಟೆಗೆ ಹೊರಡಲು ಸಿದ್ದನಾದೆ, ನನ್ನ ಸಹ ಬೇಟೆಗಾರನ ಆಗಮನದ ನಿರೀಕ್ಷೆಯಲ್ಲಿದ್ದೆ, ಎಲ್ಲರು ಬಂದಿದ್ದರು ಆದರೆ ಒಬ್ಬ ಬಂದಿರಲಿಲ್ಲ, ಯಾವತ್ತು ಆತ ಸರಿಯಾದ ಸಮಯಕ್ಕೆ ಬರುತ್ತಿದ್ದ, ಆದರೆ ಅವತ್ತು ಅದ್ಯಾಕೋ ತಡವಾಗಿತ್ತು, ತಡವಾಗಿ ಅಗಮಿಸಿದವನೇ ಮೊದಲು ಹೇಳಿದ ಮಾತು “ನಮ ಇನಿ ಬೋನ್ಟೆ ಗ್ ಪೋಪುನ ಬೊಡ್ಚಿ (ನಾವಿವತ್ತು ಬೇಟೆಗೆ ಹೋಗುದು ಬೇಡ) ಎಂದ. ನಾನು ಕೈಯಲ್ಲಿ ಬಂದೂಕು ಹಿಡಿದಾಗಿತ್ತು, ಒಮ್ಮೆ ಹಿಡಿದ ಬಂದೂಕನ್ನ ಕೆಳಗಿಡುವ ಪ್ರಶ್ನೆಯೇ ಇಲ್ಲ. ಒಬ್ಬನ ಮಾತು ಕೇಳಿ ಬೇಟೆಯನ್ನ ರದ್ದುಗೊಳಿಸಲು ನಾನು ಸಿದ್ದನಿರಲಿಲ್ಲ. ಆತನ ಹತ್ತಿರ ಕಾರಣವು ಕೇಳುವಷ್ಟು ತಾಳ್ಮೆ ನನ್ನಲ್ಲಿರಲಿಲ್ಲ, ಆಗಲೇ ತಡವಾಗಿತ್ತು. ನಾವು ಬೇಟೆಗೆ ಹೊರಡುವಾಗ ನಮ್ಮ ಕುಟುಂಬ ದೈವ ಕ್ಕೆ ಕೈ ಮುಗಿದು ಹೊರಡುದು ವಾಡಿಕೆ. ಎಂದಿನಂತೆ ಅವತ್ತು ಕೈ ಮುಗಿದು ಹೊರಟು ನಿಂತೆವು. ಬರಲೊಪ್ಪದ ಆತ ಕೂಡ ನಮ್ಮ ಜತೆ ಹೆಜ್ಜೆಯಿಡಲು ಪ್ರಾರಂಭಿಸಿದ.

ನಮ್ಮದು 6 ಜನರ ತಂಡ.3 ಬಂದೂಕುಗಳು ಇದ್ದವು, ನಮ್ಮ ಎಂದಿನ ದಾರಿಯಲ್ಲಿ ದಟ್ಟವಾದ ಕಾಡಿನ ಒಳಗಡೆ ಪ್ರವೇಶಿಸಿದೆವು. ಬೆಳದಿಂಗಳ ಬೆಳಕು ಇದ್ದುದರಿಂದ ದಾರಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ರಾತ್ರಿ ಸುಮಾರು 1 ಘಂಟೆಯಾಗಿರಬಹುದು ನಾವು ಅರಣ್ಯದ ಮದ್ಯಕ್ಕೆ ತಲುಪಿದೆವು. ಎಲ್ಲಾ ಕಡೆ ಮೌನ, ನಮ್ಮ ದೃಷ್ಟಿ ಬೇಟೆಯಾಡಲು ಯಾವುದಾದರು ಪ್ರಾಣಿ ಕಣ್ಣೆದುರು ಬರುತ್ತದೆಯೇ ಅನ್ನೋದರ ಮೇಲಿತ್ತು, ಒಂದು ಕ್ಷಣದಲ್ಲಿ ನಮ್ಮ ಕೆಲವೇ ದೂರದಲ್ಲಿ ಬಂದೂಕು ಸಿಡಿದ ಸದ್ದೊಂದು ಕೇಳಿಸಿತು. ಆಶ್ಚರ್ಯ ಅಂದ್ರೆ ಆ ಸದ್ದು ಕೇಳಿದ್ದು ನನಗೆ ಮಾತ್ರ, ನಾನು ನನ್ನ ಸಹ ಬೇಟೆಗಾರರ ಹತ್ತಿರ ಹೇಳಿದರು ಅವರು ನಂಬಲಿಲ್ಲ. ನಾನೇ ಅಂದುಕೊಂಡೆ ಇದು ನನ್ನ ಭ್ರಮೆಯಾಗಿರಬಹುದು ಎಂದು. ಹಾಗೆ ಸ್ವಲ್ಪ ಮುಂದೆ ಸಾಗಿದೆವು ಎದುರಿಗೆ ನನ್ನ ಹತ್ತೆಜ್ಜೆ ದೂರದಲ್ಲಿ ಯಾವುದೋ ಪ್ರಾಣಿ ತನ್ನ ಕಡೆಗೆ ನೋಡುತ್ತಿತ್ತು, ಅದರ ಕಣ್ಣಿನ ಹೊಳಪು ನೋಡಿದ ನಾನು ನೇರವಾಗಿ ನನ್ನ ಬಂದೂಕಿನ ಗುರಿಯನ್ನ ಅದರಕಡೆ ಇಟ್ಟೆ, ಸದ್ದು ಮಾಡಿದರೆ ಅದೆಲ್ಲಿ ಓಡಿ ಹೋಗುತ್ತೆ ಅಂದುಕೊಂಡು ಅದರ ಕಡೆಗೆ ಮಾತ್ರ ಗಮನ ಹರಿಸಿದೆ, ಸಹ ಬೇಟೆಗಾರರಿಗೆ ಯಾವುದೇ ಸುಳಿವು ನೀಡಲಿಲ್ಲ.

ಯಾವುದೇ ಪ್ರಾಣಿ ನಿಮ್ಮ ಸೂಕ್ಷ್ಮವಾದ ಟಾರ್ಚ್ ಬೆಳಕಿಗೆ ದೃಷ್ಟಿ ನೀಡಿದೆ ಅಂದ್ರೆ ಅದು ಇದ್ದಲ್ಲಿಂದ ಕದಡುವುದಿಲ್ಲ, ಆದರೆ ಆ ಪ್ರಾಣಿ ನನ್ನ ಬಂದೂಕು ನೋಡಿ ಹಿಂದೆ ಸರಿಯಲು ಪ್ರಾರಂಭಿಸಿತು, ನಾನು ಕೆಲವು ಹೆಜ್ಜೆ ಮುಂದೆ ಹೋದೆ ಆದ್ರೆ ಕ್ಷಣ ಮಾತ್ರದಲ್ಲಿ ಆ ಆಕರ್ಷಕ ಕಣ್ಣು ಕತ್ತಲೆಯಲ್ಲಿ ಮಾಯವಾಯಿತು. ಹಿಂದೆ ನೋಡಿದರೆ ಬರಿ ಕತ್ತಲು, ನನ್ನ ಸಹ ಬೇಟೆಗಾರರ ಸುಳಿವಿಲ್ಲ, ಒಬ್ಬಂಟಿಯಾದೆ, ದಾರಿ ತಪ್ಪಿದೆ ಅನ್ನೋದು ಸ್ಪಷ್ಟವಾಯಿತು.

