ಮುಪ್ಪಿನ ಜೀವಗಳಿಗೆ ಆಸರೆ " ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ” - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮುಪ್ಪಿನ ಜೀವಗಳಿಗೆ ಆಸರೆ " ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ”

Share This
ಬರಹ: ರವಿರಾಜ್ ಶೆಟ್ಟಿ ಕಟೀಲು 
ಬಂಟ್ಸ್ ನ್ಯೂಸ್, ಬಂಟ್ವಾಳ: ಇಂದಿನ ಕಾಲಘಟ್ಟದಲ್ಲಿ ಬದಲಾಗುತ್ತಿರುವ ಜಗತ್ತಿಗೆ ತಕ್ಕಂತೆ ಸಂಬಂಧಗಳು, ಜೀವನ ಶೈಲಿಗಳು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ಹೆತ್ತವರು ಮಾಡಿಟ್ಟ ಆಸ್ತಿ ಕಾಪಾಡುವಷ್ಟು ಕಾಳಜಿಯಿರುವ ಮಕ್ಕಳಿಗೆ ತಮ್ಮ ವೃದ್ಧಾಪ್ಯ ವಯಸ್ಸಿನ ಹೆತ್ತವರನ್ನು ಸಾಕಲು ಮನಸ್ಸಿಲ್ಲ. ಇಂತಹ ಹತ್ತು ಹಲವು ಕಾರಣಗಳಿಂದಾಗಿ ಯಾರಿಗೂ ಬೇಡವಾಗಿರುವ ವೃದ್ಧ ಜೀವಗಳಿಗೆ ಆಶ್ರಯ ಚೇತನವಾಗಿ ಕಾಂತಾಡಿಗುತ್ತು ಹರೀಶ್ ಪೆರ್ಗಡೆ ಅವರು ಕಳೆದ ಏಳು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವುದು ವಿಶೇಷವಾಗಿದೆ.

ಅಣ್ಣ-ತಾಯಿ ನೆನಪಿಗೆ ಶ್ರೀ ಮಾತಾ ಲಕ್ಷಣಿ ವೃದ್ದಾಶ್ರಮ:ಅನಿರೀಕ್ಷಿತ ಘಟನೆಯೊಂದರಲ್ಲಿ ಹರೀಶ್ ಪೆರ್ಗಡೆ ಅವರು ತಮ್ಮ ತಾಯಿ ಹಾಗೂ ಸಹೋದರನನ್ನು ಕಳೆದುಕೊಂಡ ನೋವಿನ ಸಂದರ್ಭದಲ್ಲೇ ಅವರ ನೆನಪಿಗಾಗಿ ಅಶಕ್ತ ವಯೋವೃದ್ಧರಿಗೆ ಸೇವೆ ಸಲ್ಲಿಸಲು ನಿರ್ಧಾರ ಮಾಡಿದರು. ಹಿನ್ನೆಲೆಯಲ್ಲಿ ಹರೀಶ್ ಪೆರ್ಗಡೆ ಅವರು ಬಂಟ್ವಾಳ ತಾಲೂಕಿನ ಮೇರಮಜಲಿನ ಹಚ್ಚಹಸುರಿನ ಪ್ರಕೃತಿಯ ಲಕ್ಷಣಿ ನಗರದಲ್ಲಿ ತನ್ನ ತಾಯಿ ಹಾಗೂ ಅಣ್ಣನ ನೆನಪಿಗಾಗಿ ಶ್ರೀ ಮಾತಾ ಲಕ್ಷಣಿ ವೃದ್ಧಾಶ್ರಮವನ್ನು ಮಾ.7, 2008ರಂದು ನಿರ್ಮಾಣ ಮಾಡಿದರು.
ಹರೀಶ್ ಪೆರ್ಗಡೆ ಅವರು ವಯೋವೃದ್ದರಿಗೆ ಶಾಂತಿಯ ಬದುಕನ್ನು ಕಲ್ಪಿಸಲು ವೃದ್ಧಾಶ್ರಮ ಪ್ರಾರಂಭಿಸಿದಾಗ ಅಲ್ಲಿ ಕೇವಲ ಬೆರಳೆಣಿಕೆಯಷ್ಟು ವಯೋವೃದ್ದರಿದ್ದರು. ಆದರೆ ಇಂದು ಶ್ರೀ ಮಾತಾ ಲಕ್ಷಣಿ ಶಾಂತಿಧಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ವಯೋವೃದ್ದರಿದ್ದು ಶಾಂತಿಧಾಮದಲ್ಲಿ ನೆಮ್ಮದಿಯ ಬದುಕನ್ನು ನಡೆಸುತ್ತಿದ್ದಾರೆ. ಶಾಂತಿಧಾಮವು ದಿ. ಲೋಕೇಶ್ ಪೆರ್ಗಡೆ ಫೌಂಡೇಶನ್ ಟ್ರಸ್ಟ್ (ರಿ) ವತಿಯಿಂದ ನಡೆಯುತ್ತಿದ್ದು ಇಲ್ಲಿ ಯಾವುದೇ ಧರ್ಮ, ಜಾತಿ, ಕುಲವೆಂಬ ಭೇದವಿಲ್ಲದೇ ಉಚಿತ ಸೇವೆಯನ್ನು ಯಾವುದೇ ಫಲಾಫೇಕ್ಷೆಯಿಲ್ಲದೆ ಹರೀಶ್ ಪೆರ್ಗಡೆ ಅವರು ನೀಡುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಔಷದೋಪಚಾರ, ಅಂತಿಮ ಯಾತ್ರೆಯನ್ನು ಸ್ವತಃ ತಾವೇ ಮಾಡುತ್ತಾರೆ: ಶ್ರೀ ಮಾತಾ ಲಕ್ಷಣಿ ಶಾಂತಿಧಾಮದ ವೃದ್ದಾಶ್ರಮದಲ್ಲಿ ವಯೋವೃದ್ಧರನ್ನು ಸ್ವತಃ ಹರೀಶ್ ಪೆರ್ಗಡೆ ಅವರೇ ಖುದ್ದು ಮುತುವರ್ಜಿಯಿಂದ ನೋಡಿಕೊಳ್ಳುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷ. ನಿಲ್ಲಲು, ಕುಳಿತುಕೊಳ್ಳಲಾಗದ ಮಲಗಿದ್ದಲ್ಲಿಯೇ ಇರುವ ವಯೋವೃದ್ದರಿಗೆ ಹರೀಶ್ ಅವರೇ ಸ್ವತಃ ತಮ್ಮ ಕೈಯಾರ ಊಟ ಮಾಡಿಸುತ್ತಾರೆ. ದೇಹದಲ್ಲಿ ಗಾಯವಾಗಿ ಹುಣ್ಣಾಗಿದ್ದರೂ ಯಾವುದೇ ಮುಲಾಜಿಲ್ಲದೇ ಗಾಯಗಳಿಗೆ ಆರೈಕೆ ಮಾಡುತ್ತಾರೆ. ಅಲ್ಲದೆ ಆಶ್ರಮದಲ್ಲಿ ನಿರ್ಗತಿಕ ವಯೋವೃದ್ದರು ಮರಣಿಸಿದರೆ ಅವರ ಅಂತಿಮ ಯಾತ್ರೆಯನ್ನು ಗೌರವಯುತವಾಗಿ ತಾವೇ ಮುಂದೆ ನಿಂತು ಮಾಡುತ್ತಾರೆ. ಹೀಗೆ ಹರೀಶ್ ಪೆರ್ಗಡೆ ಅವರ ನಿಸ್ವಾರ್ಥ ಸೇವೆಯನ್ನು ಪಟ್ಟಿ ಮಾಡಿದಷ್ಟು ದೊಡ್ಡದಾಗುತ್ತಾ ಸಾಗುತ್ತದೆ.