ನಾನು ಮುಂದೆ ಸಾಗಲಿಲ್ಲ, ಅದೇ ನೇರದಲ್ಲಿ ಹಿಂದೆ ತಿರುಗಿ ಹೆಜ್ಜೆಯಿಡಲು ಆರಂಭಿಸಿದೆ, ನನ್ನ ಸಹ ಬೇಟೆಗಾರರ ಹುಡುಕಾಟ ಆ ದಟ್ಟ ಕಾಡಿನಲ್ಲಿ ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ, ನಾನು ನಡೆದಷ್ಟು ದಾರಿ ಹೋಗುತ್ತಿದೆಯೇ ಹೊರತು ಸ್ಪಷ್ಟವಾಗಿ ನಾನು ಎಲ್ಲಿ ಹೋಗುತ್ತಿದ್ದೇನೆ ಅನ್ನೋದೇ ಮನವರಿಕೆ ಯಾಗುತ್ತಿರಲಿಲ್ಲ. ಸ್ವಲ್ಪ ಮುಂದೆ ಸಾಗಿದಾಗ ಬಿಳಿ ವಸ್ತ್ರ ದ ಆಕೃತಿಯೊಂದು ನನ್ನ ಮುಂದೆ ನಡೆದುಕೊಂಡು ಹೋಗುತ್ತಿರುವುದನ್ನ ಗಮನಿಸಿದೆ, ಕಾಡಿನ ಮದ್ಯದಲ್ಲಿ ಬಿಳಿ ಆಕೃತಿ ಸಿಕ್ಕಿತು ಅಂದ್ರೆ ಅದು ಅಪಾಯದ ಮುನ್ಸೂಚನೆಯೇ. ಆದರು ನಾನು ಅಪಾಯವನ್ನ ಅರಿತೆ ಆ ಆಕೃತಿಯನ್ನ ನೋಡಿ ಕೂಗಿದೆ “ಅಣ್ಣ ಏರ್ ಉಂದು?(ಅಣ್ಣ ಯಾರು ನೀವು ?) ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೈಯಲ್ಲಿ ಬಂದೂಕು ಇರುವುದೇ ದೊಡ್ಡ ಧೈರ್ಯ. ಬಂದೂಕು ಕೈಯಲ್ಲಿ ಹಿಡಿದವನಿಗೆ ಆ ಕ್ಷಣದಲ್ಲಿ ಬಂದೂಕು ಎತ್ತುವಷ್ಟು ಶಕ್ತಿ ಇರಲಿಲ್ಲ, ನನ್ನ ಪಾದಗಳನ್ನ ಮನಸ್ಸು ಎಷ್ಟೇ ನಿಯಂತ್ರಿಸಿದರು ನನ್ನ ನಡಿಗೆ ಆ ಆಕೃತಿಯನ್ನ ಹಿಂಬಾಲಿಸತೊಡಗಿತು.

ಸರಿ ಸುಮಾರು 1 ಗಂಟೆ ನಾನು ಆ ಆಕೃತಿಯ ಹಿಂದೆ ನಡೆದುಬಂದೆ, ನನ್ನ ಜೀವನ ಇಂದಿಗೆ ಕೊನೆ ಅನ್ನೋದು ಸ್ಪಷ್ಟವಾಗಿತ್ತು, ಆದರೆ ನಾನು ಒಂದು ಕ್ಷಣ ನನ್ನ ಕುಟುಂಬ ದೈವವನ್ನ ನೆನೆದೆ, ಮುಂದೇನಾಗುತ್ತೆ ಅನ್ನೋದರ ನಿರೀಕ್ಷೆ ಕೂಡ ನನ್ನಲ್ಲಿ ಇರಲಿಲ್ಲ. ನನ್ನ ಮುಂದಿದ್ದ ಆಕೃತಿ ಒಂದು ಕಡೆ ನಿಂತಿತು, ನನ್ನಿಂದ ಕೆಲವೇ ಹೆಜ್ಜೆಗಳ ದೂರದಲ್ಲಿ. ಯಾರೋ ಹೇಳಿದ ಮಾತು ಈ ಪ್ರೆತಾತ್ಮಗಳನ್ನ ಒಂದು ನಿಮಿಷ ಕಣ್ಣ ರೆಪ್ಪೆ ಮುಚ್ಚದೆ ಗಮನಿಸಿದರೆ ಅದರ ಶಕ್ತಿಯನ್ನ ಗುರುತಿಸಬಹುದಂತೆ. ಹಾಗೆ ದೃಷ್ಟಿ ಹರಿಸಿ ಆ ಆಕೃತಿಯನ್ನ ನೋಡಿದೆ ಕೆಲವೇ ಕ್ಷಣದಲ್ಲಿ ಆ ಆಕೃತಿ ಒಂದು ಮರದ ಎತ್ತರದಷ್ಟು ದೊಡ್ಡದಾಗಿ ಕಾಣಿಸಿಕೊಂಡಿತು. ಕಣ್ಣ ರೆಪ್ಪೆ ಮುಚ್ಚಿ ಬಿಡುವಷ್ಟರಲ್ಲಿ ಮತ್ತೆ ಅದು ಅದರ ಮೊದಲ ರೂಪದಲ್ಲಿತ್ತು. ಬಂದೂಕು ಎತ್ತದಷ್ಟು ಶಕ್ತಿಯಿಲ್ಲದ ಕೈ, ಮುಂದೆ ಎಲ್ಲಾ ಮುಗಿದೇ ಬಿಡ್ತು ಅಂದುಕೊಂಡೆ. ಆ ಆಕೃತಿ ನನ್ನ ಕಡೆಗೆ ಬರಲು ಆರಂಭಿಸಿತು. ಎದೆ ನಡುಕ ಮತ್ತಷ್ಟು ಜೋರಾಯಿತು, ಇನ್ನು ಕಾಪಾಡುದಿದ್ದರೆ ನಾನು ನಂಬುವ ನನ್ನ ದೈವ ಮಾತ್ರ ಅಂದುಕೊಂಡೆ. ಆ ಆಕೃತಿ ಮತ್ತಷ್ಟು ಹತ್ತಿರವಾಗ ತೊಡಗಿತು, ಆಗಲೇ ನನ್ನ ಹಿಂದಿನಿಂದ ಕೇಳಿ ಬಂದದ್ದೆ “ಗಗ್ಗರ”ದ ಸದ್ದು(ದೈವದ ಗೆಜ್ಜೆ ಸದ್ದು ). ಆ ಸದ್ದು ನನ್ನನ್ನ ದಾಟಿ ಆ ಆಕೃತಿಯ ಕಡೆಗೆ ಹೋಯಿತು. ಆ ಆಕೃತಿ ಹಿಂದೆ ಹಿಂದೆ ಸರಿಯಲು ಪ್ರಾರಂಭಿಸಿತು ಕತ್ತಲೆಯಲ್ಲಿ ಕಣ್ಮರೆಯಾದ ಆ ಆಕೃತಿ ಅದೃಶ್ಯವಾಯಿತು. ಏನು ನಡೆಯುತ್ತಿದೆ ಅನ್ನೋದನ್ನ ಊಹಿಸಲು ಅಸಾಧ್ಯವಾದ ಕ್ಷಣವಾಗಿತ್ತು. ಕೆಲವೇ ನಿಮಿಷದಲ್ಲಿ ದೂರದಲ್ಲಿ ಕರ್ಕಶ ಧ್ವನಿಯೊಂದು ಚಿರಾಡುವ ರೀತಿಯಲ್ಲಿ ಕೇಳಿಸಿತು. ನಂತರ ನೀರಸ ಮೌನ, ನಾನು ಎಲ್ಲಿದ್ದಿನಿ ಅನ್ನೋದು ನಂಗೆ ತಿಳಿಯುತ್ತಿರಲಿಲ್ಲ, ನಿಂತಲ್ಲೇ ನಿಂತೇ, ಕೆಲವೇ ಕ್ಷಣದಲ್ಲಿ ಮತ್ತೆ ಗಗ್ಗರದ ಸದ್ದು ನನ್ನ ಮುಂದೆ ಸಂಚರಿಸುವುದು ಕೇಳ ತೊಡಗಿತು, ದೈವ ವನ್ನ ನಂಬುವ ನನಗೆ ಅದನ್ನ ಹಿಂಬಾಲಿಸುವುದು ಹೆದರಿಕೆ ತರಲಿಲ್ಲ. ನಾನು ಆ ಗಗ್ಗರದ ಸದ್ದನ್ನ ಹಿಂಬಾಲಿಸಿದೆ, ಸರಿ ಸುಮಾರು 4 ಘಂಟೆಯಾಗಿರಬಹುದು ಒಂದು ಕಡೆ ತಲುಪಿದ ಆ ಗಗ್ಗರ ದ ಸದ್ದು ಮಾಯವಾಯಿತು. ಅಲ್ಲೇ ಹತ್ತಿರದಲ್ಲಿ ನನ್ನ ಸಹ ಬೇಟೆಗಾರರು ಇರುವುದನ್ನ ಗಮನಿಸಿದೆ, ಅವರು ನನ್ನನ್ನ ಹುಡುಕಿ ಹುಡುಕಿ ಸುಸ್ತಾಗಿದ್ದರು. ಅವರಿಗೆ ದಾರಿ ತಪ್ಪಿದ ವಿಚಾರವಷ್ಟೇ ತಿಳಿಸಿದೆ. ಮುಂದೆ ಸಾಗುತ್ತ ಮನೆಯ ದಾರಿ ಹಿಡಿದೆವು.