ಹರೀಶ್ ಪೆರ್ಗಡೆ ಅವರ ಕುರಿತು ಒಂದಿಷ್ಟು:ದಕ್ಷಿಣ ಕನ್ನಡ ಜಿಲ್ಲೆಯ ಸಜಿಪ ಮಾಗಣೆಯ ಪ್ರತಿಷ್ಠಿತ ಕಾಂತಾಡಿಗುತ್ತು ಮನೆತನದ ಹರೀಶ್ ಪೆರ್ಗಡೆ ಅವರು ಪೆರ್ನೆ ನಾರಾಯಣ ಪೆರ್ಗಡೆ ಹಾಗೂ ಲಕ್ಷಣಿ ಪೆರ್ಗಡೆ ಅವರ ನಾಲ್ವರು ಮಕ್ಕಳಲ್ಲಿ ಒಬ್ಬರು. 1977ರಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ - ಫ್ರೌಢ ವಿದ್ಯಾಭ್ಯಾಸವನ್ನು ಕಡೇ ಶಿವಾಲಯ, ಉಪ್ಪಿನಂಗಡಿ ಕಾಲೇಜು, ಮಾಣಿ ಕರ್ನಾಟಕ ಫ್ರೌಡ ಶಾಲೆ ಮುಗಿಸಿದರೆ, ಧಾರವಾಡದ ಎಸ್.ಡಿ.ಎಂ ಕಾಲೇಜಿನಲ್ಲಿ ಇಂಜಿನಿಯರಂಗ್ ಕಾಲೇಜಿನಲ್ಲಿ ಬಿ. ಪದವಿಯನ್ನು ಪಡೆದಿದ್ದಾರೆ.ಬಾಲ್ಯದಿಂದಲೂ ಸಮಾಜಸೇವೆಯ ಬಗ್ಗೆ ಒಲವು ಹೊಂದಿದ್ದ ಹರೀಶ್ ಪೆರ್ಗಡೆ ಅವರು ಉತ್ತಮ ರಂಗಕಲಾವಿದರೂ ಹೌದು. ಕನ್ನಡದ ಆಕಸ್ಮಿಕ, ಅನುರಾಗದ ಅಲೆಗಳು, ಸಂಸಾರ ಸಂಗೀತ ಚಲನಚಿತ್ರದಲ್ಲಿ ಹಾಗೂ ದೂರದರ್ಶನದ ಅಂದಿನ ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು. ಅಲ್ಲದೇ ತಮ್ಮ ಯುವ ವಯಸ್ಸಿನಲ್ಲಿ ತುಳು, ಕನ್ನಡ ನಾಟಕಗಳಲ್ಲೂ ಪಾತ್ರ ನಿರ್ವಹಿಸಿದ್ದರು.
ಕಾಂತಾಡಿಗುತ್ತು ಹರೀಶ್ ಪೆರ್ಗಡೆ ಅವರ ನಿಸ್ವಾರ್ಥ ಸೇವೆಗಾಗಿ ಸ್ಥಳೀಯವಲ್ಲದೇ ದೂರದ ಊರಿನ ಹಲವು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದಾರೆ. ತುಳು ಕೂಟ ಕುವೈಟ್ ಆಯೋಜಿಸಿದ್ದ ವಿಶ್ವ ತುಳು ಸಮ್ಮೇಳನ 2013ರಲ್ಲಿ ಸನ್ಮಾನ, ಕುವೈಟ್ ಬಂಟರ ಸಂಘದಿಂದ ಸನ್ಮಾನ, ಮುಂಬೈಯ ವರ್ಲಿಯ ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನಿಂದ ಸಮ್ಮಾನ, ಇತ್ತಿಚೀಗಷ್ಟೇ ದೂರದ ಥಾಣೆಯ ಕಲ್ವಾ ಫ್ರೆಂಡ್ಸ್ ಇನ್ನಿತರ ಹಲವು ಕಡೆಗಳಲ್ಲಿ ಹರೀಶ್ ಪೆರ್ಗಡೆ ಸನ್ಮಾನಿತರಾಗಿದ್ದಾರೆ.

ದುಂದು ವೆಚ್ಚದ ಆಡಂಬರದಲ್ಲಿ ಸ್ವಲ್ಪ ಪಾಲು ಇಲ್ಲಿಗೂ ನೀಡಿ: ಒಂದು ಅಂದಾಜಿನ ಪ್ರಕಾರ ಶ್ರೀ ಮಾತಾ ಲಕ್ಷಣಿ ಶಾಂತಿಧಾಮದ ಮಾಸಿಕ ಖರ್ಚು 1 ಲಕ್ಷಕ್ಕೂ ಹೆಚ್ಚು ಎನ್ನಲಾಗಿದೆ. ಅಲ್ಲದೇ ಕಳೆದ 7 ವರ್ಷಗಳಿಂದ ವಯೋವೃದ್ಧರಿಗೆ ಉತ್ತಮ ಮೆಡಿಸಿಸ್ ವ್ಯವಸ್ಥೆ, ವಾರದ ಏಳು ದಿನವೂ ಮಾಂಸಹಾರಿ ಊಟವನ್ನು ಶಾಂತಿಧಾಮ ನೀಡುತ್ತಿದೆ. ಇಷ್ಟೊಂದು ಖರ್ಚಿನಲ್ಲಿ ನಡೆಯುತ್ತಿರುವ ಹರೀಶ್ ಪೆರ್ಗಡೆಯವರ ನಿಸ್ವಾರ್ಥ ಸೇವೆಗೆ ನಾವೂ ಹೆಗಲು ನೀಡಬಹುದು. ನಮ್ಮ ದುಂದು ವೆಚ್ಚದ ಆಡಂಬರದಲ್ಲಿ ಸ್ವಲ್ಪ ಭಾಗವನ್ನು ಶಾಂತಿಧಾಮಕ್ಕೆ ನೀಡುವ ಮೂಲಕ ಹರೀಶ್ ಪೆರ್ಗಡೆಯವರ ಪುಣ್ಯದ ಕಾರ್ಯದಲ್ಲಿ ನಾವೂ ಕೈ ಜೋಡಿಸ ಬಹುದಾಗಿದೆ. ವರ್ಷಕ್ಕೊಂದು ಭಾರಿ ಬರುವ ನಮ್ಮ ಜನ್ಮದಿನ ಪ್ರಯುಕ್ತ ಒಂದು ದಿನದ ಆಶ್ರಮದ ಊಟದ ಖರ್ಚು 2,000ರೂ ನೀಡಬಹುದಾಗಿದೆ.

ಶಾಂತಿಧಾಮಕ್ಕೆ ಹೀಗೆ ಬನ್ನಿ : ಅಶಕ್ತ ವಯೋವೃದ್ಧರಿಗೆ ಆಸರೆಯಾಗಿರುವ ಶ್ರೀ ಮಾತಾ ಲಕ್ಷಣಿ ಶಾಂತಿಧಾಮವು ಬಂಟ್ವಾಳ ತಾಲೂಕಿನ ಮೇರಮಜಲು ಗ್ರಾಮದ ಹಚ್ಚಹಸುರಿನ ಲಕ್ಷಣಿ ನಗರದಲ್ಲಿದೆ. ಆಶ್ರಮವು ಮಂಗಳೂರಿನಿಂದ ಸುಮಾರು 12ಕಿ.ಮೀ ದೂರದಲ್ಲಿದೆ. ಮಂಗಳೂರಿನಿಂದ ಬೆಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಾಗಿ ಅರ್ಕುಳದಿಂದ ಮತ್ತೆ 3ಕಿ.ಮೀ ಪ್ರಯಾಣಿಸಿದರೆ ಶಾಂತಿಧಾಮವನ್ನು ತಲುಪಬಹುದು. ಅಲ್ಲದೇ ಕುಲಶೇಖರ ನೀರುಮಾರ್ಗ ದಾರಿಯಲ್ಲಿಯೂ ಸಂಚರಿಸಿ ಮೇರಮಜಲಿನ ಶಾಂತಿಧಾಮವನ್ನು ತಲುಪಬಹುದು. ಆಶ್ರಮ ಸಂಪರ್ಕಿಸುವ ವಿಳಾಸ:ಶ್ರೀ ಮಾತಾ ಲಕ್ಷಣಿ ಶಾಂತಿಧಾಮ, ಲಕ್ಷಣಿ ನಗರ, ಮೇರಮಜಲು, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ.

ಬರಹ: ರವಿರಾಜ್ ಶೆಟ್ಟಿ ಕಟೀಲು www.buntsnews.com

Pages