ಮರುದಿನ ಬೇಟೆಗೆ ಹೊರಡುವಾಗ ನಿರಾಕರಿಸಿದ ವ್ಯಕ್ತಿಯ ಹತ್ತಿರ ಕಾರಣ ಕೇಳಿದೆ, ಆಗ ಆತ ಹೇಳಿದ ಕಾರಣ ನೋಡಿ ಒಂದು ಕ್ಷಣ ದಿಗ್ಬ್ರಾಂತ ನಾದೆ. ಆತ ನಮ್ಮ ಮನೆಯ ಕಡೆಗೆ ಬರುವಾಗ ನಾಯಿಯೊಂದು ದಾರಿ ಯಲ್ಲಿ ಅಡ್ಡವಾಗಿ ನಿಂತಿತ್ತಂತೆ ಎಷ್ಟೇ ಆ ನಾಯಿಯನ್ನ ದಾರಿಯಿಂದ ಸರಿಸಲು ಪ್ರಯತ್ನ ಪಟ್ಟರು ಅದು ಆತನಿಗೆ ದಾರಿ ಬಿಟ್ಟು ಕೊಟ್ಟಿರಲಿಲ್ಲವಂತೆ. ಆಗಲೇ ಆತನಿಗೆ ಅಪಾಯದ ಮುನ್ಸೂಚನೆ ದೊರೆತಿತ್ತಂತೆ. ಇದನ್ನೆಲ್ಲಾ ಕೇಳುವಾಗ ನನ್ನ ತಾಯಿ ನನ್ನ ಜತೆಗಿದ್ದರು ಆಗ ಅವರು ಹೇಳಿದ ಮಾತು ಕೇಳಿ ನಾನು ಮತ್ತಷ್ಟು ಚಕಿತನಾದೆ, ರಾತ್ರಿ 3 ರ ಸಮಯಕ್ಕೆ ದೈವದ ಗುಡಿಯಿಂದ ಗಗ್ಗರ ದ ಸದ್ದು ಗುಡಿಯಿಂದ ಸವಾರಿ ಹೊರಟ ರೀತಿ ಅವರಿಗೆ ಕೇಳಿಸಿತ್ತಂತೆ, ಆ ಹೊತ್ತಿಗೆ ಸರಿಯಾಗಿ ನಾನು ಕಾಡಿನಲ್ಲಿ ದಾರಿ ತಪ್ಪಿದ್ದೆ. ನನ್ನ ದೈವ ನನ್ನನ್ನ ಆವತ್ತು ಕಾಪಾಡಿದ್ದು ಸ್ಪಷ್ಟವಾಗಿತ್ತು.  ಬರಹ: ನಿತಿನ್ ರೈ ಕುಕ್ಕುವಳ್ಳಿ, [ಚಿತ್ರ ಕೃಪೆ: ಇಂಟರ್ ನೆಟ್] 

Pages